More

    ಮಂಡಳಿ ಯಡವಟ್ಟು: ಒಂದೇ ತಿಂಗಳಿಗೆ ಎರಡು ಬಿಲ್!

    ಶಿವಮೊಗ್ಗ: ನಗರ ಒಳಚರಂಡಿ ನೀರು ಸರಬರಾಜು ಮಂಡಳಿಗೆ ನೀರಿನ ನಿರ್ವಹಣೆ ಹಸ್ತಾಂತರ ಮಾಡಿದ ದಿನದಿಂದಲೂ ಒಂದಿಲ್ಲೊಂದು ಯಡವಟ್ಟು ನಡೆಯುತ್ತಿದೆ. ಇದೀಗ ನೀರಿನ ಬಿಲ್ ವಿಷಯದಲ್ಲಿ ಮಂಡಳಿ ಮತ್ತೊಂದು ಅವಾಂತರ ಮಾಡಿಕೊಂಡಿದೆ.

    2023-24ನೇ ಆರ್ಥಿಕ ವರ್ಷದ ಕುಡಿಯುವ ನೀರಿನ ಬಿಲ್ ಪಾವತಿಸಿದವರಿಗೆ ಕಳೆದ ವಾರದಿಂದ ಮತ್ತೆ ಮಾರ್ಚ್ ತಿಂಗಳ ಬಿಲ್ ನೀಡಲಾಗುತ್ತಿದೆ. ಕೆಲವರಿಗೆ ಕನಿಷ್ಠ ಮೊತ್ತದ ಬಿಲ್ ಬಂದಿದ್ದು, ಪಾವತಿಯನ್ನೂ ಮಾಡಿದ್ದಾರೆ. ಇನ್ನು ಕೆಲ ಮಂದಿ ಮಂಡಳಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಆಸ್ತಿ ತೆರಿಗೆಯಂತೆ ನೀರಿನ ತೆರಿಗೆಯನ್ನೂ ಸಂಪೂರ್ಣ ಪಾವತಿಸಲಾಗಿದೆ. ಹೀಗಿರುವಾಗ ಬಿಲ್ ಪಾವತಿಸಿರುವ ಮಾರ್ಚ್ ಮಾಹೆಗೆ ಸಂಬಂಧಿಸಿ ಮತ್ತೊಂದು ಬಿಲ್ ನೀಡಿರುವುದು ಅಚಾತುರ್ಯವಲ್ಲ, ಉದ್ದೇಶಪೂರ್ವಕ ಎಂದು ನಾಗರಿಕರು ಕಿಡಿಕಾರಿದ್ದಾರೆ.
    247 ಆರಂಭವಾದ ದಿನದಿಂದಲೂ ನೀರು ಸರಬರಾಜು ಮಂಡಳಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ. ಆರಂಭದಲ್ಲಿ ಮೀಟರ್ ಅಳವಡಿಕೆ ವೈಜ್ಞಾನಿಕವಾಗಿಲ್ಲ ಎಂಬ ಕೂಗು ಭುಗಿಲೆದ್ದಿತು. ಬಳಿಕ ಕಾಮಗಾರಿ ಸಮಪರ್ಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು. ಆರಂಭದಿಂದಲೂ ಇದಕ್ಕೆ ನೀರು ಸರಬರಾಜು ಮಂಡಳಿ ಮೇಲೆ ನಿಯಂತ್ರಣ ಹಾಕಬೇಕಿದ್ದ ಪಾಲಿಕೆ ಆಡಳಿತ ತನಗೂ ನೀರು ಸರಬರಾಜು ಮಂಡಳಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿತು. ಇದೀಗ ಬಿಲ್ ನೀಡುವಿಕೆಯಲ್ಲಿ ಆಗಿರುವ ಯಡವಟ್ಟನ್ನು ಪ್ರಶ್ನಿಸಿದರೆ ಪಾಲಿಕೆ ಆಡಳಿತವು ನೀರು ಸರಬರಾಜು ಮಂಡಳಿಯತ್ತ ಬೊಟ್ಟು ತೋರುತ್ತಿದೆ.
    ಬಹುತೇಕ ಕಡೆ ಸಮಸ್ಯೆ:ಶಿವಮೊಗ್ಗದ ಬಸವನಗುಡಿ, ಜಯನಗರ, ರವೀಂದ್ರನಗರ ಸೇರಿ ಅನೇಕ ಬಡಾವಣೆಗಳಿಗೆ ಮಾರ್ಚ್ ತಿಂಗಳ ಕುಡಿಯುವ ನೀರಿನ ಬಿಲ್ ನೀಡಲಾಗಿದೆ. ಆದರೆ ಮಾರ್ಚ್ ಅಂತ್ಯದವರೆಗೂ ತೆರಿಗೆ ಪಾವತಿಸಿರುವವರಿಗೆ ಮತ್ತೆ ಮಾರ್ಚ್ ತಿಂಗಳ ಬಿಲ್ ನೀಡಿರುವುದು ಎಂಟನೇ ಅದ್ಭುತ ಎಂದು ಸಾರ್ವಜನಿಕರು ಲೇವಡಿ ಮಾಡುತ್ತಿದ್ದಾರೆ. ಇಷ್ಟು ವರ್ಷ ಸಾರ್ವಜನಿಕರು ವರ್ಷಕೊಮ್ಮೆ ಮಾರ್ಚ್ ಅಂತ್ಯದಲ್ಲಿ ಇಡೀ ವರ್ಷ ಕುಡಿಯುವ ನೀರಿನ ಬಾಬ್ತು ತೆರಿಗೆ ಪಾವತಿ ಮಾಡುತ್ತಿದ್ದರು. ಆದರೆ ಈ ವರ್ಷ ಮೊದಲ ಬಾರಿಗೆ ಮಾಸಿಕ ಬಿಲ್ ನೀಡುವಿಕೆಗೆ ಮುಂದಾದ ನೀರು ಸರಬರಾಜು ಮಂಡಳಿ ಆರಂಭದಲ್ಲೇ ಅಪಹಾಸ್ಯಕ್ಕೆ ಒಳಗಾಗಿದೆ.
    ಚರ್ಚೆಗಳೇ ನಡೆದಿಲ್ಲ: ನಗರದಲ್ಲಿ 247 ನೀರು ಸರಬರಾಜಿನ ಬಗ್ಗೆ ಈಗಾಗಲೇ ವ್ಯಾಪಕ ದೂರುಗಳಿವೆ. ಅವುಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳು ಆಸಕ್ತಿ ತೋರಿಲ್ಲ. ಅದರ ಬಗ್ಗೆ ಸಾರ್ವಜನಿಕರ ಸಭೆ ನಡೆಸಿ ಕುಂದು ಕೊರತೆಗಳನ್ನು ಆಲಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ತರಾತುರಿಯಲ್ಲಿ ಬಿಲ್ ನೀಡಲು ಮುಂದಾಗಿರುವ ಮಂಡಳಿ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ನೀರು ಬಳಕೆದಾರರ ಸಮರ್ಪಕ ದತ್ತಾಂಶಗಳನ್ನು ಹೊಂದದೇ ಇರುವುದು ಮಂಡಳಿಯ ಬೇಜವಾಬ್ದಾರಿತನಕ್ಕೆ ನಿದರ್ಶನ. ಈಗಾಗಲೇ ಹಲವು ಬಡಾವಣೆಗಳಲ್ಲಿ 24*7 ನೀರಿನ ಸಂಪರ್ಕ ನೀಡಲಾಗಿದೆ. ಎಲ್ಲಿಯೂ ದಿನಪೂರ್ತಿ ನೀರು ಪೂರೈಕೆಯಾಗುತ್ತಿಲ್ಲ. ಒಂದೆರಡು ತಾಸು ನೀರು ಬಿಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ನಲ್ಲಿಯಲ್ಲಿ ಬರುವ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts