More

    ಈಡೇರದ ಮರುನಿರ್ಮಾಣ ಭರವಸೆ, ಹೆದ್ದಾರಿ ವಿಸ್ತರಣೆಗೆ ತಂಗುದಾಣ, ರಂಗವೇದಿಕೆ ಧ್ವಂಸ ಪಿಡಬ್ಲುಡಿ ಅಧಿಕಾರಿಗಳ ನಿರಾಸಕ್ತಿ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಹೆದ್ದಾರಿ ವಿಸ್ತರಣೆ ಸಂದರ್ಭ ಕೆಡವಿದ ಪ್ರಯಾಣಿಕರ ತಂಗುದಾಣ ಹಾಗೂ ರಂಗವೇದಿಕೆ ಮರುನಿರ್ಮಿಸುವುದಾಗಿ ಲೋಕೋಪಯೋಗಿ ಇಲಾಖೆ ನೀಡಿದ ಭರವಸೆ ಈವರೆಗೂ ಈಡೇರಿಲ್ಲ. ಅಧಿಕಾರಿಗಳು ಈ ಬಗ್ಗೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮುಂಡ್ಕೂರು ವ್ಯಾಪ್ತಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಮಣಿಪಾಲ ಆತ್ರಾಡಿಯಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಕಾಮಗಾರಿಯನ್ನು ಅಲ್ಲಲ್ಲಿ ಕೈಗೆತ್ತಿಕೊಂಡಿದ್ದು, ರಸ್ತೆ ವಿಸ್ತರಣೆ ಸಂದರ್ಭ ಹಲವಾರು ಬಸ್‌ಸ್ಟಾೃಂಡ್ ಹಾಗೂ ರಸ್ತೆ ಬದಿಯಲ್ಲಿದ್ದ ರಂಗವೇದಿಕೆ ನೆಲಸಮಗೊಂಡಿದೆ. ಕಾಮಗಾರಿ ಮುಗಿದ ಬಳಿಕ ಅವೆಲ್ಲವೂ ಮರುನಿರ್ಮಾಣಗೊಳ್ಳುತ್ತದೆ ಎನ್ನುವ ಭರವಸೆ ಇಟ್ಟುಕೊಂಡಿದ್ದ ಜನತೆಗೆ ನಿರಾಸೆಯಾಗಿದೆ.

    ಸಂಕಲಕರಿಯದಲ್ಲಿ ಮುಂಡ್ಕೂರು ದೊಡ್ಡಮನೆ ಬಳಿ ದೊಡ್ಡಮನೆ ಕುಟುಂಬಿಕರ ಪ್ರಾಯೋಜಕತ್ವದ ಎರಡು ಬಸ್ ತಂಗುದಾಣಗಳು ಹೆದ್ದಾರಿ ಕಾಮಗಾರಿ ಸಂದರ್ಭ ನೆಲಸಮಗೊಂಡು ಎರಡು ವರ್ಷ ಕಳೆದರೂ ಮರುನಿರ್ಮಿಸಿಲ್ಲ. ಸುಂದರ ತಂಗುದಾಣ ನಿರ್ಮಿಸಿಕೊಡುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದರೂ ಈಡೇರಿಸಿಲ್ಲ.

    ತುಂಡು ಕಾಮಗಾರಿ

    ಆತ್ರಾಡಿಯಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾದರೂ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆ ಹಾಗೂ ನೂತನ ರಸ್ತೆ ನಿರ್ಮಿಸುವಲ್ಲಿ ಸರ್ಕಾರ ಹಾಗೂ ಇಲಾಖೆ ಮನಸ್ಸು ಮಾಡುತ್ತಿಲ್ಲ. ಹಲವು ವರ್ಷಗಳಿಂದ ಈ ಹೆದ್ದಾರಿಯೂ ವಿಸ್ತರಣೆಯಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದ್ದು, ಎರಡು ವರ್ಷಗಳಿಂದ ಅಲ್ಲಲ್ಲಿ ತುಂಡು ತುಂಡು ಕಾಮಗಾರಿ ನಡೆಯುತ್ತಿದೆ. ಒಂದೆಡೆ ಪಿಲಾರುಖಾನದಿಂದ ಜಂತ್ರವರೆಗೆ ಹಾಗೂ ಜಂತ್ರದಿಂದ ಪಡುಬೆಳ್ಮಣ್ ತಿರುವು ರಸ್ತೆವರೆಗೆ ಹಾಗೂ ಬೆಳ್ಮಣ್ ಚರ್ಚ್‌ನಿಂದ ಸಂಕಲಕರಿಯ ಶಾಂಭವಿ ನದಿವರೆಗೆ(ಮುಂಡ್ಕೂರು ಪೇಟೆ ಹೊರತುಪಡಿಸಿ) ಹಾಗೂ ದ.ಕ. ಜಿಲ್ಲೆಯ ಮೂರು ಕಾವೇರಿಯಿಂದ ದಾಮಸ್‌ಕಟ್ಟೆವರೆಗೆ ಸುಂದರವಾಗಿ ರಸ್ತೆ ವಿಸ್ತರಣೆ ನಡೆದಿದ್ದು, ಇನ್ನೂ ಹಲವು ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ನಡೆಯಬೇಕಾಗಿದೆ.

    ತಗಡು ಶೀಟ್ ಗತಿ

    ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಬಳಿಯ ತಂಗುದಾಣವನ್ನೂ ಕಾಮಗಾರಿ ಸಂದರ್ಭ ಕೆಡವಲಾಗಿದ್ದು, ಪ್ರಯಾಣಿಕರು ಮಳೆ-ಬಿಸಿಲಿಗೆ ರಸ್ತೆ ಬದಿ ನಿಂತು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಹಳೇ ತಂಗುದಾಣ ಇದ್ದ ಸ್ಥಳದಲ್ಲೇ ತಗಡು ಶೀಟ್ ಅಳವಡಿಸಿ ಚಿಕ್ಕದಾದ ತಾತ್ಕಾಲಿಕ ತಂಗುದಾಣ ನಿರ್ಮಿಸಿತ್ತು. ಆದರೆ ಮಳೆ ಸಂದರ್ಭ ಈ ತಂಗುದಾಣದಲ್ಲಿ ನಿಲ್ಲುವುದು ಅಸಾಧ್ಯ.

    ಇಕ್ಕಟ್ಟಾದ ಮುಂಡ್ಕೂರು ಪೇಟೆ


    ಬೆಳ್ಮಣ್‌ನಿಂದ ಸಂಕಲಕರಿಯದವರೆಗೆ ಅತ್ರಾಡಿ-ಬಜ್ಪೆ ಹೆದ್ದಾರಿ ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತಾದರೂ, ಕಾಮಗಾರಿ ಅಲ್ಲಲ್ಲಿ ಮಾತ್ರ ನಡೆದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂಡ್ಕೂರಿನ ಜೈನಪೇಟೆ ತಿರುವಿನಿಂದ ಪಡಿತ್ತಾರು ಮೋರಿಯವರೆಗೆ ರಸ್ತೆ ಇಕ್ಕಟ್ಟಾಗಿದ್ದು, ಒಂದು ವಾಹನ ಮಾತ್ರ ಸಂಚರಿಸಲು ಯೋಗ್ಯವಾಗಿದೆ. ಈ ಭಾಗದ ಕಾಮಗಾರಿಗೆ ಈವರೆಗೆ ಟೆಂಡರ್ ಕೂಡ ಕರೆದಿಲ್ಲ. ರಸ್ತೆ ಇಕ್ಕೆಲಗಳಲ್ಲಿ ಅಂಗಡಿ, ಮುಂಗಟ್ಟುಗಳು, ಮನೆಗಳಿದ್ದರೂ ವಿಸ್ತರಣೆ ಮಾತೇ ಕೇಳಿಬರುತ್ತಿಲ್ಲ. ಇದು ಸುಂದರ ಹೆದ್ದಾರಿಗೊಂದು ಕಪ್ಪು ಚುಕ್ಕೆ ಇಟ್ಟಂತಾಗಿದೆ.

    ಸಂಕಲಕರಿಯ ರಂಗವೇದಿಕೆ ನೆಲಸಮ


    ಸಂಕಲಕರಿಯದ 48 ವರ್ಷಗಳ ಇತಿಹಾಸವುಳ್ಳ ವಿಜಯ ಯುವಕ ಸಂಘದ ರಂಗವೇದಿಕೆಯನ್ನೂ ಹೆದ್ದಾರಿ ಕಾಮಗಾರಿ ಸಂದರ್ಭ ಕೆಡವಲಾಗಿದ್ದು, ಇನ್ನೂ ಬದಲಿ ವ್ಯವಸ್ಥೆ ಕಲ್ಪಿಸಿಲ್ಲ. 20 ವರ್ಷದ ಹಿಂದೆ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಲಾದ ಈ ರಂಗವೇದಿಕೆಯ ಪಳೆಯುಳಿಕೆಯೂ ಉಳಿದಿಲ್ಲ.

    ಮುಂಡ್ಕೂರು ಪೇಟೆಯ ರಸ್ತೆ ವಿಸ್ತರಣೆ ಬಗ್ಗೆ ಈವರೆಗೂ ಯಾವುದೇ ಮಾಹಿತಿಯಿಲ್ಲ. ಇಲಾಖೆ ಮೂಲಕ ಬಸ್ ತಂಗುದಾಣ ನಿರ್ಮಿಸಿಕೊಡಲು ಅನುದಾನವಿಲ್ಲ. ಬದಲಾಗಿ ದಾನಿಗಳ ಮೂಲಕ ನಿರ್ಮಿಸಿಕೊಡಲು ಶಾಸಕರು ಹಾಗೂ ಇತರ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಪ್ರಯತ್ನಿಸಿದರೆ ಸಂಘಟಕರಿಗೆ ಪೂರಕ ನೆರವು ನೀಡಲಾಗುವುದು.
    -ಮಿಥುನ್, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ

    ಧರೆಗುರುಳಿದ ಬಸ್ ತಂಗುದಾಣಗಳ ಮರು ನಿರ್ಮಾಣ ಇನ್ನೂ ನಡೆದಿಲ್ಲ. ಅತ್ರಾಡಿ-ಬಜ್ಪೆ ಹೆದ್ದಾರಿ ಕಾಮಗಾರಿ ಸುಂದರಗೊಂಡಿದ್ದರೂ ಕೆಲವೊಂದು ನ್ಯೂನತೆಗಳು ಕಪ್ಪು ಚುಕ್ಕೆಯಾಗಿದೆ, ಮುಂಡ್ಕೂರು ಪೇಟೆಯ ಬಳಿ ರಸ್ತೆ ವಿಸ್ತರಣೆಯಾಗಬೇಕು.
    -ಪ್ರಭಾಕರ ಶೆಟ್ಟಿ ಮುಂಡ್ಕೂರು, ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts