More

    ಕಾಡುಪ್ರಾಣಿ ಹಾವಳಿಗೆ ಬ್ರೇಕ್ ಹಾಕಿ ; ಚಿಕ್ಕನಾಯಕನಹಳ್ಳಿ ತಾಲೂಕು ಜನತೆ ಒತ್ತಾಯ ; ಕಾಡಂಚಿನ ಗ್ರಾಮಸ್ಥರು ಕಂಗಾಲು

    ಚಿಕ್ಕನಾಯಕನಹಳ್ಳಿ: ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಂತೆ ತಾಲೂಕಿನಲ್ಲಿ ಹಲವು ಗ್ರಾಮಗಳಿದ್ದು, ಚಿರತೆಗಳು ಹಗಲಿನಲ್ಲೇ ರಾಜಾರೋಷವಾಗಿ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಕಾಡಂಚಿನ ಜನರು ಆತಂಕಗೊಂಡಿದ್ದಾರೆ.

    ಕಂದಿಕೆರೆ ಹಾಗೂ ಶೆಟ್ಟಿಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ದಾಳಿ ಪ್ರಕರಣ ಹೆಚ್ಚಾಗಿದ್ದು, ಶೆಟ್ಟಿಕೆರೆ ಭಾಗದ ಮಲಗೊಂಡನಹಳ್ಳಿ, ವಾದಿಹಳ್ಳಿ, ಪಟ್ಟದದೇವರಕೆರೆ, ವಾಕುವಳ್ಳಿ ಭಾಗಗಳಲ್ಲಿ ಚಿರತೆ ಕಂಡುಬಂದಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
    ಇತ್ತೀಚೆಗೆ ಚಿಕ್ಕರಾಂಪುರದ ರೈತ ತಿಮ್ಮಯ್ಯ ಎಂಬುವರ 2 ಮೇಕೆ, ಉಗ್ರಯ್ಯ ಎಂಬುವವರ 2 ಮೇಕೆ, ತಿಮ್ಮರಾಜು ಎಂಬುವವರ ಮೇಕೆ, ಬರಸಿಡ್ಲಹಳ್ಳಿ ಕುರಿಗಾಹಿಯಯು ಕುರಿಯನ್ನು ಚಿರತೆಗಳು ತಿಂದಿವೆ. ಇದರಿಂದ ರೈತರು ತೋಟಗಳಿಗೆ ಜಾನುವಾರು ಮೇಯಿಸಲು ಹೋಗಲೂ ಹೆದರುವಂತಾಗಿದೆ.

    ಮೇಕೆ ಮೇಯಿಸಲು ಹೊಲದ ಕಡೆಗೆ ಹೋದಾಗ ಬರಶಿಡ್ಲಹಳ್ಳಿ ಕಣಿವೆ ಗುಡ್ಡದ ಬಳಿ ನನ್ನ ಕಣ್ಣೆದುರೇ ಚಿರತೆಯು ಎರಡು ಮೇಕೆಗಳನ್ನು ಹೊತ್ತೊಯ್ದಿದೆ, ಜಾನುವಾರುಗಳನ್ನು ನಂಬಿಯೇ ಜೀವನ ಮಾಡುತ್ತೀವಿ, ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಿ, ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಚಿಕ್ಕರಾಂಪುರದ ತಿಮ್ಮಯ್ಯ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾಗಭೂಷಣ್ ಪ್ರತಿಕ್ರಿಯಿಸಿ, ವಾಕುವಳ್ಳಿ ರವಿಂದ್ರ ಎಂಬುವರ ಕುರಿ, ಲಕ್ಮೇನಹಳ್ಳಿಯ ಕೃಷ್ಣಯ್ಯನ ಕುರಿ, ಆಲದಕಟ್ಟೆಯ ರೇಣುಕಯ್ಯನ ಮೇಕೆ, ಬ್ಯಾಲದಕೆರೆಯ ರಾಜಣ್ಣನ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಇಲಾಖೆಗೆ ವರದಿ ನೀಡಲಾಗಿದೆ. ಪಶುಪಾಲನೆ ಇಲಾಖೆಯಿಂದ ಇದಕ್ಕೆ ನಷ್ಟ ಪರಿಹಾರ ನೀಡುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಬೇಕು ಎಂದರು.

    ಸಿಂಗದಹಳ್ಳಿ ಹಾಗೂ ಕಸಬಾ ಹೋಬಳಿಯ ದುರ್ಗದಕೆರೆ ಭಾಗಗಳಲ್ಲಿ ಚಿರತೆ ಕಂಡುಬಂದ ಬಗ್ಗೆ ವಾಹಿತಿ ಬಂದಿದ್ದು, ಅಲ್ಲಿ ಬೋನುಗಳನ್ನು ಇಡಲಾಗುವುದು. ಕಾಡಂಚಿನ ರೈತರು ಜಾನುವಾರು ಮೇಯಿಸಲು ಹೋಗುವಾಗ ಎಚ್ಚರಿಕೆಯಿಂದ ಇರಬೇಕು. ಚಿರತೆ ಕಂಡರೆ ಅವುಗಳ ಬಗ್ಗೆ ತಕ್ಷಣ ಇಲಾಖೆಗೆ ವಾಹಿತಿ ನೀಡಬೇಕು.
    ಎ.ಸುನೀಲ್ ವಲಯ ಅರಣ್ಯಾಧಿಕಾರಿ, ಚಿಕ್ಕನಾಯಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts