More

    ಖಜಾನೆ ಕರ್ಮಕಾಂಡ ಬಯಲು: ಕೆ2 ತಂತ್ರಾಂಶದಲ್ಲಿ ನೂರೆಂಟು ಲೋಪ; ದುರ್ಬಳಕೆ ತಡೆಯೇ ಸವಾಲು

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಪ್ರತಿ ಇಲಾಖೆ, ಕಚೇರಿಯ ಹಣಕಾಸು ನಿರ್ವಹಣೆಯನ್ನು ಏಕೀಕೃತ ಚಾವಡಿ ಯಡಿ ತರುವ ತನ್ಮೂಲಕ ಮಾನವ ಹಸ್ತಕ್ಷೇಪ ಕಡಿಮೆ ಮಾಡುವ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ‘ಖಜಾನೆ-2’ನಲ್ಲಿನ ಕರ್ಮಕಾಂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಕಗ್ಗಂಟು ಬಿಡಿಸುವ ಅನಿವಾರ್ಯತೆ ಎದುರಾಗಿದೆ. ಅಂತಿಮವಾಗಿ ಈ ತಂತ್ರಾಂಶದ ನಿಯಂತ್ರಣ ಖಾಸಗಿ ನಿರ್ವಹಣಾ ಸಂಸ್ಥೆ ಕೈಯಲ್ಲಿರುವುದು ಕೂಡ ಅಪಾಯಕಾರಿ ಎಂದೇ ವಿಶ್ಲೇಷಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಪ್ರಕಾರ ಸರ್ಕಾರಿ ನೌಕರರು ಸೇವಾ ನಿವೃತ್ತಿ ಬಳಿಕವೂ ಖಜಾನೆ-2 ತಂತ್ರಾಂಶ ಬಳಕೆ ಮಾಡಿದ್ದಾರೆ. ಸೇವಾ ನಿವೃತ್ತಿಯ ನಂತರದ ಪ್ರಯೋಜನಗಳನ್ನು ಎರಡೆರಡು ಬಾರಿ ಪಡೆದಿರುವುದು, ಅಮಾನತುಗೊಂಡಾಗಲೂ ಹಲವು ಸಿಬ್ಬಂದಿ ಈ ವೇದಿಕೆ ಬಳಸಿ ಅನ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದು, ನಿಧನರಾಗಿರುವವರಿಗೂ ವೇತನ ಪಾವತಿಯಾಗಿರುವಂತಹ ಪ್ರಸಂಗಗಳು ಬೆಳಕಿಗೆ ಬಂದಿವೆ.

    ಖಜಾನೆ ಪುರಾಣ: ಖಜಾನೆ-2 ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣಾ ವ್ಯವಸ್ಥೆಯಾಗಿದ್ದು, ಸರ್ಕಾರದ ಆರ್ಥಿಕ ವಹಿವಾಟುಗಳನ್ನು ಸಮಗ್ರವಾಗಿ ನಿರ್ವಹಿಸುವ ಉದ್ದೇಶಕ್ಕಾಗಿ ಅನುಷ್ಠಾನಗೊಂಡಿದೆ. ಯಾವುದೇ ಸ್ಥಳದಿಂದ- ಯಾವುದೇ ಸಮಯದಲ್ಲಿ ಸಂದಾಯ ಮಾಡುವ ಅನುಕೂಲತೆಯೊಂದಿಗೆ ಮತ್ತು ಸರ್ಕಾರಕ್ಕೆ ಸಂದಾಯ ಮಾಡುವ ವಿಧಾನವನ್ನು ಸರಳೀಕೃತಗೊಳಿಸಲು, ವಿವಿಧ ಇಲಾಖೆಗಳು ತಮ್ಮ ಗ್ರಾಹಕರಿಗೆ ಸಂದಾಯ ಮಾಡಲು ಅವಕಾಶ ಮಾಡಿಕೊಡುವ ವ್ಯವಸ್ಥೆ. ಅಲ್ಲದೆ, ಎಲ್ಲ ಮುಖ್ಯ ನಿಯಂತ್ರಣಾಧಿಕಾರಿಗಳು, ನಿಯಂತ್ರಣಾಧಿಕಾರಿಗಳು ಮತ್ತು ಹಣ ಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಸರ್ಕಾರದ ಪರವಾಗಿ ಹಣಕಾಸಿನ ಚಟುವಟಿಕೆಗಳನ್ನು ನಿರ್ವಹಿಸಲು ಇದು ಅನುಕೂಲ ಕಲ್ಪಿಸುತ್ತದೆ.

    ಸರ್ಕಾರ 2011ರಲ್ಲಿ ರಾಜ್ಯದಲ್ಲಿನ ಖಜಾನೆಗಳನ್ನು ಸ್ವಯಂಚಾಲಿತಗೊಳಿಸಲು ಖಜಾನೆ ಗಣಕೀಕರಣ ಯೋಜನೆ ಖಜಾನೆ ಕೆ-2 ಅನ್ನು ಅನುಷ್ಠಾನಗೊಳಿಸಿತ್ತು. ಇದರಲ್ಲಿ ಮಾನವಚಾಲಿತ ಸಂವಹನಗಳಿಲ್ಲದೆ ನೇರವಾಗಿ ‘ಸಿಸ್ಟಮ್ ಟು ಸಿಸ್ಟಮ್ ಮಾಹಿತಿ ವಿನಿಮಯ ಸಕ್ರಿಯಗೊಳಿಸಲು ಎಲ್ಲ ಇಲಾಖೆಗಳನ್ನು ಸಮಗ್ರ ವ್ಯವಸ್ಥೆಯಲ್ಲಿ ತರಲು ಯೋಜಿಸಿತ್ತು. 2013ರ ವೇಳೆ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಎಲ್ಲ ಪ್ರಕಾರಗಳಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂಬ ಗುರಿ ಇದ್ದರೂ, 2022ರ ನವೆಂಬರ್​ವರೆಗೂ ಅದು ಪೂರ್ಣಗೊಂಡಿಲ್ಲ ಎಂಬುದು ಗಮನಾರ್ಹ ಸಂಗತಿ.

    ಕೆ2 ತನ್ನ ವ್ಯಾಪ್ತಿಯನ್ನು ನಾಗರಿಕರಿಗೆ ವಿಸ್ತರಿಸಲು ಮತ್ತು ಸರ್ಕಾರದ ಜಮೆಗಳ ಪ್ರಕ್ರಿಯೆಗಳನ್ನು ಸರಳಗೊಳಿಸಲು, ವ್ಯವಸ್ಥಿತಗೊಳಿಸಲು ಸಹ ಪ್ರಸ್ತಾಪಿಸಿತ್ತು. ಉನ್ನತೀಕರಣ, ಏಕೀಕರಣ, ವ್ಯವಹಾರ ಪ್ರಕ್ರಿಯೆ ಮರು ಸಂಯೋಜನೆ, ಮಾಹಿತಿ ವ್ಯವಸ್ಥೆ ನಿಯಂತ್ರಣಗಳು, ಸ್ವತ್ತುಗಳನ್ನು ರಕ್ಷಿಸುವುದು, ದತ್ತಾಂಶ ಸಂಗ್ರಹ- ಭದ್ರತೆ, ಸರ್ಕಾರದ ಹಣಕಾಸಿನ ಕಾರ್ಯಾಚರಣೆಗಳ ಪರಿಣಾಮಕಾರಿತ್ವ, ದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿತ್ತು.

    ಹಲವಾರು ಲೋಪಗಳು

    • ಕೆ-2ನಲ್ಲಿ 22 ಮಾಡ್ಯೂಲ್ ಅಭಿವೃದ್ಧಿಪಡಿ ಸಲಾಗಿದೆ. ಆದರೆ, ಸಾಕಷ್ಟು ಮಾಡ್ಯೂಲ್​ಗಳು ಬಳಕೆಯಲ್ಲಿಲ್ಲ. ಪರಿಕಲ್ಪನೆಯ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರವೂ ಎಲ್ಲ ಯೋಜಿತ ಉದ್ದೇಶ ಮತ್ತು ನಿರೀಕ್ಷಿತ ಅಂತಿಮ ಫಲಿತಾಂಶ ಸಾಧಿಸಲು ಸಾಧ್ಯವಾಗಿಲ್ಲ.
    • ಆಯವ್ಯಯ ತಯಾರಿಕೆ, ವೆಚ್ಚದ ಜಾಡು ಹಿಡಿಯುವಿಕೆ, ನಗದು ನಿರ್ವಹಣೆ, ಸರ್ಕಾರಿ ಸಾಲ ಮತ್ತು ಖಾತರಿ ನಿರ್ವಹಣೆ, ಹಣಕಾಸು ಸ್ವತ್ತುಗಳ ನಿರ್ವಹಣೆ ಕಾರ್ಯಗಳಲ್ಲಿ ಕೆ2 ಅಪೂರ್ಣವಾಗಿದೆ.
    • ಪಾಸ್​ವರ್ಡ್ ದುರ್ಬಲತೆ ಬಳಸಿಕೊಂಡು ನಿರ್ಬಂಧಗಳ ಉಲ್ಲಂಘನೆ, ಬಿಲ್ ಸಂಸ್ಕರಣೆಯಲ್ಲಿ ಹಸ್ತಕ್ಷೇಪದಂತಹ ಸಾಧ್ಯತೆಗಳು ಕಂಡುಬಂದಿವೆ.
    • ಸೂಕ್ಷ್ಮ ಹಣಕಾಸಿನ ಮಾಹಿತಿಯನ್ನು ಸೂಕ್ತವಲ್ಲದವರಿಗೆ ಒದಗಿಸುವ, ದುರುಪಯೋಗಕ್ಕೆ ಒಡ್ಡುವ ಸಂಭಾವ್ಯತೆ ಕಾಣಿಸಿದೆ. ಮಾಹಿತಿ ಗೌಪ್ಯತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅಪಾಯವಿದೆ.

    ಗುತ್ತಿಗೆದಾರನ ಕೈಯಲ್ಲಿ ಸರ್ಕಾರದ ಜುಟ್ಟು: ಕೆ2 ಅಪ್ಲಿಕೇಶನ್ ಆಂತರಿಕ ರಚನಾ ವಿನ್ಯಾಸ ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿರುವ ಅಪ್ಲಿಕೇಶನ್ ಸೋರ್ಸ್ ಕೋಡ್ ಮತ್ತು ವಿವರವಾದ ದತ್ತಾಂಶವನ್ನು ಇಲಾಖೆಯು ತನ್ನ ಸುಪರ್ದಿಗೆ ಪಡೆದಿಲ್ಲ ಎಂಬುದು ಗಮನಾರ್ಹ ಸಂಗತಿ. 2024ರೊಳಗೆ ಅದನ್ನು ಪಡೆದುಕೊಳ್ಳಲಾಗುವುದೆಂಬ ಆಶಾಭಾವನೆ ಆರ್ಥಿಕ ಇಲಾಖೆಯದ್ದಾಗಿದೆ. ರಾಜ್ಯ ಸರ್ಕಾರವು ತನ್ನದೇ ಹೂಡಿಕೆಯಿಂದ ಅಭಿವೃದ್ಧಿಪಡಿಸಿ ಪ್ರಮುಖ ಸ್ವತ್ತಾದ ಕೆ2 ಅಪ್ಲಿಕೇಶನ್ ಮೇಲೆ ನಿಯಂತ್ರಣವನ್ನೇ ಹೊಂದಿಲ್ಲ. ಹೀಗಾಗಿ ತಾಂತ್ರಿಕ ಸಂಯೋಜಕರ ಮೇಲೆ ಅವಲಂಬನೆ ಹೊಂದಬೇಕಾಗಿದೆ. ಅಂದರೆ ಒಟ್ಟಾರೆ ಗುತ್ತಿಗೆ ಪಡೆದ ಖಾಸಗಿಯವರ ಹಿಡಿತದಲ್ಲೇ ಇದೆ.

    ಅಕ್ರಮಗಳಿಗೆ ಉದಾಹರಣೆಗಳು

    • ಅಂಕಿಅಂಶಗಳ ಪ್ರಕಾರ 434 ನೌಕರರ ಕೆಜಿಐಡಿ ಬಿಲ್​ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಸಂಸ್ಕರಿಸಿರುವುದು ಗಮನಕ್ಕೆ ಬಂದಿದೆ. 45.80 ಕೋಟಿ ರೂ. ಮೊತ್ತದ 873 ಇಂಥ ಪ್ರಕರಣಗಳಿದ್ದು, ನಾಲ್ಕು ವೈಯಕ್ತಿಕ ಕೆಜಿಐಡಿಗೆ ಸೇರಿದ ಎಂಟು ಬಿಲ್​ಗಳನ್ನು ಒಂದೇ ಮೊತ್ತದೊಂದಿಗೆ ಎರಡೆರಡು ಬಾರಿ ಸಲ್ಲಿಸಲಾಗಿದೆ. ಒಂದು ಉದಾಹರಣೆ ಎಂದರೆ (ಇಡಿಎನ್ 82611) ಒಬ್ಬ ಉದ್ಯೋಗಿಗೆ ಅಂತಿಮವಾಗಿ ಹಿಂಪಡೆಯುವ ಜಿಪಿಎಫ್ ಮೊತ್ತ 10,07,314 ರೂ.ಗಳನ್ನು ಎರಡು ಬಾರಿ (2019 ಏಪ್ರಿಲ್ ಮತ್ತು ಮೇನಲ್ಲಿ) ಪಾವತಿಸಲಾಗಿದೆ.
    • ಉದ್ಯೋಗಿಗೆ ನಿವೃತ್ತಿ ಲಾಭ ಪಾವತಿಸುವುದು ಆತ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ ಎಂಬುದರ ಸೂಚನೆಯಾಗಿದೆ. ಉದ್ಯೋಗಿ ನಿವೃತ್ತಿಯಾದ ನಂತರ ನಿವೃತ್ತಿ ಸಂಗತಿಯನ್ನು ದಾಖಲಿಸಲು ಕೆ2ನಲ್ಲಿ ಇಂದೀಕರಿಸಬೇಕು. 257 ಉದ್ಯೋಗಿಗಳಿಗೆ 2019-20ರಲ್ಲಿ ಅವರ ಜಿಪಿಎಫ್ ಅಂತಿಮ ಬಿಲ್ ಪಾವತಿ ನಂತರವೂ 1,53,35,067 ರೂ. ವೇತನ ಪಾವತಿಸಿರುವುದು ಕಂಡುಬಂದಿದೆ.
    • ಸ್ವಯಂ ನಿವೃತ್ತಿ ಆಧಾರದ ಮೇಲೆ 30 ನವೆಂಬರ್ 2019ರಲ್ಲಿ ನಿವೃತ್ತರಾದವರಿಗೆ 2 ಮಾರ್ಚ್ 2020 ರಂದು ಅವರ ಜಿಪಿಎಫ್ ಅಂತಿಮ ಪಾವತಿ ಬಿಲ್ಲನ್ನು ಅಂಗೀಕರಿಸಲಾಯಿತು. ಆದರೆ, ಇದೇ ಉದ್ಯೋಗಿಗೆ 2020-21ರ ಅವಧಿಯಲ್ಲೂ ವೇತನ ಪಾವತಿ ಮುಂದುವರಿಸಲಾಗಿತ್ತು.
    • ಅಮಾನತುಗೊಂಡ ಉದ್ಯೋಗಿಗಳಿಂದಲೂ ಕೆ2 ಬಳಕೆಯಾಗಿ ರುವುದು ಕಂಡುಬಂದಿದೆ. ಅಮಾನತುಗೊಂಡ ಕೂಡಲೇ ಸಾಫ್ಟ್ ವೇರ್​ನಲ್ಲಿ ಅಪ್ಡೇಟ್ ಮಾಡುವ ವ್ಯವಸ್ಥೆ ಇಲ್ಲ. 254 ಪ್ರಕರಣಗಳಲ್ಲಿ ಈ ರೀತಿಯಾಗಿದ್ದು, 10 ನೌಕರರು (ಬಳಕೆದಾರರು) 81.95 ಲಕ್ಷ ರೂ. ಮೌಲ್ಯದ ವಿವಿಧ ಪ್ರಕಾರಗಳ 55 ಬಿಲ್​ಗಳ ಪ್ರಕ್ರಿಯೆ ನಡೆಸಿದ್ದಾರೆ.
    • ಸರ್ಕಾರಿ ಸೇವೆಯಿಂದ ಬಿಡುಗಡೆಗೊಂಡ ಬಳಿಕವೂ ಈ ಸಾಫ್ಟ್​ವೇರ್ ಬಳಕೆಯಾಗಿದೆ. ನಿವೃತ್ತಿಯಾದ ಕೂಡಲೇ ಅವರ ಖಾತೆ ನಿಷ್ಕ್ರಿಯಗೊಳಿಸಬೇಕು. ಇದು ತಡವಾಗುತ್ತಿದೆ. 166 ಬಳಕೆದಾರರು 2,412 ಕೋಟಿ ರೂ. ಸಂಬಂಧ 4,967 ಬಿಲ್​ಗಳ ಪ್ರಕ್ರಿಯೆ ನಡೆಸಿದ್ದರು. ಅವರು ಈ ವೇದಿಕೆಯಿಂದ ನಿಷ್ಕ್ರಿಯ ಗೊಳ್ಳಬೇಕಾದ ದಿನಾಂಕ ಮತ್ತು ನಿಷ್ಕ್ರಿಯಗೊಂಡ ವಾಸ್ತವ ದಿನಾಂಕದ ನಡುವೆ ಮಧ್ಯಂತರ ಅವಧಿಯಲ್ಲಿ ಈ ಪ್ರಕ್ರಿಯೆಗಳು ನಡೆದಿವೆ. ಇದಕ್ಕೊಂದು ಉದಾಹರಣೆ ಎಂದರೆ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಎಂಬುವರು 2020ರ ಮೇ 31ರಂದು ಸೇವೆಯಿಂದ ನಿವೃತ್ತರಾದರೂ, ಜುಲೈನಲ್ಲಿ 4,54,194 ಮೊತ್ತದ 47 ಬಿಲ್​ಗಳನ್ನು ಪ್ರಕ್ರಿಯೆಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts