More

    ಕನ್ನಡ ವ್ಯಸನಿಗಳಾದರೆ ಕನ್ನಡಿಗರ ಭವಿಷ್ಯ ಉಜ್ವಲ: ಡಾ. ಎಲ್. ಹನುಮಂತಯ್ಯ ಹೇಳಿಕೆ

    ಬೆಂಗಳೂರು: ಎಲ್ಲರಿಗೂ ಒಂದೊಂದು ವ್ಯಸನವಿರುವಂತೆ ನನಗೆ ಕನ್ನಡವೇ ವ್ಯಸನವಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ವ್ಯಸನವಿರಬೇಕು. ಆಗ ಕನ್ನಡದ ಬಗ್ಗೆ ಕೇಳಿಬರುವ ಆತಂಕದ ಮಾತುಗಳಿಗೆ ವಿರಾಮ ಬೀಳುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು.

    ಎಚ್‌ಎಎಲ್​ ಎಲ್‌ಸಿಎ (ತೇಜಸ್) ವಿಭಾಗದ ತೇಜಸ್ ಕನ್ನಡ ಸಂಘವು ಸ್ಥಾಪಿಸಿರುವ ವಾರ್ಷಿಕ ‘ಕನ್ನಡ ತೇಜಸ್ ಪ್ರಶಸ್ತಿ’ಯನ್ನು ಡಾ. ಎಲ್. ಹನುಮಂತಯ್ಯ ಅವರು ತಮ್ಮ ಮನೆಯಲ್ಲಿ ಸಂಘದ ಪದಾಧಿಕಾರಿಗಳಿಂದ ಭಾನುವಾರ ಸ್ವೀಕರಿಸಿ ಮಾತನಾಡಿದರು.

    ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ ಕನ್ನಡ ಕೇಳುತ್ತಿದ್ದರೆ ಅದಕ್ಕೆ ಕನ್ನಡ ಹೋರಾಟಗಾರರೇ ಕಾರಣ. ಇದನ್ನು ಸರ್ಕಾರ ಮತ್ತು ಕನ್ನಡಿಗರು ಗಮನಿಸಬೇಕು, ಹಾಗೆಯೇ ಕನ್ನಡ ಹೋರಾಟಗಾರರೂ ಕನ್ನಡ ಹೋರಾಟ ಯಾವುದೇ ಭಾಷೆ ಜನರ ವಿರುದ್ದ ಅಲ್ಲ, ಕನ್ನಡದ ಹಿತರಕ್ಷಿಸಲು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ಕನ್ನಡ ಹೋರಾಟಗಾರರನ್ನು ಸರ್ಕಾರ ಗುರುತಿಸಲಿ:

    ಭಾಷೆ-ಸಂಸ್ಕೃತಿಗಳಿಗೆ ಹೆಚ್ಚು ಹಣ ಮಿಸಲಿಟ್ಟಿರುವ ಮತ್ತು ಸಾಧಕರನ್ನು ಗುರುತಿಸುವಲ್ಲಿ ಕರ್ನಾಟಕ ಸರ್ಕಾರ ಇತರೆಲ್ಲ ರಾಜ್ಯ ಸರ್ಕಾರಗಳಿಗಿಂತ ಮುಂಚೂಣಿಯಲ್ಲಿದೆ. ಆದರೆ, ಕನ್ನಡನಾಡು-ನುಡಿಯ ರಕ್ಷಣೆಗೆ ದೊಡ್ಡ ತ್ಯಾಗ ಮಾಡಿರುವ ಕನ್ನಡ ಹೋರಾಟಗಾರರನ್ನು ಗುರುತಿಸುತ್ತಿಲ್ಲ. ಈ ಕೊರತೆಯನ್ನು ಗಮನಿಸಿ ನಾಡು-ನುಡಿಯ ಉತ್ಕರ್ಷಕ್ಕೆ ಶ್ರಮಿಸಿದವರಿಗೆ ಮೀಸಲಾದ ಕನ್ನಡ ತೇಜಸ್ ಪ್ರಶಸ್ತಿಯನ್ನು ಸ್ಥಾಪಿಸಿರುವ ಕನ್ನಡ ಸಂಘದ ಕಾರ್ಯ ಅಭಿನಂದನೀಯ ಎಂದು ಶ್ಲಾಸಿದರು.

    ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕನ್ನಡ ಹೋರಾಟಗಾರರ ಕನ್ನಡ ಕಾಯಕವನ್ನು ಗುರುತಿಸಲಿ ಎಂದು ಆಶಿಸಿದರು.

    ಈ ವೇಳೆ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಎಚ್.ಎಸ್,, ಎಲ್.ಹನುಮಂತಯ್ಯನವರ ಪತ್ನಿ ವಿಜಯಾಂಬಿಕೆ, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೇವರಾಜ್, ಸಂಘದ ನಿಕಟಪೂರ್ವ ಅಧ್ಯಕ್ಷ ಮನುಕುಮಾರ್ ಎಸ್.ಆರ್. ಹಾಗೂ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts