More

    ಮತೋತ್ಸಾಹಕ್ಕೆ ಸಾಕ್ಷಿಯಾದ ಮತದಾರರು; ರಣಬಿಸಿಲಲ್ಲೂ ಮತದಾನದ ಹಕ್ಕು ಚಲಾವಣೆ; ನವ, ಯುವ, ವಯೋವೃದ್ಧ ಮತದಾರರು ಭಾಗಿ

    ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಜರುಗಿದ ಲೋಕಸಭಾ ಚುನಾವಣೆಯ ದೇಶದ ಮೂರನೇ ಹಾಗೂ ರಾಜ್ಯದ ಎರಡನೇ ಹಂತದ ಮತದಾನ ಪ್ರಕ್ರಿಯೆಗೆ ಭಾರಿ ಜನಬೆಂಬಲ ವ್ಯಕ್ತವಾಯಿತು.
    ರಣಬಿಸಿಲನ್ನೂ ಲೆಕ್ಕಿಸದೇ ಮತದಾರರು ಮತೋತ್ಸಾಹಕ್ಕೆ ಸಾಕ್ಷಿಯಾದದ್ದು ಕ್ಷೇತ್ರದಾದ್ಯಂತ ಕಂಡುಬಂತು. ಮೊದಲ ಬಾರಿ ಮತ ಚಲಾಯಿಸುವ ನವ ಮತದಾರರು, ಯುವ ಮತದಾರರು, ವೃದ್ಧರು, ಅಂಗವಿಕಲರು ಸೇರಿದಂತೆ ಕುಟುಂಬಸಮೇತರಾಗಿ ಬಂದು ಮತ ಚಲಾಯಿಸಿದ್ದು ಗಮನ ಸೆಳೆಯಿತು.
    ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಾವೇರಿ, ಬ್ಯಾಡಗಿ, ಹಾನಗಲ್ಲ, ಹಿರೇಕೆರೂರ, ರಾಣೆಬೆನ್ನೂರ) ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ (ಗದಗ, ಶಿರಹಟ್ಟಿ, ರೋಣ) ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಬಿಸಿಲು ಏರುವ ಮುನ್ನವೇ ಮತ ಚಲಾಯಿಸಲು ಹಲವರು ಮತಗಟ್ಟೆಯತ್ತ ಧಾವಿಸಿದರೆ, ಮತ್ತೆ ಕೆಲವರು ಬಿಸಿಲಾದರೇನು, ಮಳೆಯಾದರೇನು ಎಂಬಂತೆ ಸುಡು ಬಿಸಿಲು ಲೆಕ್ಕಿಸದೇ ತಮ್ಮ ಹಕ್ಕು ಚಲಾಯಿಸಿದರು. ಸಂಜೆಯಾಗುತ್ತಿದ್ದಂತೆ ಗ್ರಾಮೀಣ ಭಾಗದ ಹಲವು ಮತಗಟ್ಟೆಗಳು ಭಣಗುಡುತ್ತಿದ್ದರೆ, ಮತ್ತೆ ಕೆಲ ಮತಗಟ್ಟೆಗಳಲ್ಲಿ ಉದ್ದನೆಯ ಸರತಿ ಸಾಲು ಕಂಡು ಬಂತು.
    ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಸರ್ಕಾರಿ ಶಾಲೆಯ ಕ್ರಮ ಸಂಖ್ಯೆ 118 ಮತಗಟ್ಟೆಯಲ್ಲಿ ಬೆಳಗ್ಗೆ 10.20ರ ಸುಮಾರು 1,066 ಮತದಾರರ ಪೈಕಿ 182 ಮತದಾರರು ಮತ ಚಲಾಯಿಸಿದ್ದರು. ಹಿರೇಕೆರೂರ ತಾಲೂಕು ಹಂಸಭಾವಿಯ 17, 18, 19 ಸಂಖ್ಯೆಯ ಮತಗಟ್ಟೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ52ರಷ್ಟು ಮತದಾನವಾಗಿತ್ತು.
    ಮಧ್ಯಾಹ್ನ ಬಿರುಸು
    ಬಿಸಿಲು ಏರಿದಂತೆಲ್ಲ ಮತದಾನ ಪ್ರಮಾಣ ಏರುಗತಿಯಲ್ಲಿ ಸಾಗಿತು. ಮಧ್ಯಾಹ್ನ 12ರಿಂದ 3 ಗಂಟೆಯ ಅವಧಿಯಲ್ಲಿ ಮತದಾನ ಪ್ರಮಾಣ ತುಸು ಹೆಚ್ಚಾಗಿದ್ದು ಕಂಡುಬಂತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದದು, ಬೆಳಗ್ಗೆ 9 ಗಂಟೆಗೆ (ಎರರು ಗಂಟೆಯಲ್ಲಿ) ಕ್ಷೇತ್ರದಲ್ಲಿ ಶೇ.8.62ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ.24.24ರಷ್ಟಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶೇ.43.26ರಷ್ಟಾಗಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.58.45ರಷ್ಟು ಮತದಾನ ಆಗಿತ್ತು. ಸಂಜೆ 5 ಗಂಟೆ ಹೊತ್ತಿಗೆ ಶೇ.71.9ರಷ್ಟು ಮತದಾನ ಆಗಿತ್ತು.
    ಮಕ್ಕಳ ಆರೈಕೆ ಕೇಂದ್ರ
    ಹಲವು ಮತಗಟ್ಟೆಗಳಲ್ಲಿ ಮತದಾರರ ಮಕ್ಕಳ ರೈಕೆಗಾಗಿ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿತ್ತು. ಹಾಲು, ನೀರು, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಒದಗಿಸಲಾಗಿತ್ತು. ತಾಯಂದಿರು ಮತದಾನ ಮಾಡಿ ಬರುವವರೆಗೆ ಈ ಕೇಂದ್ರದಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದರು. ಅಂಗನವಾಡಿ ಸಿಬ್ಬಂದಿ ಮಕ್ಕಳನ್ನು ನೋಡಿಕೊಂಡರು.
    ಎಲ್ಲೆಡೆ ಕೇಸರಿ ಶಾಲು
    ಮತದಾನದ ದಿನ ಕ್ಷೇತ್ರದಾದ್ಯಂತ ಎಲ್ಲೆಲ್ಲೂ ಕೇಸರಿ ಶಾಲುಗಳು ಗಮನ ಸೆಳೆದವು. ಮತಗಟ್ಟೆ ಹೊರಗೆ ಕೆಲ ಯುವಕರ ಗುಂಪುಗಳು ಕೇಸರಿ ಶಾಲು ಧರಿಸಿ ಓಡಾಡುತ್ತಿದ್ದರೆ, ಕೆಲ ಬೂತ್‌ಗಳಲ್ಲಿನ ಏಜೆಂಟರು ಕೇಸರಿ ಶಾಲು ಧರಿಸಿಕೊಂಡಿದ್ದರು. ಹಾಗಾಗಿ, ಕೇಸರಿ ಶಾಲುಗಳು ಹೆಚ್ಚಾಗಿ ರಾರಾಜಿಸಿದವು.
    ನೀರಿಗಾಗಿ ಹುಡುಕಾಟ
    ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಲಿಂಬೆ ಶರಬತ್ತು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಹಲವು ಬೂತ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಮತದಾರರು ಬಾಯಾರಿಕೆಯಿಂದ ಬಳಲಿದರು. ನೀರಿಗಾಗಿ ಹುಡುಕಾಡಿದರು. ಮತಗಟ್ಟೆ ಸಿಬ್ಬಂದಿಗೆ ಮಾತ್ರ ಊಟ, ನೀರಿನ ವ್ಯವಸ್ಥೆ ಇತ್ತು.

    • ಮೊದಲ ಬಾರಿ ವೋಟ್ ಮಾಡಿದವರು ಏನಂತಾರೆ ? *
      ಕೋಟ್:
      ಇದೇ ಮೊದಲ ಸಲ ನನಗೆ ಮತ ಚಲಾಯಿಸಲು ಅವಕಾಶ ಸಿಕ್ಕಿರುವುದು ನನ್ನಲ್ಲಿ ಅತ್ಯಂತ ಸಂತೋಷ ಮೂಡಿಸಿದೆ. ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ ಇದಾಗಿರುವ ಕಾರಣ ಈ ಚುನಾವಣೆಯಲ್ಲಿ ನಾನೂ ಭಾಗವಹಿಸಿದ್ದೆ ಎಂಬ ಹೆಮ್ಮೆಯ ಭಾವ ನನ್ನಲ್ಲಿ ಮೂಡಿದೆ.
      – ಗಾಯತ್ರಿ ಕುರಿಯವರ, ಮೋಟೆಬೆನ್ನೂರ
    • ಕೋಟ್:
      ಮೊದಲ ಬಾರಿ ಮತದಾನ ಮಾಡುತ್ತಿರುವ ಕಾರಣ ಯಾರಿಗೆ ಓಟು ಹಾಕಬೇಕು, ಹೇಗೆ ಹಾಕಬೇಕು ಎಂಬ ಗೊಂದಲದಲ್ಲಿದ್ದೆ. ಈ ಬಗ್ಗೆ ನನ್ನ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದೆ. ದೇಶ ಮತ್ತು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಎನಿಸುವ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿದ ತೃಪ್ತಿ ನನಗಿದೆ.
      – ಪ್ರಜ್ವಲ ಹೆಗಡಿಗಟ್ಟಿ, ತಿಳವಳ್ಳಿ
    See also  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಅಪರಾಧಿಗೆ 5 ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts