More

    ಅನ್ನದಾತನಾದ ಪೊರಕೆ ಕಡ್ಡಿ, ಕುಟುಂಬಕ್ಕೆ ಅಲ್ಪ ಪ್ರಮಾಣದ ಆದಾಯದ ಮೂಲ

    ಪಿ.ಎಸ್.ಹರೀಶ್ ಕೋಲಾರ
    ಗ್ರಾಮೀಣ ಪ್ರದೇಶದಲ್ಲಿ ದನ ಕಾಯುವವವರು, ಕುರಿ ಕಾಯುವವವರಿಗೆ, ಅದರಲ್ಲೂ ಮಹಿಳೆಯರಿಗೆ ಪೊರಕೆ ಕಡ್ಡಿಗಳು ಕುಟುಂಬಕ್ಕೆ ಅಲ್ಪ ಪ್ರಮಾಣದ ಆದಾಯದ ಮೂಲವಾಗಿ ಅನ್ನದಾತನಾಗಿ ಪರಿಣಮಿಸಿದೆ.

    ಮನೆಯ ಅಡುಗೆ ಕೋಣೆಯ ಮೂಲೆಯಲ್ಲೋ ಅಥವಾ ಬಾಗಿಲುಗಳ ಸಂದಿಗಳಲ್ಲೋ ಕಣ್ಣಿಗೆ ಕಾಣದಂತೆ ಇದ್ದುಬಿಡುವ ಪೊರಕೆ ದಿನನಿತ್ಯ ಕೆಲಸಕ್ಕೆ ಬರುವ ಸಾಧನ. ಊರಿನ ಸ್ವಚ್ಛತೆಗೂ ಬೇಕು. ಗ್ರಾಮೀಣದಲ್ಲಿ ಹಬ್ಬ ಹರಿದಿನಗಳಲ್ಲಿ ಮನೆಗೆ ಸುಣ್ಣ ಬಳಿಯಲು, ಮಕ್ಕಳ ದೃಷ್ಟಿ ತೆಗೆಯಲು, ತಿಥಿ ಇನ್ನಿತರ ಶಾಸ್ತ್ರಕಾರ್ಯಗಳಲ್ಲಿ ಪೊರಕೆ ಕಡ್ಡಿ ಬಳಕೆ ರೂಢಿಯಲ್ಲಿದೆ.

    ಅಮ್‌ಆದ್ಮಿ ಪಾರ್ಟಿ ಪೊರಕೆಯನ್ನು ಪಕ್ಷದ ಚಿನ್ನೆಯನ್ನಾಗಿಸಿಕೊಂಡಿದ್ದಲ್ಲದೆ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಹಾಕಿ ಅರವಿಂದ ಕೇಜ್ರೀವಾಲ್ ಅವರನ್ನು ಅಧಿಕಾರಕ್ಕೆ ತಂದಿದ್ದು ಇದೇ ಕಸಬರಿಕೆ. ಸರ್ಕಾರದ ವಿರುದ್ಧದ ಹೋರಾಟ, ಪ್ರತಿಭಟನೆಯಲ್ಲಿ ಆಕ್ರೋಶದ ಸಂಕೇತವಾಗಿ ಪೊರಕೆ ಬಳಕೆಯಾಗುತ್ತದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಅಭಿಯಾನದಲ್ಲೂ ಪೊರಕೆ ಸ್ಥಾನ ಪಡೆದಿದೆ. ಹೀಗೆ ಹೇಳುತ್ತಾ ಹೋದರೆ ಪೊರಕೆಯ ಮಹಿಮೆ ಅಪಾರವೇ ಸರಿ!

    ಸೂರ್ಯೋದಯದ ಜತೆಗೆ ಮನೆ ಗೃಹಿಣಿಯ ಮೊದಲ ಕೆಲಸ ಕಸ ಗುಡಿಸುವುದು. ಮನೆ ಮುಂಭಾಗದ ಕಸ ಗುಡಿಸುವುದರಿಂದ ಹಿಡಿದು ದನದ ಕೊಟ್ಟಿಗೆಯಲ್ಲಿ ಸೆಗಣಿ, ಗಂಜಲ ಸ್ವಚ್ಛಗೊಳಿಸಲು ಪೊರಕೆ ಬೇಕೇ ಬೇಕು.

    ಆಧುನಿಕ ಪೊರಕೆ ರೂಪುಗೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ. ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಹಿಂದೆ ಪೊರಕೆ ಮನೆಯಲ್ಲೇ ತಯಾರಿಸುವ ಸಾಧನವಾಗಿತ್ತು. ಇಂದಿಗೂ ಕರಾವಳಿ, ಮಲೆನಾಡು ಭಾಗದಲ್ಲಿ ಅಡಿಕೆ ಸೋಗೆ, ತೆಂಗಿನ ಗರಿಯಿಂದ ಪೊರಕೆ ತಯಾರಿಸುತ್ತಾರೆ. ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಬೆಳೆಯುವ ಹುಲ್ಲುಕಡ್ಡಿಯ ಪೊರಕೆ ಬಳಕೆಯಲ್ಲಿದೆ.

    ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕಂಪನಿಗಳ ಬ್ರ್ಯಾಂಡೆಡ್ ಪೊರಕೆ ಬಳಸುವವರ ನಡುವೆಯೂ ಬಡ, ಮಧ್ಯಮ ವರ್ಗದ. ಕೂಲಿಕಾರ್ಮಿಕರ ಮನೆಯಲ್ಲಿ ಇಂದಿಗೂ ಹುಲ್ಲುಕಡ್ಡಿಯ ಪೊರಕೆಗಳೇ ಸ್ವಚ್ಛತೆಯ ಸಾಧನವಾಗಿದೆ.

    ಪೊರಕೆ ಕಡ್ಡಿ ಸಂಗ್ರಹಿಸುವುದು ಶ್ರಮದ ಕೆಲಸ. ಜನವರಿಯಿಂದ ಏಪ್ರಿಲ್ ತಿಂಗಳ ಅವಧಿಯಲ್ಲಷ್ಟೇ ಬೆಟ್ಟ ಪ್ರದೇಶಗಳಲ್ಲಿ ಪೊರಕೆ ಕಡ್ಡಿ ಸಂಗ್ರಹಿಸಬಹುದು. ಮಳೆಯಾದರೆ ಕಡ್ಡಿ ಸಿಗದು. ಕುರಿ, ಮೇಕೆ, ದನ ಮೇಯಿಸುವ ಮಹಿಳೆಯರು ಇದರ ಜತೆಗೆ ಪೊರಕೆ ಕಡ್ಡಿಗಳನ್ನು ಕೊಯ್ಯುತ್ತಾರೆ, ಬಡವರು ಕೂಲಿನಾಲಿ ಸಿಗದ ದಿನಗಳಲ್ಲಿ ಇಲ್ಲವೇ ಬಿಡುವಿನ ವೇಳೆಯಲ್ಲಿ ಮಹಿಳೆಯರು ಪೊರಕೆ ಕಡ್ಡಿ ಸಂಗ್ರಹಿಸುತ್ತಾರೆ.

    ಬೆಟ್ಟಗುಡ್ಡಗಳಲ್ಲಿ ಮಳೆಗಾಲದಲ್ಲಿ ಹುಲ್ಲಿನಂತೆ ಬೆಳೆದು ಸಣ್ಣಸಣ್ಣ ಮುಳ್ಳಿನಂತೆ ಕಡ್ಡಿಗಳಿಗೆ ಹೊಂದಿಕೊಂಡು ಬೆಳೆದು ಬಣಗುವ ಅಥವಾ ಹಳದಿ ಬಣ್ಣಕ್ಕೆ ತಿರುಗಿದ ನಂತರ ಪೊರಕೆ ಕಡ್ಡಿ ಕಟಾವು ಮಾಡಿ ಕನಿಷ್ಠ 10 ದಿನ ಒಣಗಿಸಿ ಅದರ ಮುಳ್ಳು ಬೇರ್ಪಡಿಸಿದ ನಂತರ ಕಡ್ಡಿಗಳನ್ನು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ.

    ಗ್ರಾಮೀಣ ಭಾಗದಲ್ಲಿ ಒಂದು ಪೊರಕೆಗೆ 30 ರೂ.ಗಳಿಗೆ ಮಾರಾಟ ಮಾಡಿದರೆ ವ್ಯಾಪಾರಸ್ಥರು ಸರಾಸರಿ 30ರಿಂದ 35 ರೂ.ಗಳಿಗೆ ಖರೀದಿಸಿ ನಗರದಲ್ಲಿ 45 ರಿಂದ 50 ರೂ.ಗಳಿಗೆ ಮಾರಾಟ ಮಾಡುತ್ತಾರೆ. ನಾಲ್ಕು ತಿಂಗಳ ಅವಧಿಗೆ ಅನೇಕ ಬಡ ಕುಟುಂಬದ ಮಹಿಳೆಯರಿಗೆ ಪೊರಕೆ ಕಡ್ಡಿ ಜೀವನ ನಿರ್ವಹಣೆಗೆ ಆದಾಯದ ಮೂಲವಾಗಿ ಪರಿಣಮಿಸಿದೆ.

    ಬೆಟ್ಟಗುಡ್ಡಗಳಲ್ಲಿ ಹುಲ್ಲು ಕಡ್ಡಿ ಚೆನ್ನಾಗಿ ಬೆಳೆದಿರುವ ಕಡೆಯಾದರೆ ದಿನಕ್ಕೆ 15ರಿಂದ 20 ಪೊರಕೆಗಾಗುವಷ್ಟು ಕಡ್ಡಿ ಸಂಗ್ರಹಿಸಬಹುದು. ದನ, ಕುರಿ ಮೇಯಿಸುವುದರ ಜತೆಗೆ ಪೊರಕೆ ಕಡ್ಡಿ ಸಂಗ್ರಹಿಸಿ ಒಣಗಿಸಿದ ನಂತರ ಮಾರಾಟ ಮಾಡುತ್ತೇವೆ, ಇದರಿಂದ ಬರುವ ಆದಾಯ ಸಣ್ಣಪುಟ್ಟ ಖರ್ಚಿಗೆ ನೆರವಾಗುತ್ತದೆ.
    ಲಕ್ಷ್ಮೀದೇವಮ್ಮ, ತೊಟ್ಲಿನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts