More

    ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ: ಸೂಚ್ಯಂಕ ಏಕದಿನ ದಾಖಲೆ ಕುಸಿತಕ್ಕೆ ಕಾರಣಗಳೇನು?

    ಮುಂಬೈ: ಬುಧವಾರ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ ನಡೆದು, ಸೂಚ್ಯಂಕವು ಏಕದಿನದಲ್ಲಿ ದಾಖಲೆ ಪ್ರಮಾಣದ ಕುಸಿತವನ್ನು ಕಂಡಿತು.

    30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 1,628 ಅಂಕಗಳು ಅಥವಾ 2.23% ಕುಸಿದು 71,500 ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 460 ಅಂಕಗಳು ಅಥವಾ 2.09% ರಷ್ಟು ಕುಸಿದು 21,572 ಕ್ಕೆ ತಲುಪಿತು. ಇದು ಕಳೆದ 18 ತಿಂಗಳುಗಳಲ್ಲಿ ಶೇಕಡಾವಾರು ಲೆಕ್ಕದಲ್ಲಿ ಒಂದೇ ದಿನದ ಅತಿಹೆಚ್ಚು ಸೂಚ್ಯಂಕ ಕುಸಿತವಾಗಿದೆ.

    ಏತನ್ಮಧ್ಯೆ, ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 4.53 ಲಕ್ಷ ಕೋಟಿ ರೂಪಾಯಿ ಕಡಿಮೆಯಾಗಿ 370.42 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಅಂದರೆ, ಬುಧವಾರ ಒಂದೇ ದಿನದಲ್ಲಿ ಬಿಎಸ್​ಇ ಹೂಡಿಕೆದಾರರು 4.53 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

    ಬಿಎಸ್​ಇ ಬೆಂಚ್‌ಮಾರ್ಕ್ ಸೂಚ್ಯಂಕಗಳಲ್ಲಿ ಅತ್ಯಧಿಕ ತೂಕದ ಸ್ಟಾಕ್ ಎಂದೇ ಪರಿಗಣಿತವಾದ ಎಚ್​ಡಿಎಫ್​ಸಿ ಬ್ಯಾಂಕ್​ ಷೇರುಗಳ ಬೆಲೆ ಬುಧವಾರ ಒಂದೇ ದಿನದಲ್ಲಿ 8.5% ನಷ್ಟು ಕಡಿಮೆಯಾಗಿದೆ,

    ನಿಫ್ಟಿ ಸೂಚ್ಯಂಕವು 460.35 ಅಂಕ ಅಥವಾ 2.09 ಶೇಕಡಾ ಕುಸಿದು 21,571.95 ಕ್ಕೆ ಸ್ಥಿರವಾಯಿತು, ನಿಫ್ಟಿ ಐಟಿ ಸೂಚ್ಯಂಕವನ್ನು ಹೊರತುಪಡಿಸಿ, ಎಲ್ಲಾ ವಲಯದ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಸಾಫ್ಟ್‌ವೇರ್ ಸೇವಾ ಕಂಪನಿಯಾದ L&T ಟೆಕ್ನಾಲಜಿ ಸರ್ವೀಸ್​, 2024ರ ಆರ್ಥಿಕ ವರ್ಷದಲ್ಲಿ ತನ್ನ ಆದಾಯದ ಬೆಳವಣಿಗೆಯ ಮುನ್ಸೂಚನೆಯನ್ನು ಉಳಿಸಿಕೊಂಡ ಹಿನ್ನೆಲೆಯಲ್ಲಿ ನಿಫ್ಟಿ ಐಟಿ ಸೂಚ್ಯಂಕವು 0.64% ನಷ್ಟು ಏರಿಕೆಯಾಗಿದೆ. ಈ ಕಂಪನಿಯ ಷೇರುಗಳ ಬೆಲೆಯು 3.5% ಜಿಗಿತವನ್ನು ಕಂಡಿವೆ.

    ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕವು ಶೇಕಡಾ 4ಕ್ಕಿಂತ ಕಡಿಮೆಯಾದರೆ, ನಿಫ್ಟಿ ಮೆಟಲ್, ರಿಯಾಲ್ಟಿ, ತೈಲ ಮತ್ತು ಅನಿಲ ಮತ್ತು ಆಟೋ ಸೂಚ್ಯಂಕಗಳು 1-3% ರಷ್ಟು ಕಡಿಮೆಯಾಗಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಮಂಗಳವಾರ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 73,427.59 ಅಂಕಗಳಿಗೆ ತಲುಪಿತ್ತು. ನಿಫ್ಟಿ ಕೂಡ ಮಂಗಳವಾರದಂದು ತನ್ನ ಜೀವಿತಾವಧಿಯ ಗರಿಷ್ಠ ಮಟ್ಟವಾದ 22,124.15 ಅಂಕಗಳಿಗೆ ಮುಟ್ಟಿತ್ತು.

    ಟಾಟಾ ಸ್ಟೀಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫಿನ್‌ಸರ್ವ್, ಮಾರುತಿ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ನಷ್ಟ ಅನುಭವಿಸಿದವು. ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ನೆಸ್ಲೆ ಮತ್ತು ಲಾರ್ಸೆನ್ ಆಂಡ್ ಟೂಬ್ರೊ ಷೇರುಗಳು ಲಾಭ ಗಳಿಸಿದವು.

    ಏಷ್ಯನ್ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ನಷ್ಟ ಕಂಡವು. ಐರೋಪ್ಯ ಮಾರುಕಟ್ಟೆಗಳು ತೀವ್ರ ಹಿನ್ನಡೆ ದಾಖಲಿಸಿದವು. ಅಮೆರಿಕ ಮಾರುಕಟ್ಟೆಗಳು ಕೂಡ ಮಂಗಳವಾರ ನಷ್ಟದಲ್ಲಿ ಮುಂದುವರಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 656.57 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts