More

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಆನೇಕಲ್: ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು, ಸಾಕ್ಷಿ ಎಂಬಂತೆ ಎರಡು ಮಕ್ಕಳು ಕೂಡ ಆಗಿದ್ದವು. ಗಂಡ ಹೆಂಡತಿ ನಡುವೆ ಜಗಳ ಆಗಿ ಪತ್ನಿ ಮನೆ ಸೇರಿದ್ದಳು. ಪತಿ 45 ದಿನಗಳ ಬಳಿಕ ಪತ್ನಿ ಮನೆಗೆ ಬಂದಾಗ ಮನೆಯಲ್ಲಿ ಮಗ ಇರಲಿಲ್ಲ, ಸ್ವತಃ ತಾಯಿಯೇ ತನ್ನ ಮಗನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಳು. ಹೀಗೆ ಒಂದೂವರೆ ವರ್ಷದ ಮಗನನ್ನು ಕಳೆದುಕೊಂಡಿದ್ದ ಅಪ್ಪ ನಾಲ್ಕೂವರೆ ವರ್ಷಗಳ ಹುಡುಕಾಟದ ಬಳಿಕ ಆತನನ್ನು ಮರಳಿ ಪಡೆದಂತಹ ಘಟನೆ ನಡೆದಿದೆ.

    ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮಮತಾ ಎಂಬಾಕೆಯನ್ನು 2012ರಲ್ಲಿ ಬೆಂಗಳೂರಿನ ಜಯನಗರದ ಬಾಲಮಣಿ ಎಂಬಾತ ಪ್ರೀತಿಸಿ ಮದುವೆಯಾಗಿ ಮನೆ ಮಾಡಿಕೊಂಡು ವಾಸವಿದ್ದ. ಇಬ್ಬರಿಗೆ ಜನಿಸಿದ್ದ ಹೆಣ್ಣು ಮಗು ವಿಕಲಚೇತನ ಆಗಿತ್ತು, ಎರಡನೆಯದ್ದು ಗಂಡು ಮಗು. ಮಗ ಜನಿಸಿದ ಒಂದೂವರೆ ವರ್ಷ ಕಾಲ ಗಂಡ ಹೆಂಡತಿ ಮಕ್ಕಳು ಚೆನ್ನಾಗಿಯೇ ಇದ್ದರು. 2018ರಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗಿ ಬಾಲಮಣಿ, ಬೆಂಗಳೂರಿನ ಜಯನಗರದ ನಿವಾಸಕ್ಕೆ ಹೋಗಿದ್ದಾನೆ. ಆತ 45 ದಿನಗಳ ಬಳಿಕ ಮರಳಿ ಬಳ್ಳೂರಿಗೆ ಬಂದಾಗ ಮನೆಯಲ್ಲಿ ಹೆಣ್ಣು ಮಗು ಮಾತ್ರ ಇತ್ತು, ಗಂಡು ಮಗು ಇರಲಿಲ್ಲ. ಆಗ ಪತ್ನಿ ಮಮತಾಳನ್ನು ಪ್ರಶ್ನೆ ಮಾಡಿದಾಗ ಕುಟುಂಬದ ಬೇರೆಯವರ ಮನೆಯಲ್ಲಿ ಮಗು ಇರುವುದಾಗಿ ಹೇಳಿದ್ದಾಳೆ. ವಾರ ಕಳೆದರೂ ಕೂಡ ಮಗು ಎಲ್ಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ಮಮತಾ ಪತಿಗೆ ನೀಡಲಿಲ್ಲ. ಆಗ ಮಮತಾ ಮಗುವನ್ನು ಏನೋ ಮಾಡಿದ್ದಾಳೆ ಎಂದು ಆತಂಕಕ್ಕೆ ಒಳಗಾಗಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಮಮತಾ ಹೊಸೂರು ಸಮೀಪದ ಸಿಪ್ ಕಾಟ್ ಪೋಲಿಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ, ಪೊಲೀಸರು ಠಾಣೆಗೆ ಬಾಲಮಣಿಯನ್ನು ಕರೆದು ಬುದ್ದಿವಾದ ಹೇಳುತ್ತಿದ್ದಾಗಲೇ ಹೆಣ್ಣು ಮಗುವನ್ನೂ ತಾಯಿ ಬಿಟ್ಟು ಹೋಗಿದ್ದಾಳೆ.

    ಇತ್ತ ತಾಯಿ ಬಿಟ್ಟು ಹೋದ ಹೆಣ್ಣು ಮಗುವಿನೊಂದಿಗೆ ಬಾಲಮಣಿ ಬೆಂಗಳೂರಿನ ಜಯನಗರದ ನಿವಾಸಕ್ಕೆ ವಾಪಸಾಗಿದ್ದ. ಎಷ್ಟು ದಿನ ಕಳೆದರೂ ಪತ್ನಿ ಮಮತಾ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ತನ್ನ ಮಗನನ್ನು ಕಳೆದುಕೊಂಡ ಬಾಲಮಣಿ ಹುಡುಕಾಟಕ್ಕೆ ಇಳಿದಿದ್ದಾನೆ, ಬಳ್ಳೂರು ಗ್ರಾಮದಲ್ಲಿನ ಮಹಿಳೆ ಒಬ್ಬರು ಒಂದೂವರೆ ವರ್ಷ ಇದ್ದಾಗಲೇ ಮಗುವನ್ನು ತಮಿಳುನಾಡಿನ ವ್ಯಕ್ತಿ ಒಬ್ಬನ ಮೂಲಕ ಬೇರೆಯವರಿಗೆ ಮಾರಾಟ ಮಾಡಿರುವುದು ಗೊತ್ತಾಗುತ್ತದೆ.

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!
    ಮಗನೊಂದಿಗೆ ತಂದೆ

    ಬಾಲಮಣಿ ಹೆಣ್ಣು ಮಗುವನ್ನು ಹಾಸ್ಟೆಲ್​ಗೆ ಸೇರಿಸಿ ವಿದ್ಯಾಭ್ಯಾಸ ನೀಡುತ್ತಾ, ಕಳೆದ ನಾಲ್ಕೂವರೆ ವರ್ಷದಿಂದ ತನ್ನ ಮಗನಿಗಾಗಿ ತಮಿಳುನಾಡಿನ ಹಲವಡೆ ಹುಡುಕಾಟ ನಡೆಸಿದ್ದಾನೆ. ಮಗು ತಮಿಳುನಾಡಿನ ಈರೋಡಿನಲ್ಲಿ ಇರುವುದು ಗೊತ್ತಾದರೂ ಪೊಲೀಸರು ಸಹಕಾರ ನೀಡದ್ದರಿಂದ ಕರೆದುಕೊಂಡು ಬರಲು ಆಗಿರಲಿಲ್ಲ. ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ, ಹಾಲಿ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಭಾಸ್ಕರ್ ರಾವ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ.

    ಆನಂತರ ಪೊಲೀಸರು ತಮಿಳುನಾಡಿನ ಈರೋಡ್​ನಲ್ಲಿ ಇರುವ ಮಗುವನ್ನು ಅತ್ತಿಬೆಲೆ ಠಾಣೆಗೆ ಕರೆತಂದು ಮಗುವಿನ ತಂದೆಗೆ ಒಪ್ಪಿಸಿದ್ದು, ಮಗನನ್ನು ನೋಡಿದ ಬಾಲಮಣಿ ತಬ್ಬಿಕೊಂಡು ಮಗುವನ್ನು ಮುದ್ದಾಡಿದ್ದಾನೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ನಾಲ್ಕೈದು ಜನರ ಕೈ ಬದಲಾಗಿ ಹಳ್ಳಿಯೊಂದರಲ್ಲಿ ಸೇರಿದ್ದ ಮಗುವನ್ನು ಮರಳಿ ಸೇರಿಸಲು ಜೊತೆಗೆ ನಿಂತ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಹಲವಾರು ಕಡೆ ಪೊಲೀಸರ ಸಹಕಾರಗಳನ್ನು ಪಡೆದು ಅತ್ತಿಬೆಲೆ ಪೊಲೀಸ್ ಇನ್​ಸ್ಪೆಕ್ಟರ್​ ಕೆ.ವಿಶ್ವನಾಥ್ ಅವರ ಸಹಕಾರದೊಂದಿಗೆ ಮರಳಿ ಮಗುವನ್ನು ಕರೆತಂದಿದ್ದಾರೆ. ತಂದೆ ತಾಯಿಯಿಂದ ದೂರವಾಗಿದ್ದ 6 ವರ್ಷದ ಗಂಡು ಮಗು ಹೆತ್ತ ತಾಯಿಗೆ ಬೇಡವಾದರೂ ಮರಳಿ ತಂದೆಯ ಜೊತೆ ಸೇರಿದ್ದು ನಾಲ್ಕುವರೆ ವರ್ಷಗಳ ಕಾಲ ಹುಡುಕಾಡಿದ ತಂದೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚಲೇಬೇಕು.

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!
    ಮಗು ಪತ್ತೆಗೆ ನೆರವಾದ ಆಮ್ ಆದ್ಮಿ ಪಕ್ಷದ ಸದಸ್ಯರು

    ಬಳ್ಳೂರಿನಿಂದ ತಾಯಿ ಮಮತಾ ಕವಿತಾ ಎಂಬಾಕೆಯ ಮೂಲಕ ಮಗುವನ್ನು ತಮಿಳುನಾಡಿಗೆ ನೀಡಿದ್ದಳು. ಆದರೆ ಮಗು ಮೂರ್ನಾಲ್ಕು ಜನರ ಕೈ ಬದಲಾಗಿ ಕೊನೆಗೆ ಈರೋಡಿನಲ್ಲಿರುವ ಮಕ್ಕಳಿಲ್ಲದ ಬಡ ತಂದೆ ತಾಯಿಯ ಕೈ ಸೇರಿತ್ತು. ಒಂದೂವರೆ ವರ್ಷ ಇದ್ದ ಮಗುವನ್ನು ಕಳೆದ ನಾಲ್ಕೂವರೆ ವರ್ಷಗಳಿಂದ ನಿರಂತರವಾಗಿ ಆರೈಕೆ ಮಾಡಿದ ತಮಿಳುನಾಡಿನ ಈರೋಡಿನ ಕುಟುಂಬ ಮಗುವನ್ನು ಮತ್ತೆ ತಂದೆಗೆ ನೀಡುವ ಸಂದರ್ಭದಲ್ಲಿ ಕಣ್ಣೀರು ಹಾಕಿಕೊಂಡ ದೃಶ್ಯ ಕಂಡು ಬಂತು, ತಂದೆಗೆ ಮಗ ಸಿಕ್ಕಿದ ಸಂತೋಷವಾದರೆ, ಅತ್ತ ನಾಲ್ಕೂವರೆ ವರ್ಷಗಳಿಂದ ಆರೈಕೆ ಮಾಡಿದ ಕುಟುಂಬದ ನೋವು ಕರುಳು ಹಿಸುಕುವಂತಿತ್ತು.

    ನಾನು ಮಮತಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದೆ. ಆದರೆ ಆಕೆ ಇಬ್ಬರು ಮಕ್ಕಳನ್ನೂ ಬಿಟ್ಟು ಹೋಗಿದ್ದು, ನಾನು ನನ್ನ ಮಗನಿಗಾಗಿ ನಾಲ್ಕೂವರೆ ವರ್ಷಗಳ ಕಾಲ ಹುಡುಕಾಡಿದ್ದೆ. ನನಗೆ ಸಹಕಾರ ನೀಡಿದ ಆಮ್ ಆದ್ಮಿ ಪಾರ್ಟಿ ಹಾಗೂ ಅತ್ತಿಬೆಲೆ ಪೊಲೀಸರ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ.
    | ಬಾಲಮಣಿ ತಂದೆ

    ಆಮ್ ಆದ್ಮಿ ಪಾರ್ಟಿ ಸದಸ್ಯರು ಒಂದು ದಿನ ಜಯನಗರದಲ್ಲಿ ಪಕ್ಷದ ಪ್ರಚಾರದ ಸಂದರ್ಭದಲ್ಲಿ ಹೋಗುತ್ತಿದ್ದಾಗ ಬಾಲಮಣಿ ಎಂಬುವವರು ನಮ್ಮ ಬಳಿ ಮಗುವನ್ನು ಕಳೆದುಕೊಂಡು ಪರದಾಡುತ್ತಿರುವ ಬಗ್ಗೆ ಮಾಹಿತಿ ತಿಳಿಸಿದ್ದರು, ನಾವು ಪಕ್ಷದ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕೆಲಸ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡು ಭಾಸ್ಕರ್ ರಾವ್ ಹಾಗೂ ಹಲವಾರು ಪಕ್ಷದ ಮುಖಂಡರ ಸಹಕಾರದೊಂದಿಗೆ ಅತ್ತಿಬೆಲೆ ಪೊಲೀಸರ ನೆರವು ಪಡೆದು ಮಗುವನ್ನು ಮರಳಿ ತಂದೆಯ ಜೊತೆಗೆ ಸೇರಿಸಲು ಸಹಕಾರ ನೀಡಿದ್ದೇವೆ.
    | ಜ್ಯೋತಿ ಆಮ್ ಆದ್ಮಿ ಪಾರ್ಟಿ ಸದಸ್ಯೆ

    ನಾಲ್ಕೂವರೆ ವರ್ಷದ ಹಿಂದೆ ತನ್ನ ಮಗನನ್ನು ಕಳೆದುಕೊಂಡ ಬಾಲಮಣಿ ಪೇಂಟಿಂಗ್ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ತಮಿಳುನಾಡು ಭಾಗಕ್ಕೆ ಹೋಗಿ ಪದೇಪದೆ ಹುಡುಕಾಟ ನಡೆಸಿದ್ದ. ಆದರೆ ಮಗುವನ್ನು ಕರೆತರಲು ಸಹಕಾರ ಸಿಕ್ಕಿರಲಿಲ್ಲ. ನಾವು ನಮ್ಮ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ ಆತನಿಗೆ ಆಸರೆಯಾಗಿ ನಿಂತು ಮಗುವನ್ನು ತಂದೆಯ ಜೊತೆಗೆ ಕಳುಹಿಸುವಲ್ಲಿ ಸಹಕಾರ ನೀಡಿದ್ದೇವೆ.
    | ಕಬಾಲಿ ಶ್ರೀನಿವಾಸ್ ಆಮ್ ಆದ್ಮಿ ಪಾರ್ಟಿ ಸದಸ್ಯ

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts