More

    ಕಣ್ಮನ ಸೆಳೆಯುತ್ತಿದೆ ವೃಕ್ಷೋದ್ಯಾನ, ಹೆಬ್ರಿಯಲ್ಲಿ ಇಂದು ಅರಣ್ಯ ಸಚಿವರಿಂದ ಲೋಕಾರ್ಪಣೆ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    17 ಎಕರೆ ಕಾನನದ ನಡುವೆ ನೈಸರ್ಗಿಕ ವೃಕ್ಷೋದ್ಯಾನ ನಿರ್ಮಾಣ. ಇದರಲ್ಲಿ ಮರಗಿಡಗಳು, ಪ್ರಾಣಿ -ಪಕ್ಷಿಗಳು, ಕುಟೀರಗಳು, ಔಷಧ ವನ, ಮೇಲ್ಛಾವಣಿ ನಡಿಗೆ, ಟ್ರಾಕಿಂಗ್ ಪಾತ್, ಬರ್ಡ್ ವ್ಯೂ ಪಾಯಿಂಟ್, ಚಾರಣ ಪಥ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು, ಚಿಣ್ಣರ ಅಂಗಳ ನೋಡುಗರ ಕಣ್ಮನ ಸೆಳೆಯಲಿದೆ.
    ಆಕರ್ಷಕ ಕಲಾಕೃತಿಗಳು, ವೈವಿಧ್ಯಮಯ ವೃಕ್ಷರಾಶಿ ಇಲ್ಲಿ ಕಣ್ಮನ ಸೆಳೆಯುತ್ತಿದೆ. ಪಶ್ಚಿಮಘಟ್ಟದ ತಪ್ಪಲಿನ ಹೆಬ್ರಿಯಲ್ಲಿ 17 ಎಕರೆ ಜಾಗದಲ್ಲಿ ವೃಕ್ಷೋದ್ಯಾನವನ ನಿರ್ಮಾಣವಾಗಿದೆ. ಪೆರ್ಡೂರು ಮಾರ್ಗವಾಗಿ ಹೆದ್ದಾರಿ ಮೂಲಕ ಹೆಬ್ರಿ ಪೇಟೆಗೆ ಪ್ರವೇಶ ಕಲ್ಪಿಸುವ ಅನತಿ ದೂರದಲ್ಲಿ ಇದನ್ನು ನೋಡಬಹುದು. ಉದ್ಯಾನವನಕ್ಕೆ ಆಕರ್ಷಕ ಪ್ರವೇಶ ದ್ವಾರ ನಿರ್ಮಿಸಿದ್ದು, ಮರದ ಪ್ರಾರ್ಥನೆಯನ್ನು ನಿವೇದಿಸಿದ ಬರಹ-ಕೃತಿ ಆಕರ್ಷಣೀಯವಾಗಿ ಮೂಡಿಬಂದಿದೆ.
    ನೀರಿನ ಕಾರಂಜಿ, ಹೂದೋಟ, ಮುಳಿ ಹುಲ್ಲಿನ ವಿಶ್ರಾಂತಿ ಚಪ್ಪರ ಮೊದಲಾದವು ಮನತಣಿಸಲಿದೆ. ಹಾಡಿಯಲ್ಲಿ ಮರಗಳ ನಡುವೆ ಜೋಕಾಲಿ, ಸಾಂಪ್ರದಾಯಿಕ ಎತ್ತಿನಗಾಡಿ, ಯಕ್ಷಗಾನ, ಭೂತ ಕೋಲ, ಕಂಬಳ, ಅಪೂರ್ವ ಪ್ರಾಣಿಗಳ ಕಲಾಕೃತಿ ಆಕರ್ಷಣೀಯವಾಗಿದೆ. ಕುಂದಾಪುರ ವಿಭಾಗ ಮಟ್ಟದ ಮೂರನೇ ಸಾಲುಮರದ ತಿಮ್ಮಕ್ಕ ಪಾರ್ಕ್ ಇದು. 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ವೃಕ್ಷೋದ್ಯಾನವನ್ನು ಜುಲೈ 10ರಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಲೋಕಾರ್ಪಣೆಗೊಳಿಸುವರು. 1600 ಮೀಟರ್ ವಾಕಿಂಗ್ ಪಾತ್ ಇದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು.

    ವೈಶಿಷ್ಟೃಗಳು
    ಪ್ರತಿದಿನ ಬೆಳಗ್ಗೆ 8ರಿಂದ ಸಾಯಂಕಾಲ 6ರ ತನಕ ಜನರಿಗೆ ಟ್ರೀ ಪಾರ್ಕಿಗೆ ಭೇಟಿ ನೀಡಲು ಅವಕಾಶ. ವಯಸ್ಕರಿಗೆ 20 ರೂ, ಮಕ್ಕಳಿಗೆ 10 ರೂ. ಟಿಕೆಟ್ ದರವಿದೆ. ಸುಸಜ್ಜಿತ ಬೇಲಿಯ ರಕ್ಷಣೆ ಇದ್ದು, ಸಿಸಿಟಿವಿ ಅಳವಡಿಸಲಾಗಿದೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಚೆಕ್ ಡ್ಯಾಂ ನಿರ್ಮಾಣವಾಗಿದೆ. ಪ್ರವಾಸಿಗರಿಗೆ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ. ಸಭೆ-ಸಮಾರಂಭಗಳು ನಡೆಸಲು ಸಭಾಂಗಣದ ವ್ಯವಸ್ಥೆಯೂ ಇದೆ. ಪ್ರಾಚೀನ ಔಷಧ ಗಿಡಮೂಲಿಕೆಗಳಾದ ಪಾಟಬಳ್ಳಿ, ಪಾದರಿ, ಜ್ಯೋತಿಮ್ಮತಿ, ಹಿಪ್ಪಲಿ, ಮಧುನಾಶಿನಿ, ಚಿತ್ರಮೂಲ, ನಾಗಕೇಸರ, ಈಶ್ವರಬಳ್ಳಿ, ಅಮೃತಬಳ್ಳಿ, ದೊಡ್ಡ ಪತ್ರೆ, ಬಿಲ್ವ ಪತ್ರೆ, ಅಶೋಕ ಇಂಥ ಗಿಡಮೂಲಿಕೆಗಳು ಈ ಪಾರ್ಕಿಗೆ ಒಂದು ರೂಪ ಕೊಟ್ಟಿದೆ.

    ಹೆಬ್ರಿಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣವಾಗಿದ್ದು, ಸಾಯಂಕಾಲ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಸೂಕ್ತ ಜಾಗವಾಗಿದೆ. ಔಷಧವನ ಮತ್ತು ಕಲಾಕೃತಿಗಳು ಬೆರಗುಗೊಳಿಸುವಂತಿದೆ. ಇವೆಲ್ಲವನ್ನು ಗಮನಿಸಿದಾಗ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಮಹತ್ತರ ಹೊಣೆಯೆಂದು ಭಾಸವಾಗುತ್ತದೆ.
    ಶ್ರೀಕಾಂತ್ ಪೂಜಾರಿ ಸ್ಥಳೀಯ ನಿವಾಸಿ

    ಹೆಬ್ರಿ ಸಾಲುಮರದ ತಿಮ್ಮಕ್ಕ ಪಾರ್ಕ್ ಸುಂದರ, ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಪ್ರಕೃತಿ, ಅರಣ್ಯ ಅಗತ್ಯದ ಬಗ್ಗೆ ವೃಕ್ಷೋದ್ಯಾನವನ ಉತ್ತಮ ಸಂದೇಶ ನೀಡಲಿದೆ. ಸ್ವಚ್ಛತೆ ಕಾಪಾಡುವುದು, ಪಾರ್ಕಿನ ನಿಯಮ ಪಾಲಿಸುವುದರೊಂದಿಗೆ ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡಲಿ.
    ಅನಿಲ್ ಕುಮಾರ್ ಬಿ., ವಲಯ ಅರಣ್ಯ ಅಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts