ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಸುಧೀರ್ ಕುಮಾರ್ ಓಝಾ ಎನ್ನುವವರು ಸಲ್ಮಾನ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಸೇರಿದಂತೆ ಬಾಲಿವುಡ್‍ನ ಕೆಲವು ಪ್ರಭಾವಿ ವ್ಯಕ್ತಿಗಳ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಈ ಸಂಬಂಧ ಕೇಸ್ ಡಿಸ್ಮಿಸ್ ಆಗಿದೆ.
ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು. ಅವರ ಆತ್ಮಹತ್ಯೆಯ ಹಿಂದೆ ಡಿಪ್ರೆಶನ್ ಕಾರಣ ಎಂದು ಹೇಳಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸುಶಾಂತ್ ಅವರಿಗೆ ಹೆಚ್ಚು ಅವಕಾಶಗಳು ಸಿಗದಿದ್ದ ಕಾರಣ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳು ಅವರನ್ನು ಬೆಳೆಯುವುದಕ್ಕೆ ಬಿಡದ ಕಾರಣ, ಸುಶಾಂತ್ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬಂತಹ ವಿಷಯಗಳು ಕೇಳಿ ಬಂದಿತ್ತು. ಇದೇ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಇದನ್ನೂ ಓದಿ: ಹೊಸಬರನ್ನು ಯಾಕೆ ಪರಿಚಯಿಸುತ್ತಾರೆ ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ
ಈ ಸಂಬಂಧ, ಸುಧೀರ್ ಕುಮಾರ್ ಓಝಾ ಎನ್ನುವವರು ಪಾಟ್ನಾದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಸೇರಿದಂತೆ ಬಾಲಿವುಡ್‍ನ ಎಂಟು ಪ್ರಭಾವಿ ವ್ಯಕ್ತಿಗಳ ವಿರುದ್ಧ ಕೇಸು ಹಾಕಿದ್ದರು. ಈ ಪ್ರಭಾವಿ ವ್ಯಕ್ತಿಗಳಿಂದಲೇ ಸುಶಾಂತ್ ಬೇಸತ್ತು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದರು. ಹಾಗಾಗಿ ಅವರನ್ನೆಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸುಬೇಕು ಎಂದು ಕೇಳಿಕೊಂಡಿದ್ದರು.
ಈ ಕೇಸ್ ಕೈಗೆತ್ತಿಕೊಂಡ ನ್ಯಾಯಮೂತಿ ಮುಕೇಶ್ ಕುಮಾರ್ ಅವರು, ನ್ಯಾಯಾಲಯದ ಪರಿಧಿಯೊಳಗೆ ಇಂತಹ ಕೇಸ್ ಬರುವುದಿಲ್ಲವಾದ್ದರಿಂದ, ಕೇಸ್ ಡಿಸ್ಮಿಸ್ ಮಾಡಿದ್ದಾರೆ. ಇದರಿಂದಾಗಿ ಸಲ್ಮಾನ್ ಸೇರಿದಂತೆ ಒಂದಿಷ್ಟು ಬಾಲಿವುಡ್ ಸೆಲೆಬ್ರಿಟಿಗಳು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: ಅದೊಂದು ಪಾತ್ರ ಜಗದೀಪ್ ಅವರ ಜೀವನವನ್ನೇ ಬದಲಿಸಿಬಿಟ್ಟಿತು!
ಈ ವಿಷಯವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೊಂದು ಕೇಸ್ ದಾಖಲಿಸುವುದಾಗಿ ಸುಧೀರ್ ಕುಮಾರ್ ಓಝಾ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, `ಸುಶಾಂತ್ ಸಿಂಗ್ ರಜಪೂತ್ ಬಿಹಾರದ ಮೂಲದವರಾಗಿದ್ದರು. ಅವರ ಸಾವಿಗೆ ಇಡೀ ರಾಜ್ಯ ಕಣ್ಣಿರು ಹಾಕಿದೆ. ಸುಶಾಂತ್‍ರಂತಹ ಉತ್ಸಾಹಿ ಯುವಕನ ಸಾವಿಗೆ ಕಾರಣಾರದವರನ್ನು ಬಯಲು ಮಾಡಬೇಕೆಂಬ ಉದ್ದೇಶ ನನ್ನದಾಗಿತ್ತು. ಈ ಕೋರ್ಟ್‍ನಲ್ಲಿ ಪ್ರಕರಣ ಡಿಸ್ಮಿಸ್ ಆದರೆ, ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೊಂದು ಕೇಸ್ ದಾಖಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.