ರಾಹುಲ್ ಗಾಂಧಿ ನವಯುಗದ ರಾವಣ ಎಂದ ಬಿಜೆಪಿ; ಕಿಡಿಕಾರಿದ ಕಾಂಗ್ರೆಸ್

Rahul Gandhi
Published on

ನವದೆಹಲಿ: ಕಾಂಗ್ರೆಸ್​ ನಾಯಕ, ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಬಿಜೆಪಿ ನವಯುಗದ ರಾವಣ ಎಂದು ಕರೆಯುವ ಮೂಲಕ ಹೊಸ ವಿವಾದ ಒಂದನ್ನು ಹುಟ್ಟು ಹಾಕಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಬಿಜೆಪಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸೇಡಿನ ರಾಜಕೀಯಕ್ಕೂ ಒಂದು ಮಿತಿ ಇದೇ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಬಿಜೆಪಿ, ನವಯುಗದ ಆಧುನಿಕ ರಾವಣ ಇಲ್ಲಿದ್ದಾನೆ ನೋಡಿ. ಇವನು ದುಷ್ಟ, ಧರ್ಮ ಹಾಗೂ ರಾಮನ ವಿರೋಧಿಯಾಗಿದ್ದು, ಭಾರತವನ್ನು ನಾಶ ಮಾಡುವುದೇ ಅವನ ಪರಮ ಗುರಿ ಎಂದು ರಾಹುಲ್ ಗಾಂಧಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದೆ.

ಫಿಲ್ಮಿ ಸ್ಟೈಲ್‍ನಲ್ಲಿ ಪೋಸ್ಟರ್ ರೂಪಿಸಿರುವ ಬಿಜೆಪಿ, ಚಿತ್ರದ ಟೈಟಲ್‍ಗೆ ‘Ravan, a Congress party production, directed by George Soros’ ಎಂದು ಬರೆದುಕೊಂಡಿದೆ. ರಾಜಕೀಯ, ಟೀಕೆ ಏನೇ ಇರಲಿ, ಆದರೆ ಈ ರೀತಿ ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಸರಿಯಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ಷೇಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣೂಗೋಪಾಲ್, ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಬಿಜೆಪಿ ಈ ಕೃತ್ಯವನ್ನು ವರ್ಣಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಈ ಫೋಟೋ ಮೂಲಕ ಬಿಜೆಪಿಯವರು ಕೆಟ್ಟ ಉದ್ದೇಶ ಸ್ಪಷ್ಟವಾಗಿ ಹೊರಬಿದ್ದಿದೆ. ಬಿಜೆಪಿ ಆತನನ್ನು ಕೊಲ್ಲಲು ಬಯಸಿದ್ದು, ಇದರ ಭಾಗವಾಗಿ ಆತನಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ಹಿಂಪಡೆಯುವ ಮೂಲಕ ಕೊಳಕು ರಾಜಕೀಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ಧಾರೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net