More

    ಅಕ್ಷರ ಬಿತ್ತುವ ಕಾಯಕದೊಂದಿಗೆ ರಕ್ತದಾನ ಶಿಬಿರ ; ಮಧುಗಿರಿ ತಾಲೂಕಿನ ‘ಶಿಕ್ಷಕರ ಸ್ನೇಹ ಬಳಗ’ ಆಯೋಜನೆ

    ಮಧುಗಿರಿ : ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಅಕ್ಷರ ಬಿತ್ತುವ ಕಾಯಕದ ಜತೆಗೆ ಅವಕಾಶ ಸಿಕ್ಕರೆ ಸಮಾಜ ಸೇವೆಗೂ ಮುಂದಾಗುತ್ತಾರೆ ಎಂಬುದನ್ನು ತೋರಿಸಿ ಕೊಟ್ಟಿದೆ ತಾಲೂಕಿನ ರಕ್ತದಾನಿ ಶಿಕ್ಷಕರ ಸ್ನೇಹ ಬಳಗ.

    ರಕ್ತದಾನದ ಮಹತ್ವ ಅರಿತ ತಾಲೂಕಿನ 50 ಶಿಕ್ಷಕರು ‘ರಕ್ತದಾನಿ ಶಿಕ್ಷಕರ ಬಳಗ’ ಎಂಬ ತಂಡ ರಚಿಸಿಕೊಂಡು ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಪ್ರತಿ ವರ್ಷ ಜು.26ರಂದು ರಕ್ತದಾನ ಶಿಬಿರ ಆಯೋಜಿಸುತ್ತಿದ್ದಾರೆ. ಸ್ವತಃ ರಕ್ತದಾನ ಮಾಡುವ ಶಿಕ್ಷಕರು ಸಾರ್ವಜನಿಕರಿಗೂ ಅರಿವು ಮೂಡಿಸಿ ರಕ್ತದಾನ ಮಾಡಲು ಪ್ರೇರೇಪಿಸುತ್ತಿದ್ದಾರೆ. ಬಳಗ ಸತತ 3 ವರ್ಷಗಳಿಂದಲೂ ನಿರಂತರವಾಗಿ ಶಿಬಿರ ಆಯೋಜಿಸುತ್ತಿದ್ದು, ಅಂದಾಜು 250 ಯೂನಿಟ್‌ಗೂ ಹೆಚ್ಚು ರಕ್ತ ಸಂಗ್ರಹಿಸಿದೆ. ಅಲ್ಲದೆ, ಸುಮಾರು 110ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಿದೆ.

    ಈ ಬಾರಿ 4ನೇ ಶಿಬಿರ ಆಯೋಜಿಸಿದ್ದು, ಕರೊನಾ ಹಿನ್ನೆಲೆಯಲ್ಲಿ ರಕ್ತದಾನಕ್ಕೆ ಒತ್ತು ನೀಡಿದೆ. ಇದಲ್ಲದೆ ಕಳೆದ ವರ್ಷ ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಾಗ 5 ಲಕ್ಷ ರೂ. ಮೌಲ್ಯದ ದಿನಬಳಕೆ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಿದೆ. ಇವರ ಸಾಮಾಜಿಕ ಕಳಕಳಿಗೆ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇಂದು ರಕ್ತದಾನ ಶಿಬಿರ: ಪ್ರತಿ ವರ್ಷದಂತೆ ಈ ಬಾರಿ ಜು.27ರಂದು ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ದಾನಿಗಳು ಸಂಪರ್ಕಿಸಬಹುದು ಎಂದು ಶಿಕ್ಷಕರ ಬಳಗ ಮನವಿ ಮಾಡಿದೆ.

    ರಕ್ತದಾನ ಮಾಡುತ್ತಾರೆ ಸ್ವಾಮೀಜಿ: ರಕ್ತದಾನದ ಮಹತ್ವ ತಿಳಿಸುವ ಉದ್ದೇಶದಿಂದ ಶಿಬಿರ ಉದ್ಘಾಟನೆಗೆ ಬರುವ ಕೊರಟಗೆರೆ ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಪ್ರತಿ ವರ್ಷ ರಕ್ತದಾನ ಮಾಡಿ ಜಾಗೃತಿ ಮೂಡಿಸುತ್ತಾರೆ. ಈಗಾಗಲೇ 400ಕ್ಕೂ ಹೆಚ್ಚು ಜನರು ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿದ್ದರೆ ಶಿಕ್ಷಕರ ಬಳಗದ ಸದಸ್ಯರು, ರೋಗಿಗಳು ಇರುವ ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುತ್ತಾರೆ ಎನ್ನುತ್ತಾರೆ ಬಳಗದ ಶಶಿಕುಮಾರ್.

    ರಕ್ತದಾನ ಶಿಬಿರ ಆಯೋಜನೆ ಉತ್ತಮ ನಿರ್ಧಾರ. ಶಿಕ್ಷಕರ ಸ್ನೇಹ ಬಳಗ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ 4ನೇ ಬಾರಿ ಶಿಬಿರ ಆಯೋಜಿಸಿರುವುದು ಅಭಿನಂದನೀಯ. ಉತ್ತಮ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ.
    ಡಾ.ಜಿ.ವಿಶ್ವನಾಥ್ ತಹಸೀಲ್ದಾರ್

    ಕಾರ್ಗಿಲ್ ವಿಜಯೋತ್ಸವ ದಿನದಂದು ವೀರಯೋಧರ ಸ್ಮರಣಾರ್ಥ ಪ್ರತಿ ವರ್ಷ ರಕ್ತದಾನಿ ಶಿಕ್ಷಕರ ಸ್ನೇಹ ಬಳಗ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ರಕ್ತದಾನ ಶಿಬಿರ ಆಯೋಜಿಸುತ್ತಿದ್ದು, ಇದೊಂದು ಪುಣ್ಯದ ಕೆಲಸ. ಯುವಕರು, ಶಕ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು.
    ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕ್ಷೇತ್ರ ಸಿದ್ಧರಬೆಟ್ಟ, ಕೊರಟಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts