ಸಾಗರ: ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಡೆಂಘೆ ಬರುವುದಿಲ್ಲ. ಡೆಂಘೆ ಜ್ವರದ ಬಗ್ಗೆ ಮುಂಜಾಗ್ರತೆ ಇರಬೇಕು. ಜ್ವರ ಲಕ್ಷಣ ಕಂಡುಬಂದಲ್ಲಿ ವೈದ್ಯರ ಬಳಿ ತೋರಿಸಿಕೊಳ್ಳಬೇಕು ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಶಿವಪ್ಪನಾಯಕ ನಗರದಲ್ಲಿ ನಗರಸಭೆ ಮತ್ತು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಡೆಂಘೆ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳು ಡೆಂಘೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕೆಲಸಕ್ಕೆ ಸಹಕಾರ ನೀಡಬೇಕು. ಮನೆ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆಯಿಂದ ಸ್ವಚ್ಛ ಸಾಗರ ಪರಿಕಲ್ಪನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯವಂತ ಸಮಾಜ ಇದ್ದರೆ ನಗರಸಭೆ ಪರಿಕಲ್ಪನೆಗಳನ್ನು ಸಾಕಾರಗೊಳಿಸಬಹುದು. ಡೆಂಘೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಔಷಧ ಸಿಂಪಡಣೆ, ಜಾಗೃತಿ ಜಾಥಾ, ಕರಪತ್ರ ಮೂಲಕ ಮನೆಮನೆಗೂ ಡೆಂಘೆ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಸಾಗರ ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆಯಿಂದ ಲಾರ್ವಾ ಸರ್ವೆ ಕೆಲಸ ನಡೆಸಲಾಗುತ್ತಿದೆ. ಜೂ.6ರವರೆಗೆ ತಾಲೂಕಿನಲ್ಲಿ 104 ಡೆಂಘೆ ಪ್ರಕರಣ ದಾಖಲಾಗಿದೆ. ಉಪವಿಭಾಗೀಯ ಆಸ್ಪತ್ರೆಯಲ್ಲಿ ಈತನಕ 224 ಡೆಂಘೆ ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಸವಿತಾ ವಾಸು, ಸೈಯದ್ ಜಾಕೀರ್, ಸಬಿನಾ ತನ್ವೀರ್, ಉಮೇಶ್, ಪರಿಸರ ಅಭಿಯಂತ ಮದನ್, ಶೈಲೇಶ್, ಶಿವಪ್ಪ ನಾಯಕ ಯುವಜನ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಖ್ಯಶಿಕ್ಷಕ ಎಂ.ಪಿ.ಸತ್ಯನಾರಾಯಣ ಇದ್ದರು.