More

    ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಭವಾನಿ ರೇವಣ್ಣ! ನೆಟ್ಟಿಗರ ಆಕ್ರೋಶ

    ಮೈಸೂರು: ತಾವು ಸಂಚರಿಸುತ್ತಿದ್ದ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಶಾಸಕ ಎಚ್​.ಡಿ. ರೇವಣ್ಣರ ಪತ್ನಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಮಾನವೀಯತೆ ಮರೆತು ಬೈಕ್​ ಸವಾರನನ್ನು ಹಿಗ್ಗಾಮುಗ್ಗಾ ನಿಂದಿಸಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ಇಂದು (ಡಿ.03) ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆದಿದೆ.

    ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರಿನ ಮುಂಭಾಗ ಕೊಂಚ ಜಖಂಗೊಂಡಿತು. ಕೂಡಲೇ ಕೆಳಗೆ ಇಳಿದು ಪರಿಶೀಲಿಸಿದಾಗ ಕಾರಿಗೆ ಹಾನಿಯಾಗಿರುವುದನ್ನು ನೋಡಿ ತಾಳ್ಮೆ ಕಳೆದುಕೊಂಡ ಭವಾನಿ ರೇವಣ್ಣ ನಡುರಸ್ತೆಯಲ್ಲೇ ಬೈಕ್​ ಸವಾರನನ್ನು ಮನಬಂದಂತೆ ಅವಾಚ್ಯ ಪದಗಳಿಂದಲೇ ನಿಂದಿಸಿದ್ದಾರೆ.

    ಅಪಘಾತಕ್ಕೀಡಾದ ವ್ಯಕ್ತಿಯ ಬಗ್ಗೆ ಕೊಂಚವೂ ಗಮನ ಹರಿಸದೇ ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು, ಒಂದೂವರೆ ಕೋಟಿ ಕಾರೇ ಆಗ್ಬೇಕಿತ್ತಾ? ಎಂದು ಪ್ರಶ್ನಿಸುವ ಮೂಲಕ ಮಾನವೀಯತೆ ಮರೆತು ವರ್ತಿಸಿದ್ದಾರೆ. ಅಲ್ಲದೆ, ಬೈಕ್​ ಸವಾರನ ಬೈಕ್​ ಅನ್ನು ಸುಟ್ಟು ಹಾಕುವಂತೆಯೂ ಕರೆ ನೀಡಿದ್ದಾರೆ. ಗಾಡಿ ಡ್ಯಾಮೇಜ್​ ಆಗಿದೆ. ಇದನ್ನು ರಿಪೇರಿ ಮಾಡಿಸುವುದು ಹೇಗೆ? ಬಂದು ಡಿಕ್ಕಿ ಹೊಡೆಯುವಷ್ಟು ಅರ್ಜೆಂಟ್​ ಏನಿತ್ತು ನಿನಗೆ ಎಂದು ರಸ್ತೆಯಲ್ಲೇ ಕೂಗಾಡಿದ್ದಾರೆ. ಹೋಗಲಿ ಬಿಟ್ಟು ಬಿಡಿ ಎಂದು ಸ್ಥಳೀಯರ ಮಧ್ಯಪ್ರವೇಶಿಸಿ ಕೇಳಿಕೊಂಡರು ಬಿಡದ ಭವಾನಿ ಅವರು ಗಾಡಿ ರಿಪೇರಿ ಮಾಡಿಸೋಕೆ 50 ಲಕ್ಷ ರೂಪಾಯಿಯನ್ನು ನೀವು ಕೊಡ್ತಿರಾ ಎಂದು ಗದರಿದ್ದಾರೆ. ಹಣ ಕೊಡೋ ಹಾಗಿದ್ರೆ ನ್ಯಾಯದ ಮಾತನಾಡಿ ಎಂದು ಸ್ಥಳೀಯರನ್ನೂ ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡರು.

    ಇಷ್ಟಕ್ಕೆ ಸುಮ್ಮನಾಗದ ಭವಾನಿ ರೇವಣ್ಣ, ಬೈಕ್​ ಸವಾರ ಗಾಡಿ ಸೀಜ್​ ಮಾಡಿ, ಸ್ಥಳಕ್ಕೆ ಸಾಲಿಗ್ರಾಮ ಎಸ್​ಐ ಬರುವುದಕ್ಕೆ ಸಹಾಯಕರಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸಾಲಿಗ್ರಾಮ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ, ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

    ವ್ಯಾಪಕ ಟೀಕೆ
    ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭವಾನಿ ರೇವಣ್ಣ ಅವರ ನಡೆಯನ್ನು ನೆಟ್ಟಿಗರು ವ್ಯಾಪಕವಾಗಿ ಖಂಡಿಸಿದ್ದಾರೆ. ಬೈಕ್​ನಿಂದ ಸವಾರ ಕೆಳಗೆ ಬಿದ್ದಿದ್ದರೂ ಅದನ್ನು ಗಮನಿಸದೇ ತಮ್ಮ ಕಾರಿನ ಬಗ್ಗೆ ಮಾತನಾಡುತ್ತಿದ್ದಾರೆ, ದೊಡ್ಡಗೌಡರ ಸೊಸೆಯಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮಾನವೀಯತೆಗಿಂತ ದುಡ್ಡು ಮುಖ್ಯವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭವಾನಿ ರೇವಣ್ಣ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

    ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!

    ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts