ಬೆಂಗಳೂರು: ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ 1963 ರ ಕರ್ನಾಟಕ ಪೊಲೀಸ್ ಅಧಿನಿಯಮಕ್ಕೆ ಸೂಕ್ತ ಬದಲಾವಣೆ ತರಲು ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಚರ್ಚೆಯಾಗಲಿರುವ ಈ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ, 2021ರಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಆ್ಯಪ್ಗಳನ್ನು ಬಳಸಿ ತೊಡಗಿಕೊಳ್ಳುವ ಆನ್ಲೈನ್ ಜೂಜು ಅಥವಾ ಬಾಜಿ ಕಟ್ಟುವಿಕೆಯನ್ನು ನಿಷೇಧಿಸುವ ಪ್ರಸ್ತಾವನೆ ಇದೆ. ಆನ್ಲೈನ್ ಗ್ಯಾಂಬ್ಲಿಂಗ್ ಅಥವಾ ಬೆಟ್ಟಿಂಗ್ ಮಾಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾಪವಿದೆ.
ಇದನ್ನೂ ಓದಿ: ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜಧಾನಿ! ಕೊಲೆ, ರೇಪ್, ಎಲ್ಲದರಲ್ಲೂ ಮುಂದೆ!
ಜೊತೆಗೆ, ಈ ರೀತಿ ಜೂಜಾಡುವವರಿಗೆ ಅಥವಾ ಜೂಜಾಟ ನಡೆಸುವವರಿಗೆ ಸ್ಥಳ ನೀಡುವ ವ್ಯಕ್ತಿಗಳಿಗೆ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ಇತರ ರೀತಿಯಲ್ಲಿ ಸಹಾಯ ಮಾಡಿದವರಿಗೆ ಅಥವಾ ಸಾಲ ನೀಡಿದವರಿಗೆ 6 ತಿಂಗಳ ತನಕ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸುವ ಉಲ್ಲೇಖವಿದೆ.