More

    ಮತ್ತೆ ಮಂಕಡಿಂಗ್ ಸಮರ್ಥಿಸಿದ ಅಶ್ವಿನ್, ಫ್ರೀಹಿಟ್‌ನಂತೆ ಫ್ರೀಬಾಲ್ ನೀಡಲು ಸಲಹೆ

    ನವದೆಹಲಿ: ಕಳೆದ ಆವೃತ್ತಿಯ ಅತ್ಯಂತ ವಿವಾದಾತ್ಮಕ ವಿಚಾರ ಮಂಕಡಿಂಗ್ ಬಗ್ಗೆ ಐಪಿಎಲ್ ಟೂರ್ನಿಗೆ ಮುನ್ನ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಜೋಸ್ ಬಟ್ಲರ್‌ರನ್ನು ಮಂಕಡಿಂಗ್ ಮಾಡಿ ಸುದ್ದಿಯಾಗಿದ್ದ ಸ್ಪಿನ್ನರ್ ಆರ್. ಅಶ್ವಿನ್ ಅದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು, ನಾನ್-ಸ್ಟೈಕರ್ ಬ್ಯಾಟ್ಸ್‌ಮನ್‌ಗಳು ಬೇಗನೆ ಕ್ರೀಸ್ ಬಿಟ್ಟು ತೆರಳಿದಾಗ ಬೌಲರ್‌ಗಳಿಗೆ ‘ಫ್ರೀ ಬಾಲ್’ ಕೂಡ ನೀಡಬೇಕೆಂದು ಸಲಹೆ ನೀಡಿದ್ದಾರೆ.

    ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದಾಗ ಅಶ್ವಿನ್ ಮಂಕಡಿಂಗ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ವರ್ಗಾವಣೆಗೊಂಡಿರುವ ಅವರಿಗೆ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈಗಾಗಲೆ ಮಂಕಡಿಂಗ್ ಒಪ್ಪಿಕೊಳ್ಳಲಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ನಡುವೆ ಟ್ವಿಟರ್‌ನಲ್ಲಿ ಸಮರ್ಥನೆ ಮುಂದುವರಿಸಿರುವ ಅಶ್ವಿನ್, ‘ನಾನ್-ಸ್ಟೈಕರ್ ಬ್ಯಾಟ್ಸ್‌ಮನ್ ಎಸೆತಕ್ಕೆ ಮುನ್ನವೇ ಕ್ರೀಸ್‌ನಿಂದ ಮುಂದೆ ಹೋದರೆ ಆ ಎಸೆತವನ್ನು ಫ್ರೀ ಬಾಲ್ ಎಂದು ಪರಿಗಣಿಸಬೇಕು. ಅಲ್ಲದೆ ಆ ವೇಳೆ ಮಂಕಡಿಂಗ್ ಮೂಲಕ ಬ್ಯಾಟ್ಸ್‌ಮನ್ ಔಟಾದರೆ, ಬ್ಯಾಟಿಂಗ್ ತಂಡದ 5 ರನ್ ಕಡಿತಗೊಳಿಸಬೇಕು. ಫ್ರೀಹಿಟ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲ ಆಗುವುದಾದರೆ, ಬೌಲರ್‌ಗಳಿಗೂ ಫ್ರೀ ಬಾಲ್ ಮೂಲಕ ಅವಕಾಶ ಮಾಡಿಕೊಡಿ’ ಎಂದು ಟ್ವೀಟಿಸಿದ್ದಾರೆ.

    ಇದನ್ನೂ ಓದಿ: PHOTO | ಐಪಿಎಲ್‌ಗೆ ಮುನ್ನ ಎಂಗೇಜ್ ಆದ ಕ್ರಿಕೆಟಿಗ ವಿಜಯ್ ಶಂಕರ್

    ಮಂಕಡಿಂಗ್‌ಗೆ ಕ್ರಿಕೆಟ್ ನಿಯಮಗಳಲ್ಲೇ ಅವಕಾಶ ಇರುವಾಗ ಅದನ್ನು ಮಾಡುವ ಬೌಲರ್ ಅನ್ನು ನಕಾರಾತ್ಮಕವಾಗಿ ಬಿಂಬಿಸಬಾರದು ಮತ್ತು ಅದನ್ನು ಕ್ರೀಡಾಸ್ಫೂರ್ತಿ ರಹಿತ ಎಂದು ಹೇಳಬಾರದು ಎಂಬ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಅವರ ಟ್ವೀಟ್‌ಗೆ ಪ್ರತಿಯಾಗಿ ಅಶ್ವಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಈಗ ಎಲ್ಲರೂ ಬೌಲರ್‌ಗಳು ದಂಡನೆಗೆ ಒಳಗಾಗಬೇಕು ಎಂದೇ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದಿದ್ದಾರೆ.

    ಫ್ರೀಹಿಟ್‌ನಲ್ಲಿ ಬ್ಯಾಟ್ಸ್‌ಮನ್ ಔಟಾಗುವ ಭಯವಿಲ್ಲದೆ ಗರಿಷ್ಠ ರನ್ ಕಸಿಯಲು ಅವಕಾಶ ಸಿಗುವುದಾದರೆ, ಫ್ರೀ ಬಾಲ್‌ನಲ್ಲಿ ರನ್ ಕೂಡ ಕಡಿತಗೊಳ್ಳಬೇಕು ಎಂಬುದು ಅಶ್ವಿನ್ ವಾದವಾಗಿದೆ.

    ಕ್ರಿಕೆಟ್ ಆಟ ಇರುವುದೇ ಬ್ಯಾಟ್ಸ್‌ಮನ್‌ಗಳಿಗಾಗಿ ಎಂದು ತಮ್ಮ ಟ್ವೀಟ್‌ಗೆ ಬಂದಿರುವ ಪ್ರತಿಕ್ರಿಯೆಗೆ ಉತ್ತರಿಸಿರುವ ಅಶ್ವಿನ್, ಹಾಗಾದರೆ ರನೌಟ್ ಇರುವುದೇ? ಅದನ್ನು ತೆಗೆದುಬಿಡಿ ಎಂದಿದ್ದಾರೆ.

    ಅಶ್ವಿನ್ ಟ್ವೀಟ್‌ಗೆ ಪ್ರತಿಯಾಗಿ ಮಾಜಿ ಕ್ರಿಕೆಟಿಗರಾದ ಡಬ್ಲ್ಯುವಿ ರಾಮನ್, ಎಸ್. ಬದ್ರಿನಾಥ್, ರೋಹನ್ ಗಾವಸ್ಕರ್ ಮತ್ತು ವೀಕ್ಷಕವಿವರಣೆಕಾರ ಹರ್ಷ ಬೋಗ್ಲೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪೈಕಿ, ಮಾಜಿ ಕ್ರಿಕೆಟ್ ತಂಡದ ಕೋಚ್ ಕೂಡ ಆಗಿರುವ ರಾಮನ್, ಅಶ್ವಿನ್ ವಾದಕ್ಕೆ ಬೆಂಬಲ ನೀಡಿದ್ದಾರೆ. ‘ಎಸೆತಕ್ಕೆ ಮುನ್ನ ಕ್ರೀಸ್‌ನೊಳಗೆ ಇರಬೇಕು ಎಂದು ಬ್ಯಾಟ್ಸ್‌ಮನ್‌ಗಳಿಗೆ ಸೂಚನೆ ಇರುವಾಗ, ಅವರೇಕೆ ಮುಂದೆ ಹೋಗಬೇಕು’ ಎಂದು ಪ್ರಶ್ನಿಸಿದ್ದಾರೆ.

    ಮಂಕಡಿಂಗ್‌ನ ಪ್ರಮುಖ ಟೀಕಾಕಾರರಾಗಿರುವ ದಿಗ್ಗಜ ಸುನೀಲ್ ಗಾವಸ್ಕರ್‌ರ ಪುತ್ರ ರೋಹನ್ ಗಾವಸ್ಕರ್ ತಂದೆಯ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದೆ, ಕ್ರೀಡಾಸ್ಫೂರ್ತಿಯ ವ್ಯಾಖ್ಯಾನದಲ್ಲೇ ಗೊಂದಲವಿದೆ ಎಂದಿದ್ದಾರೆ. ಅಲ್ಲದೆ ಹೆಚ್ಚಿನ ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಕ್ರೀಸ್ ಬಿಟ್ಟು ಮುಂದೆ ಹೋದಾಗಲೂ, ವಿವಾದಕ್ಕೆ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಮಂಕಡಿಂಗ್ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: PHOTO | ಟೆನಿಸ್ ಆಟಗಾರ್ತಿಯನ್ನು ವಿವಾಹವಾದ ಕ್ರಿಕೆಟಿಗ

    ‘ಪ್ರತಿ ಬಾರಿ ಎಸೆತಕ್ಕೆ ಮುನ್ನ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನೊಳಗೇ ಇರಬೇಕೆಂದು ಸರಳ ನಿಯಮ ಅಗತ್ಯವಿದೆ’ ಎಂದು ಹರ್ಷ ಬೋಗ್ಲೆ ಟ್ವೀಟಿಸಿದ್ದಾರೆ. ನೋಬಾಲ್ ಮೇಲೆ ತೃತೀಯ ಅಂಪೈರ್ ಕಣ್ಣಿಡುವಂತೆ, ಬ್ಯಾಟ್ಸ್‌ಮನ್ ಎಸೆತಕ್ಕೆ ಮುನ್ನ ಕ್ರೀಸ್ ಬಿಡುವ ಬಗ್ಗೆಯೂ ಗಮನವಿಡಬೇಕು. ಅವರು ಎಸೆತಕ್ಕೆ ಮುನ್ನ ಕ್ರೀಸ್ ಬಿಟ್ಟರೆ ಆ ಎಸೆತದಲ್ಲಿ ರನ್ ನೀಡಬಾರದು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    ಭಾರತ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಮಾಜಿ ಆಟಗಾರ ಎಸ್. ಬದ್ರಿನಾಥ್, ನಾನ್-ಸ್ಟೈಕ್ ಬ್ಯಾಟ್ಸ್‌ಮನ್ ಬೇಗನೆ ಕ್ರೀಸ್ ಬಿಟ್ಟು ಔಟಾಗುವುದನ್ನು ಮಂಕಡಿಂಗ್ ಎಂದು ಕರೆಯುವುದನ್ನೇ ನಿಲ್ಲಿಸಬೇಕು. ಯಾಕೆಂದರೆ ನಿಯಮದ ಬಗ್ಗೆ ಅಲಕ್ಷ್ಯ, ಬೇಜವಾಬ್ದಾರಿ ಮತ್ತು ನ್ಯಾಯೋಚಿತವಲ್ಲದ ಲಾಭಕ್ಕಾಗಿ ಬ್ಯಾಟ್ಸ್‌ಮನ್ ಆ ರೀತಿ ಮಾಡುತ್ತಾರೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts