More

    ಉತ್ಸಾಹ ಹೆಚ್ಚಿಸಿದ ಶಿರಾ ಪ್ರಯೋಗ ; ನೆಲೆಯಿಲ್ಲದ ಕ್ಷೇತ್ರಗಳಲ್ಲೂ ಪಕ್ಷ ಸಂಘಟನೆಗೆ ಬಿಜೆಪಿ ಸಿದ್ಧತೆ

    | ಚೇತನ್ ಬುರಡಿಕಟ್ಟಿ, ಬೆಂಗಳೂರು

    ಪಕ್ಷಕ್ಕೆ ನೆಲೆಯೇ ಇಲ್ಲದ ಶಿರಾ ಕೋಟೆಗೆ ಕೇಸರಿ ಬಣ್ಣ ಬಳಿಯುವ ಮೂಲಕ ಬಿಜೆಪಿ ಉಪ ಚುನಾವಣೆ ಗೆಲುವಿನಲ್ಲಿ ತಂತ್ರಗಾರಿಕೆ ಮೆರೆದಿದೆ, ಪಕ್ಷಕ್ಕೆ ಗಟ್ಟಿ ನೆಲೆ ಇಲ್ಲದ ಇತರ ಕ್ಷೇತ್ರಗಳಲ್ಲೂ ಬಾವುಟ ಹಾರಿಸಲು ‘ಶಿರಾ ಮಾದರಿ’ ಪ್ರಯೋಗದ ಚರ್ಚೆಯೂ ಆರಂಭವಾಗಿದೆ. ಇದಕ್ಕೆ ಹೌದು ಎನ್ನುತ್ತಿವೆ ಪಕ್ಷದ ಮೂಲಗಳು.

    ಕೈ, ತೆನೆ ಕೋಟೆಯಲ್ಲಿ ಕಮಲ ಅರಳುವ ಮೂಲಕ ಬಿಜೆಪಿ ಕೃಷ್ಣಾಕೊಳ್ಳ ದಾಟಿದಂತಾಗಿದೆ, ಈ ಬೆಳವಣಿಗೆ ಜಿಲ್ಲೆಯ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ಶೂನ್ಯಭಾವ ಆವರಿಸಿದೆ. ಜಿಲ್ಲಾ ಕಾಂಗ್ರೆಸ್ ಆಂತರಿಕ ಕಚ್ಚಾಟ ಮುಗಿದಿದೆ ಎಂದೇ ಜನರ ಮುಂದೆ ನಿಂತಿದ್ದರೂ ಜನರಿಗೆ ಒಪ್ಪಿಗೆಯಾಗಿಲ್ಲ ಎಂಬುದು ಫಲಿತಾಂಶದಲ್ಲಿಯೇ ವ್ಯಕ್ತವಾಗಿದೆ. ಗೆದ್ದೇ ತೀರುತ್ತೇವೆ ಎಂದುಕೊಂಡ ಕೈ ಮುಖಂಡರಿಗಂತೂ ನಿರಾಸೆಯ ಭಾರ ಬೆನ್ನುಹತ್ತಿದೆ!

    ಇನ್ನು ಜೆಡಿಎಸ್‌ಗಂತೂ ಹಳೇ ಮೈಸೂರು ಭಾಗದ ಗಟ್ಟಿನೆಲೆಗಳಲ್ಲಿ ಒಂದಾದ ಕಲ್ಪತರು ನಾಡಲ್ಲಿ ಅಸ್ತಿತ್ವದ ಪ್ರಶ್ನೆಯನ್ನೊಡ್ಡಿದೆ. ಜಿಲ್ಲೆಯ ಮುಖಂಡರ ಅಸಮಾಧಾನಕ್ಕೆ ಮುಲಾಮು ಹಚ್ಚದೇ ಉಪಸಮರ ಎದುರಿಸಿದ ಜೆಡಿಎಸ್ ಈಗ ಶಕ್ತಿಹೀನವಾದಂತಿದೆ. ಈ ಬಿರುಗಾಳಿಗೆ ಜಿಲ್ಲೆಯ ‘ತೆನೆಯ ಕಾಳುಗಳು’ ಒಂದೊಂದಾಗಿ ಉದುರುವ ಲಕ್ಷಣಗಳೂ ಕಾಣುತ್ತಿವೆ.

    ಇತರೆಡೆಗೂ ಪ್ರಯೋಗ : ಶಿರಾ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಮುಖಂಡರು ಪಕ್ಷಕ್ಕೆ ನೆಲೆಯೇ ಇಲ್ಲದ ಕ್ಷೇತ್ರಗಳಲ್ಲೂ ಬಾವುಟ ಹಾರಿಸಲು ಮತ್ತಷ್ಟು ಪ್ರಯೋಗಗಳನ್ನು ಹೆಣೆಯುತ್ತಿದ್ದಾರೆ. ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ ಸೇರಿ ರಾಜ್ಯದ 60 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯೇ ಇಲ್ಲ, ಇಂತಹ ಕ್ಷೇತ್ರಗಳಲ್ಲೂ ಮುಂಬರುವ ಚುನಾವಣೆಗಳಲ್ಲಿ ಹೊಸ ತಂತ್ರಗಳನ್ನು ಸೇರಿಸಿಕೊಂಡು ಕಮಾಲ್ ಮಾಡಲು ಸಂಘಟನೆ ಗಟ್ಟಿಗೊಳಿಸುವ ಯೋಜನೆ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ.

    ಸಂಘಟನೆ, ಸ್ಥಳೀಯ ವಿಷಯಗಳ ಮೇಲೆ ಕೇಂದ್ರೀಕೃತ ಜನಾಭಿಪ್ರಾಯ ಮೂಡಿಸುವ ಜತೆಗೆ ಸಂಪನ್ಮೂಲದ ಸಮರ್ಪಕ ವಿತರಣೆ, ಜಾತಿ, ಸಮುದಾಯಗಳನ್ನು ಸೆಳೆಯುವ, ಮುಖ್ಯವಾಗಿ ಯುವಕರನ್ನು ಜತೆಗಿರಿಸಿಕೊಳ್ಳಲು ಪ್ರಯೋಗ ನಡೆಸುತ್ತಿದೆ, ಮಡಿವಾಳ, ಕುಂಬಾರ, ಉಪ್ಪಾರ, ಸವಿತಾ ಸಮಾಜ ಸೇರಿ ಸಣ್ಣಸಣ್ಣ ಶ್ರಮಿಕ ಸಮಾಜಗಳನ್ನು ತಮ್ಮತ್ತ ಸೆಳೆದು ಮತಬ್ಯಾಂಕ್ ಸೃಷ್ಟಿಸಿಕೊಳ್ಳುವ ಹಾಗೂ ಬೂತ್‌ಮಟ್ಟದಿಂದಲೇ ಕಾರ್ಯಕರ್ತರ ಪಡೆ ಕಟ್ಟುವ, ಶಕ್ತಿ ವೃದ್ಧಿಸಿಕೊಳ್ಳುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರು.

    ಕ್ಷೇತ್ರದ ಮೇಲೆ ಪ್ರಭಾವ ಹೊಂದಿರುವ ಹೊರಗಿನವರನ್ನು ತಮ್ಮತ್ತ ಸೆಳೆಯುವ ಇಲ್ಲವೇ ತಟಸ್ಥವಾಗಿಸುವ ತಂತ್ರವನ್ನು ಹೆಣೆಯಲಾಗುತ್ತಿದೆ, ಯಾದವ ಸಮುದಾಯದ ಪ್ರಭಾವಿ ರಾಜಕಾರಣಿ, ಶಿರಾ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ನೆರೆಯ ಆಂಧ್ರಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರ್ ರೆಡ್ಡಿಯನ್ನು ಭೇಟಿ ಮಾಡಿ ಉಪಸಮರದಲ್ಲಿ ತಟಸ್ಥಗೊಳಿಸುವ ಮೂಲಕ ಈ ಪ್ರಯೋಗವೂ ಯಶಸ್ವಿಯಾಗಿದೆ.

    ಕುಂಚಿಟಿಗರ ಸಾಮ್ರಾಜ್ಯದಲ್ಲಿ ಕಮಲ ಅರಳಲು ಕಾರಣವಾದ ಒಂದಷ್ಟು ತಂತ್ರಗಳನ್ನೇ ಆಯಾ ಕ್ಷೇತ್ರಕ್ಕನುಗುಣವಾಗಿ ಪರಿವರ್ತಿಸಿಕೊಂಡು ಮತ್ತೆ, ಮತ್ತೆ ಪ್ರಯೋಗಿಸಲು ಬಿಜೆಪಿ ಪಾಳಯ ಮುಂದಾಗಿದ್ದು, ಜಿಲ್ಲೆಯಲ್ಲಷ್ಟೇ ಅಲ್ಲದೆ ಉಳಿದ 90 ಕ್ಷೇತ್ರಗಳಲ್ಲಿಯೂ ಬಲ ವೃದ್ಧಿಯ ಸೂಚನೆ ನೀಡುತ್ತಿದೆ.

    ಕೊರಟಗೆರೆ, ಮಧುಗಿರಿಯಲ್ಲಿ ಬಿಜೆಪಿ: ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ಕ್ಷೇತ್ರಗಳಲ್ಲಿ ಬಿಜೆಪಿ ಗಟ್ಟಿ ನೆಲೆ ಹೊಂದಿದೆ, ಉಳಿದಂತೆ ಕೊರಟಗೆರೆ, ಮಧುಗಿರಿ, ಪಾವಗಡದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದು ಇಲ್ಲಿಯೂ ಕಮಲ ಅರಳಿಸುವು ಕಾರ್ಯತಂತ್ರ ಜಿಲ್ಲಾ ಮುಖಂಡರ ಮುಂದಿದ್ದು, ಶಿರಾ ಗೆಲುವು ಅವರಲ್ಲಿ ಉತ್ಸಾಹದ ಜತೆಗೆ ಭರವಸೆಯನ್ನೂ ಹೆಚ್ಚಿಸಿದೆ.

    ರಾಜ್ಯದ 60 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವ ಶಕ್ತಿ ಇಲ್ಲ, ಶಿರಾದಂತೆಯೇ ಕೊರಟಗೆರೆ, ಮಧುಗಿರಿ, ಪಾವಗಡ ಸೇರಿ ಇತರ ಕ್ಷೇತ್ರಗಳಲ್ಲೂ ಸಂಘಟನೆಯನ್ನು ಚುರುಕಾಗಿಸುತ್ತೇವೆ, ಬಿಜೆಪಿ ಬಾವುಟ ಹಾರಿಸುತ್ತೇವೆ.
    ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts