More

    ನೂತನ ಪದಾಧಿಕಾರಿಗಳ ಸಭೆ ಉದ್ಘಾಟನೆ; ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ 28 ಲೋಕಸಭಾ ಸ್ಥಾನ ಗೆಲ್ಲುವ ಸವಾಲು: ಬಿವೈವಿ

    ಬೆಂಗಳೂರು:
    ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸುತ್ತಿದ್ದು, ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಾವೆಲ್ಲರೂ ಸವಾಲಾಗಿ ಸ್ವೀಕಾರ ಮಾಡಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಅದಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಕರೆ ನೀಡಿದರು.
    ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಅವರು, ಇಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುವ ಸಂದರ್ಭದಲ್ಲಿ ನಮ್ಮ ವಿರೋಧಿಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಕಿವಿ ಮಾತು ಹೇಳಿದರು.
    ಕೇಂದ್ರದಲ್ಲಿ 2 ಬಾರಿ ಕಾಂಗ್ರೆಸ್ಸೇತರ ಪಕ್ಷವಾಗಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿ ಆಗುವ ಎರಡನೇ ಮಹತ್ತರ ಕಾಲಘಟ್ಟದಲ್ಲೇ ಈ ಹೊಣೆ ನಮ್ಮೆಲ್ಲರ ಹೆಗಲಿಗೇರಿದೆ ಎಂದರು.
    ಪ್ರತಿ ಚುನಾವಣೆಯಲ್ಲೂ ಕೂಡ ವಿವಿಧ ರೀತಿಯ ಸವಾಲುಗಳಿರುತ್ತವೆ. ಆ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಸಾಧನೆ ಮಾಡಬೇಕಿದೆ ಎಂದರು.
    ಸ್ವಾತಂತ್ರ್ಯ ಬಂದ ಬಳಿಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಕೇಂದ್ರ ಸರಕಾರ ತಲುಪಿಸಿದೆ. ಪಕ್ಷದ ಕಾರ್ಯಕರ್ತರಿಗೆ ಬಲ ತುಂಬುವ ಜಿಪಂ, ತಾಪಂ, ಬಿಬಿಎಂಪಿ ಹಾಗೂ ವಿಧಾನಪರಿಷತ್ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

    ಮಹತ್ವದ ಹೊಣೆಗಾರಿಕೆ
    ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮಗೆಲ್ಲರಿಗೂ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಲಭಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕನಸು ನನಸಾಗುತ್ತಿದೆ. ಅದೇ ಕಾಲಘಟ್ಟದಲ್ಲಿ ನಮಗೂ ಜವಾಬ್ದಾರಿ ಲಭಿಸಿದೆ. ಆದ್ದರಿಂದ ನಾವೆಲ್ಲರೂ ಹೊಣೆಯರಿತು ಕರ್ತವ್ಯ ನಿರ್ವಹಿಸಬೇಕು ಎಂದರು.

    ವಿಶ್ರಾಂತಿ ಬದಿಗಿಡಿ
    ಲೋಕಸಭಾ ಚುನಾವಣೆ ತನಕ ಹಬ್ಬ, ಹರಿದಿನ, ಕುಟುಂಬ ಎಲ್ಲವನ್ನೂ ಬದಿಗಿಡಿ. ಲೋಕಸಭಾ ಚುನಾವಣೆಯ ಗುರಿ ಮುಟ್ಟುವತನಕ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆ ಉದ್ಭವ ಆಗಬಾರದು. ನರೇಂದ್ರ ಮೋದಿ ಅವರು ವಿಶ್ರಾಂತಿ ಪಡೆಯದೆ ಕಳೆದ ಒಂಬತ್ತೂವರೆ ವರ್ಷಗಳಿಂದ ನಿರಂತರವಾಗಿ ದೇಶಸೇವೆ ಮಾಡುತ್ತಿದ್ದಾರೋ ಅದೇ ಮಾದರಿಯಲ್ಲಿ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
    ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್.ಜಿ.ವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಪಿ.ರಾಜೀವ್, ಪ್ರೀತಮ್ ಗೌಡ, ನಂದೀಶ್ ರೆಡ್ಡಿ ಸೇರಿದಂತೆ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts