More

    ಕಾಗದದಲ್ಲಿ ಮಾತ್ರ ಇಂಟರ್ನ್‌ಶಿಪ್..? ಪ್ರಶಿಕ್ಷಣಾರ್ಥಿ-ಮುಖ್ಯಶಿಕ್ಷಕರ ನಡುವೆ ಒಳಒಪ್ಪಂದ?

    ಶ್ರೀಕಾಂತ ಅಕ್ಕಿ ಬಳ್ಳಾರಿ
    ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಾಲಾ ಹಂತದ ನೈಜ ಅನುಭವ ದೊರಕಲಿ ಎಂಬ ಕಾರಣಕ್ಕೆ ಅಂತಿಮ ಸೆಮಿಸ್ಟರ್‌ನಲ್ಲಿ 50 ದಿನಗಳ ಇಂಟರ್ನ್‌ಶಿಫ್ ತರಬೇತಿಗೆ ರೂಪಿಸಿರುವ ನಿಯಾಮವಳಿಗಳು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪಾಲನೆಯಾಗುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

    ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ 2015ರ ಶೈಕ್ಷಣಿಕ ವರ್ಷದಿಂದ 1 ವರ್ಷದ ಬಿ.ಇಡಿ ಕೋರ್ಸ್‌ಅನ್ನು 2 ವರ್ಷಕ್ಕೆ ವಿಸ್ತರಿಸಿದೆ. ಪ್ರಾಯೋಗಿಕ ಹಾಗೂ ವೃತ್ತಿ ನಿರತ ಸಾಮರ್ಥ್ಯ ದೊರಕಿಸುವ ನಿಟ್ಟಿನಲ್ಲಿ ಪಠ್ಯಕ್ರಮ ರೂಪಿಸಿದೆ. ಅದರಂತೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ 20 ಬಿ.ಇಡಿ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಳೆದ ಡಿಸೆಂಬರ್‌ನಿಂದ ತ್ರಿವಳಿ ಜಿಲ್ಲೆಗಳ ವಿವಿಧ ಶಾಲೆಗಳಲ್ಲಿ ಈಗಾಗಲೇ ತರಬೇತಿ ಆರಂಭವಾಗಿದೆ. ಬೆರಣಿಕೆಯಷ್ಟು ಪ್ರಶಿಕ್ಷಣಾರ್ಥಿಗಳು ಮಾತ್ರ ವಾಸ್ತವ ತರಬೇತಿ ಪಡೆಯುತ್ತಿದ್ದಾರೆ. ಹಲವರು ಸರ್ಟಿಫಿಕೇಟ್‌ಗೆ ಸೀಮಿತರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತು ನಿಗಾ ಇಡದ ಪರಿಣಾಮ ಬಿ.ಇಡಿ ವಿದ್ಯಾರ್ಥಿಗಳು ಸರಿಯಾಗಿ ತರಬೇತಿ ಪಡೆಯುತ್ತಿಲ್ಲ. ವಿಎಸ್‌ಕೆ ವಿವಿಯು ತರಬೇತಿಯ ವೇಳಾಪಟ್ಟಿ ಪ್ರಕಟಣೆ ಮಾಡಿ ಕೈ ತೊಳೆದುಕೊಂಡರೆ, ಶಿಕ್ಷಣ ಇಲಾಖೆ ಅನುಮತಿ ನೀಡಿ ಕಣ್ಮುಚ್ಚಿ ಕುಳಿತಿದೆ. ಬಿ.ಇಡಿ ಕಾಲೇಜುಗಳು ತರಬೇತಿಗಾಗಿ ಪ್ರಶಿಕ್ಷಣಾರ್ಥಿಗಳನ್ನು ಮಹಾವಿದ್ಯಾಲಯದಿಂದ ಬಿಡುಗಡೆಗೊಳಿಸಿ ತಮಗೇನು ಸಂಬಂಧವಿಲ್ಲ ಎಂಬಂತಿವೆ. ಕೆಲ ಪ್ರಶಿಕ್ಷಣಾರ್ಥಿಗಳು ಪ್ರಭಾವ ಬೀರಿ ಮುಖ್ಯ ಶಿಕ್ಷಕರ ಜತೆ ಒಪ್ಪಂದ ಮಾಡಿಕೊಂಡು(ಒಂದಿಷ್ಟು ಹಣ ನೀಡಿ)ಶಾಲೆಗಳಿಗೆ ತೆರಳದೇ ಹಾಜರಾತಿ ಪಡೆದುಕೊಳ್ಳುತ್ತಿದ್ಧಾರೆ.

    ಇಂಟರ್ನ್‌ಶಿಫ್ ತರಬೇತಿಯು ಪ್ರಮುಖ ಘಟ್ಟವಾಗಿದೆ. ದ್ವಿತೀಯ ಮತ್ತು ತೃತೀಯ ಸೆಮಿಸ್ಟರ್‌ನಲ್ಲಿ ಬೋಧನಾಭ್ಯಾಸ ಪಡೆಯಬಹುದು. ಆದರೆ, ಅಂತಿಮ ಸೆಮಿಸ್ಟರ್‌ನಲ್ಲಿ ನಡೆಯುವ ತರಬೇತಿಯಲ್ಲಿ ಶಾಲಾಡಳಿತ, ವ್ಯವಸ್ಥೆ, ಸಂಘಟಣೆ, ದಾಖಲೆಗಳು ಮತ್ತಿತರ ಇಲಾಖೆಗಳೊಂದಿಗಿನ ಸಂಬಂಧ, ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಯೋಜನೆಗಳು ಸೇರಿ ಹಲವು ಚಟುವಟಿಕೆಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಪ್ರಶಿಕ್ಷಣಾರ್ಥಿಗಳಿಗೆ ಕಡ್ಡಾಯ. ಆದರೆ, ಇಂಟರ್ನ್‌ಶಿಫ್ ತರಬೇತಿಯನ್ನು ಪ್ರಶಿಕ್ಷಣಾರ್ಥಿಗಳು ಪಡೆಯದಿರುವುದು ದುರದೃಷ್ಟಕರ. ಬಹುತೇಕ ಬಿ.ಇಡಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅತಿಥಿ ಉಪನ್ಯಾಸಕರು, ಅರೆಕಾಲಿಕ ನೌಕರದಾರರು, ಗೃಹಿಣಿಯರು. ಇವರಲ್ಲಿ ಬಹುತೇಕರು ಬಿ.ಇಡಿ ತರಗತಿಗೆ ಹಾಜರಾಗದೇ ನೇರವಾಗಿ ಪರೀಕ್ಷೆ ಬರೆಯುತ್ತಾರೆ. ಇಂಟರ್ನ್‌ಶಿಫ್ ತರಬೇತಿ ಸಲೀಸಾಗಿ ಪೂರ್ಣಗೊಳಿಸಲು ಅನೂಕೂಲಕ್ಕೆ ತಕ್ಕಂತೆ ಸ್ವಂತ ಊರಿನ ಸ್ಥಳೀಯ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪ್ರಭಾವ ಬೀರಿ ಶಾಲೆಯಲ್ಲಿ ಬೋಧನಾಭ್ಯಾಸ ಮಾಡದೇ ತರಬೇತಿ ಪೂರ್ಣಗೊಳಿಸುತ್ತಿದ್ದಾರೆ.

    ಪ್ರಶಿಕ್ಷಣಾರ್ಥಿಗಳಿಂದಲೇ ಎಲ್ಲ ಕೆಲಸ
    ಹಲವಡೆ ಪ್ರಶಿಕ್ಷಣಾರ್ಥಿಗಳು ತರಬೇತಿಗೆ ಚಕ್ಕರ್ ಹಾಕುವುದು ಒಂದೆಡೆಯಾದರೆ, ಕೆಲವು ಶಾಲೆಗಳಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಶಿಕ್ಷಕರು ಎಗ್ಗಿಲ್ಲದೇ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿದಿನ 6-7 ತರಗತಿಗಳಿಗೆ ಪಾಠ ಮಾಡಲು ಹೇಳುತ್ತಿದ್ದಾರೆ. ಶಾಲೆಯ ಇತರ ಕೆಲಸಗಳನ್ನೂ ಮಾಡಿಸುತ್ತಾರೆ. ಇದಕ್ಕೆ ಒಪ್ಪದಿದ್ದರೆ ತರಬೇತಿ ಅವಕಾಶ ನೀಡುವುದಿಲ್ಲ. ಎಷ್ಟೋ ಜನ ಶಿಕ್ಷಕರು ಮಾರ್ಗದರ್ಶನ ನೀಡದೇ ಹರಟೆ ಹೊಡೆದು ಮನೆಗೆ ಹೋಗುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಆಡಳಿತ ಮತ್ತು ತರಬೇತಿ(ಡಯಟ್)ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಶಿಕ್ಷಣಾಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ತಪಾಸಣೆ ಮಾಡಿದರೆ ಸತ್ಯಾಂಶ ಬೆಳಕಿಗೆ ಬರುತ್ತದೆ.

    ಪ್ರಶಿಕ್ಷಣಾರ್ಥಿಗಳು ಸರಿಯಾಗಿ ತರಬೇತಿ ಪಡೆಯದಿರುವುದರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿರಂತರ ಶಾಲೆಗಳಿಗೆ ಭೇಟಿ ನೀಡಿ, ಪ್ರಶಿಕ್ಷಣಾರ್ಥಿಗಳ ಹಾಜರಾತಿ ಮತ್ತು ಪಾಠಯೋಜನೆ ಹಾಗೂ ಶಿಕ್ಷಕರು ಯಾವ ರೀತಿ ತರಬೇತಿಯಲ್ಲಿ ಸಹಕರಿಸಿ ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶಿದ್ದಾರೆ ಎಂದು ದಾಖಲೆ ಪರಿಶೀಲಿಸಿದರೆ ಸಾಕು ಎಲ್ಲವೂ ಸರಿಯಾಗಲಿದೆ.
    | ಹೆಸರು ಹೇಳಲು ಇಚ್ಛಿಸದ ನಿವೃತ್ತ ಶಿಕ್ಷಕ, ಬಳ್ಳಾರಿ

    ಶಾಲೆಗಳಿಗೆ ಹಠಾತ್ತನೇ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಇನ್ಮುಂದೆ ನಿರಂತರವಾಗಿ ಭೇಟಿ ನೀಡಲಗುವುದು. ಪ್ರಶಿಕ್ಷಣಾರ್ಥಿಗಳು, ಶಾಲಾ ಮುಖ್ಯಶಿಕ್ಷಕರ ಮೇಲೆ ನಿಗಾ ಇಡಲಾಗುವುದು. ಭಾವಿ ಶಿಕ್ಷಕರು ಸರಿಯಾಗಿ ತರಬೇತಿ ಪಡೆಯದೇ ಅಡ್ಡದಾರಿ ಹಿಡಿಯುವ ಕ್ರಮ ಸರಿಯಲ್ಲ.
    | ಸಿ.ರಾಮಪ್ಪ ಬಳ್ಳಾರಿ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts