More

    ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಬೆತ್ತನಗೆರೆ ಶಂಕರ ಯಾರು? ಇಲ್ಲಿದೆ ಹಿನ್ನೆಲೆ

    ಬೆಂಗಳೂರು: ರಾಜ್ಯ ರಾಜಕಾರಣಕ್ಕೆ ಹೊಸ ಮುಖಗಳ ಪರಿಚಯವಾಗುತ್ತಿದೆ. ಮಾಜಿ ರೌಡಿ ಶೀಟರ್​ಗಳಾಗಿದ್ದ ಸೈಲೆಂಟ್ ಸುನೀಲ, ಪೈಂಟರ್ ರವಿ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಾರೆ ಎಂಬ ಮಾತುಗಳ ನಡುವೆಯೇ, ಬೆತ್ತನಗೆರೆ ಶಂಕರ ರಾಜಕೀಯ ಅಖಾಡಕ್ಕೆ ಪ್ರವೇಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಸದ್ಯ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು, ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಬಿಜೆಪಿಗೆ ಸೇರ್ಪಡೆಯಾಗುತ್ತಾನೆ ಎಂದು ಹೇಳಲಾಗುತ್ತಿರುವ ಬೆತ್ತನಗೆರೆ ಶಂಕರ, ಕಳೆದ 20 ವರ್ಷಗಳ ಹಿಂದೆ ತನ್ನ ಊರಿನಲ್ಲಿ ರಕ್ತ ಚರಿತ್ರೆಗೆ ಕಾರಣವಾಗಿದ್ದ ರೌಡಿಶೀಟರ್. ಸದ್ಯ ಬೆತ್ತನಗೆರೆ ಶಂಕರ ಕಳೆದ 6-7 ವರ್ಷಗಳಿಂದ ಸೈಲೆಂಟ್ ಆಗಿದ್ದು, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾನೆ.

    ರೌಡಿ ಬ್ಯಾಗ್ರೌಂಡ್ ಹೊಂದಿರುವ ಬೆತ್ತನಗೆರೆ ಶಂಕರ ರಾಜಕೀಯಕ್ಕೆ ಸೇರ್ಪಡೆಯಾಗಲೆಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ. ಸದ್ಯ ಈತನ ಹೆಸರು ನಲ್ಲೂರು ಶಂಕರೇಗೌಡ.

    ರೌಡಿ ಬ್ಯಾಗ್ರೌಂಡ್ ಹೊಂದಿರುವ ಬೆತ್ತನಗೆರೆ ಶಂಕರ, ತನ್ನ ಸ್ವಂತ ಊರಾದ ಬೆತ್ತನಗೆರೆ ಹಾಲಿನ ಡೈರಿ ಚುನಾವಣೆಯಲ್ಲಿ ಶುರುವಾದ ರಾಜಕೀಯ ವೈಷಮ್ಯ ಉಂಟು ಮಾಡಿಕೊಂಡಿದ್ದ. ಈ ವೈಷಮ್ಯ ಚುನಾವಣೆಯಲ್ಲಿ ಗೆದ್ದಿದ್ದ ಬಾಳೆಕಾಯಿ ಬಸವಯ್ಯನ ಕೊಲೆಯ ಮೂಲಕ ಅಂತ್ಯವಾಗಿತ್ತು. ಈ ಕೊಲೆಯಲ್ಲಿ ಸಾಕ್ಷಿ ಹೇಳಬೇಕಿದ್ದ ವಕೀಲ ದೇವರಾಜು, ಕೃಷ್ಣಮೂರ್ತಿಯನ್ನು ಕೊಲೆ ಮಾಡುವ ಮೂಲಕ ಬೆತ್ತನಗೆರೆ ಶಂಕರನ ರೌಡಿಸಂ ಆರಂಭವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದಾದ ನಂತರ ಮೃತ ದೇವರಾಜು ತಂದೆ ಬೈಲಪ್ಪನನ್ನು ಕೊಲೆ ಮಾಡುತ್ತಾನೆ. ಇದಾದ ನಂತರ ನಗರದಲ್ಲಿ ಹಲವು ದರೋಡೆ, ಅಪಹರಣ, ಕೊಲೆ ಯತ್ನ, ಹಫ್ತಾ ವಸೂಲಿಯಂತಹ ಪ್ರಕರಣಗಳಲ್ಲಿ ಬೆತ್ತನಗೆರೆ ಶಂಕರ ಭಾಗಿಯಾಗಿದ್ದ ಆರೋಪವಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಹುತೇಕ ಪ್ರಕರಣದಿಂದ ಬಚಾವಾಗುತ್ತಿದ್ದ. ಕೆಲವು ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಬೆತ್ತನಗೆರೆ ಶಂಕರ ಕಳೆದ 5-6 ವರ್ಷಗಳಿಂದ ಸೈಲೆಂಟ್ ಆಗಿದ್ದಾನೆ. ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲೆಂದು ಪೊಲೀಸರು ಬೆತ್ತನಗೆರೆ ಶಂಕರನನ್ನು ತುಮಕೂರಿಗೆ ಗಡಿಪಾರು ಮಾಡಿದ್ದರು. ಅಲ್ಲಿಂದ ಸೈಲೆಂಟ್ ಆದ ಶಂಕರ, ಮೈಸೂರಿನ ಎಚ್​.ಡಿ.ಕೋಟೆಯಲ್ಲಿ ಭೂಮಿ ಖರೀದಿಸಿ ಸದ್ಯ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    ಇದೀಗ ರಾಜ್ಯದಲ್ಲಿ ಚುನಾವಣಾ ಸಮಯ ಹತ್ತಿರವಾಗುತ್ತಿದ್ದು, ತನ್ನ ಹೆಸರನ್ನು ನಲ್ಲೂರು ಶಂಕರೇಗೌಡ ಎಂದು ಬದಲಿಸಿಕೊಂಡು ರಾಜಕೀಯ ಎಂಟ್ರಿ ಕೊಡಲು ಹಲವು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts