ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಈ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಅದರಲ್ಲೂ 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮೂರು ರಾಜ್ಯಗಳ ಗೆಲುವು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಯಲಾಗಿದ್ದು, ಬಿಜೆಪಿ ರಣೋತ್ಸಾಹದಲ್ಲಿದೆ. ಸದ್ಯ ಇದೇ ಖುಷಿಯಲ್ಲಿ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಸಾಧ್ಯತೆಗಳ ಕುರಿತು ಪಕ್ಷದ ಕೇಂದ್ರ ನಾಯಕತ್ವವು ಚರ್ಚೆ ನಡೆಸುತ್ತಿದೆ. ನಿನ್ನೆ (ಡಿ.05) ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಸಭೆ ನಡೆಸಲಾಗಿದೆ. ಈ ವೇಳೆ ಮೂರು ರಾಜ್ಯಗಳಲ್ಲಿರುವ ಮುಂಚೂಣಿ ನಾಯಕರನ್ನು ಪರಿಗಣಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಮುಖಗಳನ್ನು ಆಯ್ಕೆ ಮಾಡುವುದು ಬಿಜೆಪಿ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ಈ ಸಭೆಗೆ ಗೃಹ ಸಚಿವ ಅಮಿತ್ ಷಾ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕೂಡ ಭಾಗವಹಿಸಿದ್ದರು.
ಅಮಿತ್ ಷಾ ಮತ್ತು ಜೆಪಿ ನಡ್ಡಾ ಅವರು ಮೂರು ರಾಜ್ಯಗಳ ಬಿಜೆಪಿಯ ಉಸ್ತುವಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ರಾಜ್ಯ ನಾಯಕರ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಪ್ರಧಾನಿ ನೇತೃತ್ವದಲ್ಲಿ ನಿನ್ನೆ ಸಭೆ ನಡೆದಿದ್ದು, ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ಶೀಘ್ರದಲ್ಲೇ ಮೂರು ರಾಜ್ಯಗಳಿಗೆ ಕೇಂದ್ರ ಬಿಜೆಪಿ ವೀಕ್ಷಕರನ್ನು ನೇಮಿಸಲಿದ್ದು, ಈ ವೀಕ್ಷಕರು ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಭೆ ನಡೆಸಿ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನರೇಂದ್ರ ಸಿಂಗ್ ತೋಮರ್ ಮತ್ತು ಹಿರಿಯ ರಾಜ್ಯ ನಾಯಕ ಕೈಲಾಶ್ ವಿಜಯವರ್ಗಿಯಾ ಅವರೊಂದಿಗೆ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ.
ರಾಜಸ್ಥಾನದ ಸಿಎಂ ಸ್ಥಾನಕ್ಕೂ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅರ್ಜುನ್ ರಾಮ್ ಮೇಘವಾಲ್, ಪಕ್ಷದ ರಾಜ್ಯಾಧ್ಯಕ್ಷ ಸಿಪಿ ಜೋಶಿ ಮತ್ತು ಪ್ರಮುಖ ನಾಯಕರಾದ ದಿಯಾ ಕುಮಾರಿ ಮತ್ತು ಮಹಂತ್ ಬಾಲಕನಾಥ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಸಂಭಾವ್ಯರು ಎಂದು ಪರಿಗಣಿಸಲಾಗಿದೆ.
ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ ಸಾವೊ, ಧರ್ಮಲಾಲ್ ಕೌಶಿಕ್ ಮತ್ತು ಮಾಜಿ ಐಎಎಸ್ ಅಧಿಕಾರಿ ಓ.ಪಿ ಚೌಧರಿ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಆದಾಗ್ಯೂ ಕೇಂದ್ರ ಬಿಜೆಪಿ ನಾಯಕತ್ವವು ತನ್ನ ಆಯ್ಕೆಗಳೊಂದಿಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ ಎಂಬುದನ್ನು ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. (ಏಜೆನ್ಸೀಸ್)
ರಜಪೂತ ಸಂಘಟನೆ ಮುಖ್ಯಸ್ಥನ ಹತ್ಯೆ ವಿರೋಧಿಸಿ ರಾಜಸ್ಥಾನ ಬಂದ್ – ಪೊಲೀಸರ ಕಟ್ಟೆಚ್ಚರ
ಕತ್ರಿನಾ, ರಶ್ಮಿಕಾ, ಆಲಿಯಾ ನಂತರ ದೇಸಿ ಗರ್ಲ್ ಡೀಪ್‌ಫೇಕ್ ವಿಡಿಯೋ ವೈರಲ್