More

    ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ಚಕ್ರ ಹಿಂದಕ್ಕೆ

    ಬೆಂಗಳೂರು: ಜಗತ್ತಿನಲ್ಲೇ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ನಗರ ತನ್ನ ಖ್ಯಾತಿಗೆ ತಕ್ಕಂತೆ ಮೂಲಸೌಕರ್ಯ ಹೊಂದುವಲ್ಲಿ ಹಿಂದೆ ಬಿದ್ದಿದೆ. ಬರೋಬರಿ ಒಂದೂಕಾಲು ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾಲಮಿತಿಯೊಳಗೆ ನಾಗರಿಕ ಸೌಲಭ್ಯ ಕಲ್ಪಿಸಬೇಕಿದ್ದ ಸರ್ಕಾರ ಹಾಗೂ ಬಿಬಿಎಂಪಿಯ ಇಚ್ಛಾಶಕ್ತಿ ಕೊರತೆಯಿಂದಾಗಿ ರಾಜಧಾನಿ ಅಭಿವೃದ್ಧಿ ಚಕ್ರ ಹಿಂದಕ್ಕೆ ಚಲಿಸುವಂತಾಗಿದೆ.

    ಮಹಾನಗರದ ಸಮಗ್ರ ಅಭಿವೃದ್ಧಿಗೆ ಏಳೆಂಟು ವರ್ಷಗಳಿಂದ ಆಯಾ ಸರ್ಕಾರಗಳು ವಿವಿಧ ಯೋಜನೆಗಳನ್ನು ಘೋಷಿಸಿವೆ. ಇದಕ್ಕೆ ಪೂರಕವಾಗಿ ಬಿಬಿಎಂಪಿ ಕೂಡ ಅಭಿವೃದ್ಧಿ ಕಾರ್ಯಕ್ರಮಗಳ ಹೊಣೆ ಹೊತ್ತಿದೆ. ಆದರೆ, ಯೋಜನೆಗಳಿಗೆ ಅನುಷ್ಠಾನಕ್ಕೆ ಅಗತ್ಯ ಅನುದಾನ ಒದಗಿಸದ ಕಾರಣ ಸಕಾಲದಲ್ಲಿ ಕೆಲಸಗಳು ಪೂರ್ಣಗೊಳ್ಳುತ್ತಿಲ್ಲ. ಬೃಹತ್ ಯೋಜನೆಗಳಿಗೆ ಸಂಬಂಧಿಸಿ ಸತತ ಮೇಲ್ಚಿಚಾರಣೆ ಹಾಗೂ ನಿಗಾ ಇಡುವಲ್ಲಿ ವೈಫಲ್ಯ ಕಂಡಿದೆ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗವು ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲು ಮುಂದಾಗದ ಕಾರಣ ಸಾರ್ವಜನಿಕರಿಗೆ ಸೌಕರ್ಯ ಸಿಗದೆ ಪರಿತಪಿಸುವಂತಾಗಿದೆ.

    ರಾಜ್ಯದ ಒಟ್ಟು ಆದಾಯದಲ್ಲಿ ಶೇ.55 ಭಾಗವು ಬೆಂಗಳೂರಿನಿಂದ ಉತ್ಪತ್ತಿಯಾಗುತ್ತಿದೆ. ರಾಜಧಾನಿಯ ಸುತ್ತಲಿನ ಜಿಲ್ಲೆಗಳ ಅಭಿವೃದ್ಧಿಗೂ ಬೆಂಗಳೂರೇ ಶಕ್ತಿಮೂಲವಾಗಿದೆ. ದೇಶ-ವಿದೇಶಗಳಲ್ಲೂ ಐಟಿ-ಬಿಟಿ ಖ್ಯಾತಿಯಿಂದಾಗಿ ‘ವೈಬ್ರೆಂಟ್ ಬೆಂಗಳೂರು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ, ಇದಕ್ಕೆ ತಕ್ಕಂತೆ ವಿಶ್ವದರ್ಜೆಯ ಸೌಕರ್ಯ ಕಲ್ಪಿಸುವ ಸಂಕಲ್ಪ ಈಡೇರದೆ ಸೊರಗಿದಂತಾಗಿದೆ.

    ಮುಖ್ಯವಾಗಿ ಹಿಂದಿನ ವರ್ಷದ ಬಜೆಟ್ ಮಂಡಿಸುವಾಗ (2023ರ ಜು.7) ಮುಖ್ಯಮಂತ್ರಿಯವರು, ‘ನಿಕಟಪೂರ್ವ ಸರ್ಕಾರದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ನಿರ್ಲಕ್ಷಿಸಿದ ಕಾರಣ ನಗರಗಳ ಅಭಿವೃದ್ಧಿಯು ಕುಂಠಿತಗೊಂಡಿತು. ಜತೆಗೆ ಮಿತಿ ಮೀರಿದ ಭ್ರಷ್ಟಾಚಾರ ಹಾಗೂ ಅಸಮರ್ಪಕ ನಿರ್ವಹಣೆಯ ಕಾರಣ ನಗರದ ಮೂಲಸೌಕರ್ಯಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ ಎಂದು ಹೇಳಿದ್ದರು. ಈಗ ಹೊಸ ಸರ್ಕಾರ ಬಂದರೂ, ಅಭಿವೃದ್ಧಿ ಯೋಜನೆಗಳ ಜಾರಿ ಹಾಗೂ ನಿರ್ವಹಣೆಯಲ್ಲಿ ಹೊಸತನ ಕಂಡುಬರುತ್ತಿಲ್ಲ. ಹೊಸ ಕಾರ್ಯಕ್ರಮಗಳ ಘೋಷಣೆ ಇರಲಿ, ಬಾಕಿ ಉಳಿದಿರುವ ಕಾಮಗಾರಿಗಳ ಪೂರ್ಣಕ್ಕೆ ಮುತುವರ್ಜಿ ವಹಿಸದಿರುವುದು ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಇಂತಹವುಗಳನ್ನು ಪಟ್ಟಿ ಮಾಡಿ ಪೂರ್ಣಗೊಳಿಸುವತ್ತ ಲಕ್ಷ್ಯ ಹರಿಸದಿರುವುದು ಯೋಜನಾ ವೆಚ್ಚ ದುಪ್ಪಟ್ಟಾಗುವತ್ತ ಹೆಜ್ಜೆ ಹಾಕಿವೆ.

    ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಹಣ:

    ನಗರದಲ್ಲಿ ಪ್ರಮುಖ ರಸ್ತೆಗಳು, ಮೇಲ್ಸೇತುವೆ-ಕೆಳಸೇತುವೆ, ಮಳೆನೀರುಗಾಲುವೆಗಳ ಮರುನಿರ್ಮಾಣ, ಕೆರೆಗಳ ಪುನಶ್ಚೇತನ, ಸಂಚಾರದ ದಟ್ಟಣೆ ನಿವಾರಣೆ ಸಹಿತ ವಿವಿಧ ವಿಭಾಗಗಳಿಗೆ ಸಂಬಂಧಿಸಿ ಹಲವು ಕಾಮಗಾರಿಗಳನ್ನು ಘೋಷಿಸಲಾಗಿದೆ. ಇವುಗಳಲ್ಲಿ ಕೆಲವು ವರ್ಷಗಳಿಂದ ಕುಂಟುತ್ತಾ ಸಾಗಿವೆ. ಇನ್ನೂ ಕೆಲವು ಆಮೆವೇಗದ ಪ್ರಗತಿ ಕಂಡಿದೆ. ನಗರ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡದಿರುವುದು ಅಪೂರ್ಣ ಕಾಮಗಾರಿಗಳ ಪಟ್ಟಿ ಹಿಗ್ಗುವಂತೆ ಮಾಡಿದೆ. ಕೋಟ್ಯಂತರ ರೂ. ಮೊತ್ತದ ಟೆಂಡರ್ ಅಂತಿಮಗೊಳಿಸುವ ವೇಳೆ 24 ತಿಂಗಳು, 48 ತಿಂಗಳುಗಳ ಗಡುವು ನೀಡಿದರೂ, ಮೂರ‌್ನಾಲ್ಕು ವರ್ಷ ಸಂದರೂ ಪೂರ್ಣಗೊಳ್ಳದ ಹಲವು ಕಾಮಗಾರಿಗಳಿವೆ. ಇಂತಹ ಗ್ರಹಣ ಹಿಡಿದ ಕಾಮಗಾರಿಗಳನ್ನು ಗುರುತಿಸಿ ಅವುಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಚಾಕಚಕ್ಯತೆ ಆಳುವ ವರ್ಗಕ್ಕೆ ಇಲ್ಲದಿರುವುದು ಅಭಿವೃದ್ಧಿ ಯೋಜನೆಗಳು ಕಡತದಲ್ಲೇ ಉಳಿಯುವಂತಾಗಿದೆ.

    6 ಸಚಿವರಿದ್ದರೂ ಅಭಿವೃಧ್ಧಿಗಿಲ್ಲ ವೇಗ:

    ಬೆಂಗಳೂರು ನಗರದಿಂದ ಶಾಸಕರಾಗಿ ಆಯ್ಕೆಯಾಗಿರುವವರ ಪೈಕಿ 6 ಮಂದಿ ಸಚಿವರಾಗಿದ್ದಾರೆ. ಜತೆಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಹೊಣೆಯನ್ನು ಡಿಸಿಎಂಗೆ ವಹಿಸಲಾಗಿದೆ. ಆದರೆ, ಇಷ್ಟೂ ಸಚಿವರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸ್ಪಷ್ಟ ನೀಲಿನಕ್ಷೆ ಸಿದ್ಧಪಡಿಸಿ ಅದರಂತೆ ಒಟ್ಟಾಗಿ ಕಾರ್ಯನಿರ್ವಹಿಸುವ ಕೆಲಸ ಮಾಡಿಲ್ಲ. ಬದಲಾಗಿ ತಾವು ಪ್ರತಿನಿಧಿಸುವ ಕ್ಷೇತ್ರದತ್ತಲೇ ಹೆಚ್ಚು ಆಸಕ್ತಿ ಹೊಂದಿರುವುದು ರಾಜಧಾನಿ ಅಭಿವೃದ್ಧಿಗೆ ವೇಗ ಸಿಕ್ಕಿಲ್ಲ ಎಂಬ ಆಕ್ಷೇಪ ಪ್ರತಿಪಕ್ಷ ಪಾಳಯದಿಂದ ಕೇಳಿಬಂದಿದೆ.

    ಸಮಗ್ರ ಕಲ್ಪನೆ ಶಾಸಕರಿಗೆ ಇಲ್ಲವಾಯಿತೆ?:

    ಮಹಾನಗರದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 12 ಶಾಸಕರು ಆಡಳಿತರೂಢ ಕಾಂಗ್ರೆಸ್ ಹಾಗೂ 16 ಶಾಸಕರು ಬಿಜೆಪಿ ಪ್ರತಿನಿಧಿಸುತ್ತಿದ್ದಾರೆ. ಇವರೆಲ್ಲರೂ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ, ಒಟ್ಟಾರೆ ಬೆಂಗಳೂರು ನಗರದ ಏಳ್ಗೆಗೆ ಶ್ರಮ ಹಾಕುತ್ತಿಲ್ಲ. ಮೇಲಾಗಿ ಈ ಎಲ್ಲ ಶಾಸಕರು ಆಯಾ ಪಕ್ಷಗಳಲ್ಲಿ ಪ್ರಭಾವಿಗಳಾಗಿದ್ದರೂ, ಅಭಿವೃದ್ಧಿ ವಿಚಾರದಲ್ಲಿ ಒಂದಾಗಿ ದನಿ ಎತ್ತದಿರುವುದು ಸರ್ಕಾರದಿಂದ ಅಧಿಕ ಮತ್ತವನ್ನು ನಗರಕ್ಕೆ ಬಿಡುಗಡೆಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಇವರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ಸಂಸದರೂ ಕೂಡ ಕೇಂದ್ರದಿಂದ ಮೂಲಸೌಕರ್ಯಕ್ಕೆಂದೇ ಪ್ರತ್ಯೇಕ ಹಣ ಅಥವಾ ಪ್ಯಾಕೇಜ್ ಬಿಡುಗಡೆಗೊಳಿಸಲು ಪ್ರಯತ್ನಿಸದಿರುವುದು ನಗರ ಅಭಿವೃದ್ಧಿಗೆ ಹಿನ್ನೆಡೆಯುಂಟು ಮಾಡಿದಂತಿದೆ.

    ಕುಂಠಿತವಾಗಿರುವ ಕೆಲ ಕಾಮಗಾರಿಗಳ ಕಿರುಮಾಹಿತಿ:
    * ಈಜಿಪುರ ಮೇಲ್ಸೇತುವೆ: ಈಜಿಪುರ ಮುಖ್ಯರಸ್ತೆ-ಕೋರಮಂಗಲದ ಕೇಂದ್ರೀಯ ಸದನದವರೆಗಿನ 2.5 ಕಿ.ಮೀ. ಉದ್ದದ ಮೇಲ್ಸೇತುವೆ 2017ರಲ್ಲಿ ಚಾಲನೆಗೊಂಡರೂ ಇನ್ನೂ ಪೂರ್ಣಗೊಂಡಿಲ್ಲ. ಗುತ್ತಿಗೆ ಕಂಪನಿಯ ಅಹಸಕಾರದಿಂದ ಹೊಸ ಟೆಂಡರ್‌ಗೆ ಸರ್ಕಾರ ಒಪ್ಪಿದರೂ (204 ಕೋಟಿ ರೂ.ನಿಂದ 308 ಕೋಟಿ ರೂ.ಗೆ) ಮರುಚಾಲನೆಗೊಂಡಿಲ್ಲ. ಮರ ಕಡಿತ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.
    * ಕೆ-100 ಯೋಜನೆ: ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ರಾಜಕಾಲುವೆ ಸಂಪರ್ಕಿಸುವ 12 ಕಿ.ಮೀ. ಉದ್ದದ ಮಳೆನೀರುಗಾಲುವೆಯ ಸಮಗ್ರ ಅಭಿವೃದ್ಧಿಗೆ 3 ವರ್ಷದ ಹಿಂದೆ ಚಾಲನೆ ಸಿಕ್ಕಿತ್ತು. ವಿಳಂಬದಿಂದಾಗಿ ಯೋಜನಾ ಮೊತ್ತವು 175 ಕೋಟಿ ರೂ.ನಿಂದ 200 ಕೋಟಿಗೆ ಹಿಗ್ಗಿದೆ.
    * ಯಲಹಂಕ ಮೇಲ್ಸೇತುವೆ: ಯಲಹಂಕ ಪೊಲೀಸ್ ಠಾಣೆ ವೃತ್ತದಿಂದ ದೊಡ್ಡಬಳ್ಳಾಪುರ ರಸ್ತೆಯತ್ತ ಸಾಗುವ 1.8 ಕಿ.ಮೀ. ಉದ್ದದ ಮೇಲ್ಸೇತುವೆ ಹಣದ ಕೊರತೆಯಿಂದ ಕುಂಟುತ್ತಾ ಸಾಗಿದೆ. ಹೆಚ್ಚುವರಿ ಹಣ ಬಿಡುಗಡೆ ಭರವಸೆಯಾಗಿಯೇ ಉಳಿದಿದ್ದು ನಿತ್ಯ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ.
    * ವರ್ತೂರು-ಗುಂಜಕೂರು ರಸ್ತೆ ಅಭಿವೃದ್ಧಿ: ಟೆಕ್ ಕಾರಿಡಾರ್‌ನ ಮುಖ್ಯ ಸಂಪರ್ಕ ರಸ್ತೆಯಾಗಿರುವ 3 ಕಿ.ಮೀ. ಉದ್ದದ ವರ್ತೂರು-ಗುಂಜೂರು ರಸ್ತೆ ಟಿಡಿಆರ್ ವಿಳಂಬದಿಂದ ಇನ್ನೂ ಟೇಕ್ ಆ್ ಆಗಿಲ್ಲ. ಇದರಿಂದಾಗಿ ಟೆಕ್ಕಿಗಳು ನಿತ್ಯ ಜಾಮ್‌ನಲ್ಲಿ ಸಿಲುಕುವಂತಾಗಿದೆ.
    * ಕೆರೆಗಳ ಪುನಶ್ಚೇತನ: ನಗರದ ಅತೀ ದೊಡ್ಡ ಕೆರೆಗಳಾದ ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಗಳ ಅಭಿವೃದ್ಧಿಗೆ ಚಾಲನೆ ದೊರೆತು 4 ವರ್ಷ ಸಂದರೂ ಪೂರ್ಣಗೊಂಡಿಲ್ಲ. ಹಣ ಅಲಭ್ಯತೆ, ನಿರ್ವಹಣೆ ಕೊರತೆಯಿಂದ ಅಪೂರ್ಣಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts