More

    ಗಡಿ ಪ್ರದೇಶದಲ್ಲಿ ಖಾಕಿ ಪಡೆ ಕಾವಲು

    ಭರಮಸಾಗರ: ದಾವಣಗೆರೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಹೆಚ್ಚುತ್ತಿರುವ ಕಾರಣ ಚಿತ್ರದುರ್ಗ ಜಿಲ್ಲಾ ಗಡಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಚಿತ್ರದುರ್ಗ ಜಿಲ್ಲೆ ಹಸಿರು ವಲಯದಲ್ಲಿರುವ ಕಾರಣ ದಾವಣಗೆರೆಗಿಂತ ಹೆಚ್ಚು ಸುರಕ್ಷಿತ ಎಂದು ಹಲವರು ಚಿತ್ರದುರ್ಗ ಜಿಲ್ಲೆಯ ತಮ್ಮ ಸಂಬಂಧಿಗಳ ಮನೆಗಳಿಗೆ ಬೈಕ್, ಕಾರುಗಳ ಮೂಲಕ ಒಳದಾರಿಗಳಲ್ಲಿ ಬರುತ್ತಿರುವುದನ್ನು ಮನಗಂಡ ಗ್ರಾಮಸ್ಥರು ಹೊರ ಜಿಲ್ಲೆಗಳಿಂದ ಬರುವವರನ್ನು ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

    ತಕ್ಷಣ ಎಚ್ಚೆತ್ತ ಪೊಲೀಸ್, ಕಂದಾಯ ಹಾಗೂ ಸ್ಥಳೀಯ ಆಡಳಿತ, ಹೋಬಳಿಯ ಬಸ್ತಿಹಳ್ಳಿ, ಬಹದ್ದೂರುಘಟ್ಟ, ಹೊಸಟ್ಟಿ, ಬೇವಿನಹಳ್ಳಿ, ನಂದೀಹಳ್ಳಿ, ಎಮ್ಮೇಹಟ್ಟಿ, ಹಂಪನೂರು ಹಾಗೂ ಸಿರಿಗೆರೆ ಭಾಗದಲ್ಲಿ ಬ್ಯಾರಿಕೇಡ್ ಕಟ್ಟಿ ಹೊರ ಜಿಲ್ಲೆಯಿಂದ ಬರುವವರನ್ನು ನಿಯಂತ್ರಿಸಲಾಗುತ್ತಿದೆ.

    ಬೇವಿನಹಳ್ಳಿ ಭಾಗದಲ್ಲಿ ವಾಹನ, ಜನ ಸಂಚಾರ ತಡೆಯಲು ಟ್ರೆಂಚ್ ಹೊಡೆಸಿದ್ದರೂ ಲೆಕ್ಕಿಸದೆ ಸಂಚಾರ ಮಾಡುತ್ತಿದ್ದರಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಮಾರ್ಗ ಬಂದ್ ಮಾಡಲಾಗಿದೆ. ಇನ್ನು ಚೆಕ್‌ಪೋಸ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರೊನಾ ಸೇನಾನಿಗಳು, ದಾವಣಗೆರೆಯಿಂದ ಬರುವವರನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

    ಎಚ್ಚೆತ್ತ ಗ್ರಾಮಸ್ಥರು: ಕರೊನಾ ವೈರಸ್ ಭೀತಿಗೆ ಬೆಚ್ಚಿರುವ ವಿವಿಧ ಹಳ್ಳಿಯ ಜನತೆ, ಗ್ರಾಮಕ್ಕೆ ಯಾರೇ ಹೊಸಬರು ಬಂದರೂ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಹೊಸಬರು ಬಂದರೆ ಸ್ಥಳೀಯ ಆಡಳಿತ, ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇತರರನ್ನು ಜನರೇ ಎಚ್ಚರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts