More

    ಗುಜರಾತ್​ನಲ್ಲಿ ಬಿಜೆಪಿಯಿಂದ ಎಎಪಿ ಅಭ್ಯರ್ಥಿ ಅಪಹರಣ: ಸಿಎಂ ಕೇಜ್ರಿವಾಲ್​, ಡಿಸಿಎಂ ಮನೀಶ್​ ಸಿಸೊಡಿಯಾ ಆರೋಪ ​

    ನವದೆಹಲಿ: ಗುಜರಾತ್​ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದರ ನಡುವೆಯೇ ಪ್ರಬಲ ಪ್ರತಿಸ್ಪರ್ಧಿ ಆಮ್​ ಆದ್ಮಿ ಪಕ್ಷ ಆಡಳಿತಾರೂಢ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. ನಮ್ಮ ಅಭ್ಯರ್ಥಿ ನಿನ್ನೆಯಿಂದ ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ. ಫೋನ್​ ಸಂಪರ್ಕಕ್ಕೂ ಸಿಗುತಿಲ್ಲ. ಬಿಜೆಪಿಯೇ ನಮ್ಮ ಅಭ್ಯರ್ಥಿಯನ್ನು ಅಪಹರಿಸಿದೆ ಎಂದು ದೂರಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೊಡಿಯಾ, ಎಎಪಿ ಪಕ್ಷದ ಗುಜರಾತ್​ ಅಭ್ಯರ್ಥಿ ಕಾಂಚನ್​ ಜರಿವಾಲರನ್ನು ಬಿಜೆಪಿ ಕಿಡ್ನ್ಯಾಪ್​ ಮಾಡಿದೆ ಎಂದು ಆರೋಪ ಮಾಡಿದ್ದಾರೆ. ಅಂದಹಾಗರೆ ಜರಿವಾಲ ಅವರು ಸೂರತ್​ (ಪೂರ್ವ) ಕ್ಷೇತ್ರದ ಎಎಪಿ ಅಭ್ಯರ್ಥಿ.

    ಗುಜರಾತ್ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಬಿಜೆಪಿಗೆ ಶುರುವಾಗಿದೆ. ಹೀಗಾಗಿ ನಮ್ಮ ಅಭ್ಯರ್ಥಿಯನ್ನು ಅಪಹರಿಸಿದೆ. ಜರಿವಾಲ ಮತ್ತವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ. ಜರಿವಾಲ ಅವರು ನಾಮಪತ್ರ ಪರಿಶೀಲನೆಗೆ ತೆರಳಿದ್ದರು. ನಾಮಪತ್ರ ಪರಿಶೀಲನೆ ಮುಗಿಸಿ ಕಚೇರಿಯಿಂದ ಹೊರ ಬಂದ ಕ್ಷಣದಲ್ಲೇ ಬಿಜೆಪಿಯ ಗೂಂಡಾಗಳು ಅವರನ್ನು ಕರೆದೊಯ್ದರು. ಈಗ ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ಮನೀಶ್​ ಸಿಸೋಡಿಯಾ ಹೇಳಿದ್ದಾರೆ.

    ಇದು ಕೇವಲ ಅಭ್ಯರ್ಥಿಯ ಅಪಹರಣ ಮಾತ್ರವಲ್ಲ, ಪ್ರಜಾಪ್ರಭುತ್ವದ ಅಪಹರಣವಾಗಿದೆ. ಇದು ನಿಜಕ್ಕೂ ಅಪಾಯಕಾರಿ ಸಿಸೊಡಿಯಾ ಕಿಡಿಕಾರಿದ್ದಾರೆ. ಅನೇಕ ಎಎಪಿ ನಾಯಕರು ಸಹ ಟ್ವೀಟ್​ ಮಾಡುವ ಮೂಲಕ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.

    ದೆಹಲಿ ಸಿಎಂ ಕೇಜ್ರಿವಾಲ್​ ಕೂಡ ಟ್ವೀಟ್​ ಮಾಡಿದ್ದು, ನಿನ್ನೆಯಿಂದ ಸೂರತ್​ (ಪೂರ್ವ) ಕ್ಷೇತ್ರದ ನಮ್ಮ ಅಭ್ಯರ್ಥಿ ಮತ್ತು ಅವರ ಕುಟುಂಬ ನಾಪತ್ತೆಯಾಗಿದೆ. ಮೊದಲು ನಾಮಪತ್ರ ತಿರಸ್ಕೃತಗೊಳಿಸಲು ಸರ್ವ ಪ್ರಯತ್ನ ಮಾಡಿದರು. ಆದರೆ, ನಾಮಪತ್ರ ಸ್ವೀಕೃತವಾಯಿತು. ಇದಾದ ಬಳಿಕ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಒತ್ತಾಯ ಮಾಡಿದರು. ಇದೀಗ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕೇಜ್ರಿವಾಲ್​ ಟ್ವೀಟ್​ ಮಾಡಿದ್ದಾರೆ.

    ಆದರೆ, ಈ ಆರೋಪಕ್ಕೆ ಇದುವರೆಗೂ ಬಿಜೆಪಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಬಿಜೆಪಿ ಏನು ಹೇಳುತ್ತದೆ ಎಂಬುದೇ ಸದ್ಯದ ಕುತೂಹಲವಾಗಿದೆ.

    ಇನ್ನು ಕಳೆದ 27 ವರ್ಷಗಳಿಂದ ಬಲಿಷ್ಠ ಬಿಜೆಪಿ ಪಕ್ಷವು ಗುಜರಾತ್​ ಗದ್ದುಗೆಯನ್ನು ಅಲಂಕರಿಸಿದ್ದು, ಈ ಬಾರಿ ಎಎಪಿ ಪ್ರಬಲ ಪೈಪೋಟಿಯನ್ನ ನೀಡಿದೆ. ಇದುವರೆಗೆ ಬಿಜೆಪಿಗೆ ಕಾಂಗ್ರೆಸ್​ ಮಾತ್ರ ಪ್ರಬಲ ಪತ್ರಿಸ್ಪರ್ಧಿಯಾಗಿತ್ತು. ಆದರೆ, ಎಎಪಿ ಕೂಡ ಬಿಜೆಪಿಗೆ ಬಹುದೊಡ್ಡ ಸವಾಲಾಗಿದ್ದು, ಗುಜರಾತ್​ ಚುನಾವಣಾ ಕಣ ಭಾರಿ ಕುತೂಹಲ ಕೆರಳಿಸಿದೆ.

    ಡಿಸೆಂಬರ್​​ 1 ಮತ್ತು 5ಕ್ಕೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್​ 8ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ‘ಬೆಂಗಳೂರು ಟೆಕ್​ ಶೃಂಗಸಭೆ’ಗೆ ಪ್ರಧಾನಿ ಮೋದಿ ಚಾಲನೆ: ತಂತ್ರಜ್ಞಾನಿಗಳು, ಉದ್ಯಮಿಗಳು ಭಾಗಿ

    ಹಣದ ಆಸೆಗೆ ಬಿದ್ದು ಸಾವಿಗೆ ಶರಣಾದ ಉಪನ್ಯಾಸಕಿ! ಡೆತ್​ನೋಟ್​ನಲ್ಲಿತ್ತು ಆಕೆಯ ಕಣ್ಣೀರಿನ ಕತೆ

    ಖಜಾನೆ ಕರ್ಮಕಾಂಡ ಬಯಲು: ಕೆ2 ತಂತ್ರಾಂಶದಲ್ಲಿ ನೂರೆಂಟು ಲೋಪ; ದುರ್ಬಳಕೆ ತಡೆಯೇ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts