More

    ಅರ್ಹರೆಲ್ಲರೂ ಮತದಾನ ಮಾಡಿ, ಪ್ರಜಾಪ್ರಭುತ್ವ ಬಲಪಡಿಸಿ: ವೈಶಾಲಿ.ಎಂ.ಎಲ್

    ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹ ಭಾಗಿತ್ವ ಸಮಿತಿ (ಸ್ವೀಪ್) ಹಾಗೂ ವಿವಿಧ ಇಲಾಖೆಯ ಸಹಕಾರದಲ್ಲಿ ‘ನಮ್ಮ ನಡೆ ಮತಗಟ್ಟೆ ಕಡೆಗೆ’ ಕಾರ್ಯಕ್ರಮವು ಭಾನುವಾರ ನಡೆಯಿತು.
    ನಗರದ ಭೂಮರಡ್ಡಿ ವೃತ್ತದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಹಾಗೂ ಜಿ.ಪಂ ಸಿಇಒ ಭರತ್.ಎಸ್ ಅವರು ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದರು. ಬಳಿಕ ಕೆ.ಎಚ್.ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಟಾಂಗಾಕೂಟ ಮಾರ್ಗವಾಗಿ ವೀರನಾರಾಯಣ ದೇವಸ್ಥಾನದ ಮೂಲಕ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ತೆರಳಲಾಯಿತು.
    ದಾರಿಯುದ್ದಕ್ಕೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು. ಮತದಾನ ಮಾಡುವವರೇ ಮಹಾಶೂರರು, ಮತದಾರರು ಮತದಾನದಿಂದ ಹೊರಗುಳಿಯಬಾರದು, ಕಡ್ಡಾಯವಾಗಿ ಮತದಾನ ಮಾಡೋಣ ಪ್ರಜಾಪ್ರಭುತ್ವ ಬಲಪಡಿಸೋಣ, ಮತದಾನಕ್ಕಿಂತ ಮತ್ತೊಂದಿಲ್ಲ, ನಾನು ಕಡ್ಡಾಯವಾಗಿ ಮತದಾನ ಮಾಡುವೇ, ನಮ್ಮ ಮತ, ನಮ್ಮ ಹಕ್ಕು, ಪ್ರತಿಶತ ಮತದಾನ ಉತ್ತಮ ಸಮಾಜ ನಿರ್ಮಾಣ ಹೀಗೆ ಹಲವು ಘೋಷ ವಾಕ್ಯಗಳನ್ನು ಕೂಗುತ್ತಾ ಹಾಗೂ ಪ್ಲೇಕಾರ್ಡಗಳನ್ನು ಪ್ರದರ್ಶಿಸುತ್ತ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
    ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಹಾಗೂ ಜಿ.ಪಂ ಸಿಇಒ ಭರತ್.ಎಸ್ ಅವರು ಸೇರಿದಂತೆ ನೂರಾರು  ಜನರು ಕಾಲುನಡಿಗೆ ಮೂಲಕ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
    ಶಾಲೆಯ ಆವರಣಕ್ಕೆ ತೆರಳುತ್ತಿದ್ದಂತೆ ಶಾಲಾ ಮಕ್ಕಳು ಗುಲಾಬಿ ಹೂ ನೀಡುವುದರ ಮೂಲಕ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಹಾಗೂ ಜಿ.ಪಂ ಸಿಇಒ ಭರತ.ಎಸ್ ಅವರನ್ನು ಬರಮಾಡಿಕೊಂಡರು.
         ನಂತರ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಚುನಾವಣಾ ಧ್ವಜಾರೋಹಣ ನೆರವೇರಿಸಿದರು. ಯುವ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಭಿನಂದನಾ ಪ್ರಮಾಣ ನೀಡಲಾಯಿತು. ನಂತರ ನಮ್ಮ ನಡೆ ಮತಗಟ್ಟೆಯ ಕಡೆ ಮತದಾನ ಜಾಗೃತಿ ಕುರಿತು ಅಲ್ಲಿನ ಶಾಲಾ ವಿದ್ಯಾರ್ಥಿಗಳು ಹಾಡು ಹಾಡುವ ಮೂಲಕ ಗಮನ ಸೆಳೆದರು.
    ‘ದೇಶಕ್ಕಾಗಿ ನಾವು, ನಮಗಾಗಿ ದೇಶ, ರಾಷ್ಷ್ರದ ಉನ್ನತಿಗಾಗಿ ಮತದಾನ ಮಾಡೋಣ, ಪ್ರಜಾಪ್ರಭುತ್ವ ನಮ್ಮದು, ಪ್ರಜೆಗಳೇ ಪ್ರಭುಗಳು, ನಾವು ನಮಗಾಗಿ ನಮ್ಮ ಮತ ಚಲಾಯಿಸೋಣ, ಭರತಖಂಡ ನಮ್ಮದು, ಭಾರತೀಯರು ನಾವು, ನಮ್ಮ ಏಳ್ಗೆಗಾಗಿ ನಮ್ಮ ಮತ-ನಮ್ಮ ಹಕ್ಕು ಚಲಾಯಿಸುತ್ತೇವೆ, ನಮ್ಮ ಮತ ಹಾಕೋಣ, ಎಷ್ಟೇ ಕೆಲಸ ಇರಲಿ, ಎಷ್ಟೇ ಒತ್ತಡ ಇರಲಿ, ಎಷ್ಟೇ ದೂರ ಇರಲಿ, ಮತಗಟ್ಟೆಗೆ ತೆರಳಿ ಮತದಾನ ಮಾಡೋಣ ಎಂಬ ಹಾಡು ಎಲ್ಲರನ್ನು ಗಮನ ಸೆಳೆಯಿತು.’

    ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಮಾತನಾಡಿ ಮತದಾರರು ತಮ್ಮ ಮತಗಟ್ಟೆ ಸಂಖ್ಯೆ, ಮತಗಟ್ಟೆ ಭಾಗದ ಕ್ರಮ ಸಂಖ್ಯೆ, ಮುಂತಾದ ಮಾಹಿತಿ ತಿಳಿದುಕೊಂಡು ಮತದಾನ ಕಡ್ಡಾಯವಾಗಿ ಮಾಡುವಂತಾಗಬೇಕು ಎಂದು ಕೋರಿದರು.
    ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವಂತಾಗಬೇಕು. ಪ್ರತಿ ಮತವೂ ಸಹ ಅಮೂಲ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನವು ಅವಕಾಶ ಮತ್ತು ಕರ್ತವ್ಯವಾಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಆಮೀಷಗಳಿಗೆ ತುತ್ತಾಗಬಾರದು ಎಂದರು.
    ಮಹಿಳೆಯರು ಮತದಾನ ಮಾಡಲು ಮುಂದಾಗಬೇಕು. ಯಾರು ಸಹ ಮತದಾನದಿಂದ ವಂಚಿತರಾಗಬಾರದು ಎಂದರು.
        ಕರ್ತವ್ಯದಲ್ಲಿರುವವರಿಗೆ ಅಂಚೆ ಮತದಾನದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗೇಯೇ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮನೆ ಮನೆಗೆ ಭೇಟಿ ನೀಡಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
          ಜಿ.ಪಂ ಸಿಇಒ ಭರತ್.ಎಸ್ ಅವರು ಮೇ.7 ರಂದು ಮತದಾನ ನಡೆಯಲಿದ್ದು, ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.
           ಮತದಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಮೂಲಕ ಪ್ರತಿಯೊಬ್ಬರೂ ಪಾಲ್ಗೋಳ್ಳಬೇಕು ಎಂದು ತಿಳಿಸಿದರು.
       ಚುನಾವಣಾ ರಾಯಭಾರಿ ಪ್ರೇಮಾ ಹುಚ್ಚಣ್ಣವರ ಅವರು ಮಾತನಾಡಿ ಮೇ.7 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಗದಗ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಆಗಬೇಕು ಎಂದರು.
    ಜಿ.ಪಂ.ಉಪ ಕಾರ್ಯದರ್ಶಿ ಸಿ.ಬಿ.ದೇವರಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಎಂ.ಎ.ರಡ್ಡೇರ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರವಿ ಗುಂಜೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ಶಾಲೆಯ ಮುಖ್ಯೋಪಾದ್ಯಯರಾದ ಎಫ್,ಜೆ.ದಲಭಂಜನ್, ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts