ತಿರುವನಂತಪುರ: ಕೇರಳದ ಕೋಳಿಕ್ಕೋಡ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ವಿಮಾನ ಅಪಘಾತದ ವೇಳೆ ಪೈಲಟ್ ವಿಮಾನಕ್ಕೆ ಬೆಂಕಿ ಹೊತ್ತುಕೊಳ್ಳದ ರೀತಿ ತೋರಿದ ಸಮಯಪ್ರಜ್ಞೆ ತಮ್ಮ ಪ್ರಾಣವನ್ನು ಉಳಿಸಿತು ಎಂದು ಅಪಘಾತದಲ್ಲಿ ಬದುಕುಳಿದವರು ಹೇಳಿದ್ದಾರೆ.
ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ದುಬೈನಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದವರನ್ನು ಕರೆತರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಸುವಾಗ ಭಾರಿ ಮಳೆಯಿಂದಾಗಿ ರನ್ವೇಯಿಂದ ಹೊರಹೋದ ವಿಮಾನ ಅಪಘಾತಕ್ಕೀಡಾಗಿ 20 ಜನ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದುಬೈನಿಂದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಬೋಯಿಂಗ್-737 ವಿಮಾನದಲ್ಲಿ 190 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಇವರಲ್ಲಿ 10 ಮಕ್ಕಳು ಸೇರಿದ್ದರು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಕರಿಪ್ಪೂರ್ ವಿಮಾನ ದುರಂತ ಸಾವಿನ ಸಂಖ್ಯೆ 19ಕ್ಕೆ ಏರಿಕೆ: ಬ್ಲ್ಯಾಕ್ಬಾಕ್ಸ್ ಪತ್ತೆ
ವಿಮಾನದಲ್ಲಿ ಸಣ್ಣಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಜತೆಗೆ ಎಲ್ಲೆಡೆ ಹೊಗೆ ಆವರಿಸಿತ್ತು. ಅದಾವುದನ್ನೂ ಲೆಕ್ಕಸಿದೆ ಸ್ಥಳೀಯರು ಮತ್ತು ಧೈರ್ಯಶಾಲಿ ಪೈಲಟ್ ಭಾರಿ ದುರಂತ ಆಗುವುದನ್ನು ತಪ್ಪಿಸಿದರು. ಅಪಾಯವನ್ನೂ ಲೆಕ್ಕಿಸದ ಜನರು ಬದುಕುಳಿದ ಪ್ರಯಾಣಿಕರನ್ನು ರಕ್ಷಿಸಿದರು ಎನ್ನಲಾಗಿದೆ.
ಭಾರತೀಯ ವಾಯುಪಡೆಯಲ್ಲಿ 22 ವರ್ಷ ಸೇವೆ ಸಲ್ಲಿಸಿದ್ದ ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಠೆ ಅವರು ವಿಮಾನದ ಮುಖ್ಯ ಪೈಲಟ್ ಆಗಿದ್ದರು. ಹೊರಗೆ ಭಾರಿ ಮಳೆಯಾಗುತ್ತಿದೆ. ಹವಾಮಾನ ತುಂಬಾ ಕೆಟ್ಟದಾಗಿದೆ. ಎರಡು ಬಾರಿ ವಿಮಾನ ಇಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಮೂರನೇ ಪ್ರಯತ್ನದಲ್ಲಿ ವಿಮಾನ ಇಳಿಯಿತಾದರೂ ರನ್ವೇನಿಂದ ಜಾರಿ, ಇಬ್ಭಾಗವಾಯಿತು. ಆದರೂ ನಾವೆಲ್ಲರೂ ಪವಾಡಸದೃಶವಾಗಿ ಬದುಕುಳಿದೆವು ಎಂದು ಬದುಕುಳಿದ ಪ್ರಯಾಣಿಕರಲ್ಲಿ ಒಬ್ಬರಾದ ವಿ. ಇಬ್ರಾಹಿಂ ತಿಳಿಸಿದ್ದಾರೆ.
ವಿಮಾನದಲ್ಲಿದ್ದ 190 ಪ್ರಯಾಣಿಕರ ಪೈಕಿ 123 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಬೆನ್ನುಹುರಿ ಗಾಯವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.