More

  ಇಲ್ನೋಡಿ… ಉಡುಪಿಯಲ್ಲಿ ಕೇಸರಿ ಕಲ್ಲಂಗಡಿ!

  ಹಿರಿಯಡ್ಕದಲ್ಲಿ ತೈವಾನ್​ ತಳಿ ಬೆಳೆದ ಸಾಧಕ | ಪ್ರಯೋಗದಲ್ಲಿ ಯಶಕಂಡ ಕೃಷಿಕ

  ಹಿರಿಯಡ್ಕದ ಸುರೇಶ್​ ನಾಯಕ್​ ಯಶೋಗಾಥೆ

  ಪ್ರಶಾಂತ ಭಾಗ್ವತ, ಉಡುಪಿ
  ಕಲ್ಲಂಗಡಿ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಬೇಸಿಗೆಯಲ್ಲಂತೂ ಇದನ್ನು ತಿನ್ನದವರೇ ಇಲ್ಲ. ರಾಜ್ಯದಲ್ಲಿ ಅನೇಕ ರೈತರು ಕೆಂಪು ಕಲ್ಲಂಗಡಿ ಬೆಳೆಯುತ್ತಾರೆ. ಆದರೆ, ಉಡುಪಿ ತಾಲೂಕಿನ ಹಿರಿಯಡ್ಕ ಗ್ರಾಮದ ಮಾದರಿ ರೈತ ಸುರೇಶ್​ ನಾಯಕ್​, ಕೇಸರಿ ಬಣ್ಣದ ಕಲ್ಲಂಗಡಿ ಬೆಳೆದು ಗಮನ ಸೆಳೆದಿದ್ದಾರೆ.

  ಕಳೆದ ಮಾರ್ಚ್​ ತಿಂಗಳಲ್ಲಿ ತೈವಾನ್​ ದೇಶದ ಹಳದಿ ಕಲ್ಲಂಗಡಿ (ಯೆಲೋ ವಾಟರ್​ಮೆಲನ್​) ಬೆಳೆದು ಸಾಧನೆ ಮೆರೆದಿದ್ದ ಅವರು, ಬಿರು ಬೇಸಿಗೆಯಲ್ಲೂ ಸಹ ಅದೇ ದೇಶದ ಕೇಸರಿ ಕಲ್ಲಂಗಡಿ ತಳಿ (ಆರೆಂಜ್​ ವಾಟರ್​ಮೆಲನ್​) ಬೆಳೆದು ಸಾಧನೆಯ ಇನ್ನೊಂದು ಮೈಲಿಗಲ್ಲು ನೆಟ್ಟಿದ್ದಾರೆ.

  ಇಲ್ನೋಡಿ… ಉಡುಪಿಯಲ್ಲಿ ಕೇಸರಿ ಕಲ್ಲಂಗಡಿ!

  ಕರ್ನಾಟಕದಲ್ಲೇ ಮೊದಲು

  ರಾಜ್ಯದಲ್ಲಿ ಎಲ್ಲಿಯೂ ಕೇಸರಿ ಬಣ್ಣದ ಕಲ್ಲಂಗಡಿ ಬೆಳೆದವರಿಲ್ಲ. ಶ್ರೀಕೃಷ್ಣ ಮಠದ ಮೂಲಕ ಜಗದ್ವಿಖ್ಯಾತವಾದ ಕರಾವಳಿ ನಗರಿ ಉಡುಪಿ, ಕೇಸರಿ ಕಲ್ಲಂಗಡಿಯಿಂದಾಗಿ ಮತ್ತೊಮ್ಮೆ ಗುರುತಿಸಿಕೊಳ್ಳುವಂತಾಗಿದೆ. 15 ಎಕರೆ ಜಮೀನಿನಲ್ಲಿ ಹಳದಿ ಹಾಗೂ ಕೇಸರಿ ಕಲ್ಲಂಗಡಿ ಬೆಳೆದ ಸುರೇಶ್​ ಅವರ ಪ್ರಯೋಗ ಹಾಗೂ ಸಾಹಸದ ಹಿಂದೆ ರೋಚಕ ಕಥೆಯೂ ಇದೆ.

  ಹಡಿಲು ಭೂಮಿಯಲ್ಲಿ ಬೆಳೆ

  ಕೃಷಿಯಲ್ಲಿ ಅಪಾರ ಆಸಕ್ತಿ, ಪ್ರೀತಿ ಹೊಂದಿದ್ದ ಸುರೇಶ್​ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದರು. ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ತುಡಿತದಿಂದ ಬೊಂಬರಬೆಟ್ಟು ಮಾಣೈ ನಿವಾಸಿ ಸುರೇಶ್​ ಪೈ ಅವರ ಹಡಿಲು ಬಿದ್ದಿದ್ದ 5 ಎಕರೆ ಭೂಮಿ ಹಾಗೂ ಊರಿನ ಇನ್ನಿತರ ಜನರು ಹಡಿಲು ಬಿಟ್ಟ ಭೂಮಿ ಸೇರಿ ಒಟ್ಟು 15 ಎಕರೆ ಜಮೀನನ್ನು ಯಾವುದೇ ಕರಾರು ಪತ್ರವಿಲ್ಲದೆ ‘ಮಾತಿನ ಲೀಸ್​’ ಮೂಲಕ ಪಡೆದರು. ಬಳಿಕ ನಡೆದಿದ್ದೆಲ್ಲ ಅದ್ಭುತ, ಹೊಸ ಕ್ರಾಂತಿ.

  Watermelon-4
  ಹಿರಿಯಡ್ಕದಲ್ಲಿರುವ ಅಂಗಡಿಯಲ್ಲಿ ಕಲ್ಲಂಗಡಿ ಮಾರುತ್ತಿರುವ ಪ್ರೇಮಾ ನಾಯಕ್​.

  ಎಕರೆಗೆ 1 ಲಕ್ಷ ರೂ.ಗಿಂತ ಹೆಚ್ಚು ಲಾಭ

  ನವೆಂಬರ್​ನಿಂದ ಫೆಬ್ರವರಿ ತಿಂಗಳಲ್ಲಿ ಕಲ್ಲಂಗಡಿ ಬೆಳೆದರೆ ಎಕರೆಗೆ 13 ಟನ್​ ಇಳುವರಿ ಬರುತ್ತದೆ. ತಲಾ 5 ಎಕರೆಯಲ್ಲಿ ಹಳದಿ ಮತ್ತು ಓರೆಂಜ್​ ಕಲ್ಲಂಗಡಿ ಬೆಳೆದಿದ್ದು, ಭಾರಿ ಬಿಸಿಲು ಇರುವುದರಿಂದ ಎಕರೆಗೆ 6 ಟನ್​ ಇಳುವರಿ ಬಂದಿದೆ. ಶ್ರಮ ವಹಿಸಿ ಬೆಳೆದ ಕಲ್ಲಂಗಡಿಯನ್ನು ಹೋಲ್​ಸೇಲ್​ಗೆ ಮಾರುವುದಿಲ್ಲ. ಹಿರಿಯಡ್ಕ ಸರ್ಕಾರಿ ಶಾಲೆಯ ಬಳಿಯ (ಕಾರ್ಕಳ ರೋಡ್​) ಅಂಗಡಿಯಲ್ಲಿ ನನ್ನ ಪತ್ನಿ ಪ್ರೇಮಾ, ಕೆಜಿಗೆ 40 ರೂ.ನಂತೆ ನೇರವಾಗಿ ಗ್ರಾಹಕರಿಗೇ ಮಾರಾಟ ಮಾಡುತ್ತಾಳೆ. ಮಂಗಳೂರು, ಮೂಡಬಿದ್ರೆ ಹಾಗೂ ಹೊರ ಜಿಲ್ಲೆಯ ಜನರು ಇಲ್ಲಿಗೇ ಬಂದು ಖರೀದಿ ಮಾಡುತ್ತಿದ್ದಾರೆ. ಕೇಸರಿ ಹಾಗೂ ಯೆಲ್ಲೊ ಬೀಜ ಕೆಜಿಗೆ 88 ಸಾವಿರ ರೂ. ಇದ್ದು, ಒಂದು ಎಕರೆ ಬೆಳೆಯಲು ಅಂದಾಜು 1.10 ಲಕ್ಷ ರೂ. ರ್ಖಚಾಗುತ್ತದೆ. ಪ್ರತಿ ಎಕರೆಗೆ 1 ಲಕ್ಷ ರೂ.ಗಿಂತ ಅಧಿಕ ಲಾಭ ಸಿಗುತ್ತದೆ ಎಂದು ವಿಜಯವಾಣಿಯೊಂದಿಗೆ ಸುರೇಶ್​ ನಾಯಕ್​ (ಮೊ: 9481725851) ಸಂತಸ ಹಂಚಿಕೊಂಡರು.

  Watermelon-2
  ಕೇಸರಿ ಕಲ್ಲಂಗಡಿ ಬೆಳೆದ ಸುರೇಶ್ ನಾಯಕ್.

  ಕಲ್ಲಂಗಡಿ ಬೆಳೆಯಲು ಭೂಮಿ ಕೊಡುವಂತೆ ಸುರೇಶ್​ ಕೇಳಿಕೊಂಡಾಗ ನನ್ನ 5 ಎಕರೆ ಜಮೀನನ್ನು ಯಾವುದೇ ಕರಾರಿಲ್ಲದೆ ನೀಡಿದ್ದೇನೆ. ಏಳೆಂಟು ವರ್ಷದಿಂದ ಕಾರ್ಮಿಕರ ಕೊರತೆ ಹಾಗೂ ಇನ್ನಿತರ ಕಾರಣದಿಂದ ಭತ್ತ ಬೆಳೆಯುತ್ತಿದ್ದ ಜಮೀನು ಖಾಲಿ ಇತ್ತು. ನಾನಂತೂ ಭತ್ತ ಬೆಳೆಯುವುದಿಲ್ಲ. ಆತನಿಗಾದರೂ ಕಲ್ಲಂಗಡಿ ಕೃಷಿಗೆ ಜಮೀನು ಪ್ರಯೋಜನವಾಗಲೆಂದು ಉಚಿತವಾಗಿ ನೀಡಿದ್ದೇನೆ.

  ಸುರೇಶ್​ ಪೈ.
  ಜಮೀನು ನೀಡಿ ಸಹಕರಿಸಿದ ಗ್ರಾಮಸ್ಥ.

  ಬೆಳ್ಮಣ್ಣಿನ ಸ್ನೇಹಿತ, ಬೆಂಗಳೂರಿನಲ್ಲಿ ಬೀಜ ತಳಿ ಸಂಶೋಧನಾಕಾರನಾಗಿರುವ ಪ್ರದೀಪ್​ ಎಂಬವರು ಕೇಸರಿ ಕಲ್ಲಂಗಡಿಯ ಮಾಹಿತಿ, ಮಾರ್ಗದರ್ಶನ ನೀಡಿದರು. ಕೃಷಿ ಎಂದರೆ ನಷ್ಟ ಎನ್ನುತ್ತಾರೆ. ಆದರೆ, ಶ್ರಮ ವಹಿಸಿ ದುಡಿದರೆ ಕೃಷಿಯಷ್ಟು ಇಷ್ಟದ ಹಾಗೂ ಲಾಭದ ಕೆಲಸ ಮತ್ತೊಂದಿಲ್ಲ ಎನ್ನುವುದು ನನ್ನ ಸ್ವಂತ ಅನುಭವ. ನನಗೆ ಜಮೀನು ನೀಡಿ ಕಲ್ಲಂಗಡಿ ಕೃಷಿಗೆ ಸಹಕರಿಸಿದ ಊರಿನ ಎಲ್ಲರಿಗೂ ನಾನು ಚಿರಋಣಿ.

  ಸುರೇಶ್​ ನಾಯಕ್​.
  ಮಾದರಿ ಕೃಷಿಕ. ಹಿರಿಯಡ್ಕ, ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts