More

    ಆಸ್ತಿ ತೆರಿಗೆ ವಿನಾಯಿತಿಗೆ ಮುಗಿಬಿದ್ದ ಜನ

    ರಾಮನಗರ: ಆಸ್ತಿ ತೆರಿಗೆಯಲ್ಲಿ ಶೇ.5 ವಿನಾಯಿತಿ ಪಡೆಯಲು ಸಾರ್ವಜನಿಕರು ತೆರಿಗೆ ಕಟ್ಟಲು ನಗರಸಭೆ ಕಚೇರಿಯಲ್ಲಿ ಮುಗಿಬಿದ್ದ ದೃಶ್ಯ ಮಂಗಳವಾರ ಕಂಡುಬಂತು.


    ನಗರಸಭೆ ಆಸ್ತಿ ತೆರಿಗೆಗೆ ಏ.1 ರಿಂದ 30ರವರೆಗೆ ಶೇ. 5 ವಿನಾಯಿತಿ ಸಾರ್ವಜನಿಕರಿಗೆ ಘೋಷಿಸಿತ್ತು. ಅಲ್ಲದೇ ತೆರಿಗೆ ವಿನಾಯಿತಿ ಮಂಗಳವಾರಕ್ಕೆ ಕಡೇ ದಿನವಾಗಿತ್ತು. ಹೆಚ್ಚಿನ ಜನರು ತೆರಿಗೆ ವಿನಾಯಿತಿ ಪಡೆಯಲು ಮಂಗಳವಾರ ಕೊನೇ ದಿನವಾದ ಕಾರಣ ತೆರಿಗೆ ಕಟ್ಟಲು ಮುಗಿಬಿದ್ದಿದ್ದಲ್ಲದೇ ಹೆಚ್ಚಿನ ಜನರು ನಗದು ಕೌಂಟರ್ ಬಳಿ ಕಂಡುಬಂದರು.


    ತೆರಿಗೆ ಪಾವತಿ ಮಾಡಲು ನಗರಸಭೆ ಕಚೇರಿಯಲ್ಲಿ ಒಂದೇ ಒಂದು ಕೌಂಟರ್ ಇದ್ದ ಕಾರಣ ತೆರಿಗೆ ಪಾವತಿಸುತ್ತಿದ್ದ ಸಾರ್ವಜನಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ಬಿಸಿಲು ಹೆಚ್ಚಿದ್ದ ಕಾರಣ ಜನರು ಇಕ್ಕಟ್ಟಾದ ಸ್ಥಳದಲ್ಲಿ ಸೆಖೆಯಲ್ಲಿ ಬಳಲಿದರು. ಹೆಚ್ಚಿನ ಕೌಂಟರ್ ನಗರಸಭೆ ಇಂದ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ಸಾರ್ವಜನಿಕರು ಗೊಣಗುತ್ತಾ ನಿಂತಿರುವುದು ಕಂಡುಬಂತು.


    ಎಚ್‌ಡಿಎಫ್‌ಸಿ ಬ್ಯಾಂಕ್ ರಾಮನಗರ ಶಾಖೆಯಲ್ಲಿ ತೆರಿಗೆ ಹಣ ಕಟ್ಟುವ ವ್ಯವಸ್ಥೆ ಇದೆ. ಆದರೆ, ಬ್ಯಾಂಕಿನಲ್ಲಿ ಹಣ ಕಟ್ಟಲು ಜನರು ಮುಂದಾಗಿಲ್ಲ. ಬ್ಯಾಂಕಿನಲ್ಲಿ ಸರ್ವರ್ ಸಮಸ್ಯೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಹೇಳುತ್ತಿದ್ದ್ದರು. ಸೋಮವಾರ ಕೂಡ ತೆರಿಗೆ ಕಟ್ಟಲು ಹೆಚ್ಚಿನ ಜನರು ಕೌಂಟರ್ ಬಳಿ ಇದ್ದರು. ಇಂದು ಕೂಡ ಹೆಚ್ಚಿನ ಜನರು ಬರುತ್ತಾರೆ ಎಂದು ತಿಳಿದಿದ್ದರೂ ನಗರಸಭೆ ಅಧಿಕಾರಿಗಳು ವಿಶೇಷ ಕೌಂಟರ್ ತೆರೆಯದೆ ಸಾರ್ವಜನಿಕರನ್ನು ಬಿಸಿಲಿನ ಸೆಖೆಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ದಣಿಯುವಂತೆ ಮಾಡಿದ್ದರು ಎಂದು ದೂರಿದರು.


    ಸೋಮವಾರದವರೆಗೆ 1.12 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ತೆರಿಗೆ ಕಟ್ಟಲು ಸೂಕ್ತ ವ್ಯವಸ್ಥೆ ನಗರಸಭೆಯಲ್ಲಿ ಮಾಡಲಾಗಿದೆ. ಜತೆಗೆ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲೂ ತೆರಿಗೆ ಕಟ್ಟುವ ವ್ಯವಸ್ಥೆ ಇದೆ. ಮಂಗಳವಾರ ತೆರಿಗೆ ರಿಯಾಯಿತಿಗೆ ಕಡೇ ದಿನವಾಗಿದ್ದ ಕಾರಣ ಹೆಚ್ಚಿನ ಜನರು ಬಂದಿದ್ದಾರೆ. ಇಲ್ಲಿಯ ತನಕ ಕಡಿಮೆ ಜನ ಸಾಂದ್ರತೆಯಲ್ಲಿ ತೆರಿಗೆ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಕಂಡುಬಂದರೆ ಮತ್ತೊಂದು ಕೌಂಟರ್ ಮೂಲಕ ಪಾವತಿ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.
    ನಾಗೇಶ್, ಪೌರಾಯುಕ್ತ ನಗರಸಭೆ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts