ಬೆಳಗಾವಿ: ಭಾನುವಾರ ನಗರದಲ್ಲಿ ನಡೆದ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ
ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಮಾತೋಶ್ರೀ ಶಾಂತಾದೇವಿ ಮಲ್ಲಯ್ಯ ಕವಟಗಿಮಠ ಅವರು
ಮುರುಘಾಮಠದ ಅನ್ನದಾಸೋಹಕ್ಕಾಗಿ 5 ಲಕ್ಷ ರೂ. ದೇಣಿಗೆಯಾಗಿ ಧಾರವಾಡದ ಶ್ರೀಗಳಿಗೆ ನೀಡಿದರು.
ಶಾಂತಾದೇವಿ ಕವಟಗಿಮಠ ಅವರು ತಮ್ಮ ಹೊಲದಲ್ಲಿ ಮಾಡಿರುವ ಕೃಷಿಯಿಂದ ಬಂದಿರುವ ಆದಾಯವನ್ನು ಉಳಿತಾಯ ಮಾಡಿ ಇಟ್ಟಿದ್ದರು. ಅಲ್ಲದೆ, ಮುರಘಾಮಠದ ಅನ್ನದಾಸೋಹಕ್ಕೆ 5 ಲಕ್ಷ ರೂ. ದೇಣಿಗೆ ನೀಡಬೇಕು ಎಂದು ಬಯಸಿದ್ದರು. ಶ್ರೀಗಳು ಮೊಮ್ಮಗಳ ಮದುವೆಗೆ ಆಗಮಿಸಿದ್ದರು. ಶ್ರೀಗಳಿಗೆ ಶ್ರದ್ಧೆಯಿಂದ ನಮಸ್ಕರಿಸಿ, 5 ಲಕ್ಷ ರೂ. ನೀಡುವ ಮೂಲಕ ಇತರರಿಗೆ ಸ್ಫೂರ್ತಿಯಾದರು.
ಮಠಾಧೀಶರ ಸಮಾಗಮ: ಕವಟಗಿಮಠ ಅವರ ಪುತ್ರಿಯ ವಿವಾಹ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಜಗದ್ಗುರುಗಳು ಮತ್ತು ವಿರಕ್ತಮಠಾಧೀಶರ ಸಮಾಗಮಕ್ಕೆ ವೇದಿಕೆ ಸಾಕ್ಷಿಯಾಯಿತು.
ಉಜ್ಜಯನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಕಾಶಿ ಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯರು, ಶ್ರೀಶೈಲದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ಧರಾಮ ಸ್ವಾಮೀಜಿ, ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡ ಮುರಘಾಮಠದ ಶ್ರೀಗಳು, ಚಿಕ್ಕೋಡಿ ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಸಪೇಟೆಯ ಸಂಗನಬಸವ ಸ್ವಾಮೀಜಿ, ಮುರಗೋಡದ ನೀಲಕಂಠ ಮಹಾಸ್ವಾಮೀಜಿ ಸೇರಿ ಹರ-ಗುರು ಚರಮೂರ್ತಿಗಳು ಆಗಮಿಸಿದ್ದರು. ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸೇರುವ ಮೂಲಕ ವೀರಶೈವ-ಲಿಂಗಾಯತ ವಾದ-ವಿವಾದದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಇದು ತೆರೆ ಎಳೆದಂತಾಯಿತು.
ಒಟ್ಟಿನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಮಠಾಧೀಶರು ಹಾಗೂ ಜಗದ್ಗುರುಗಳು ಸಮ-ವೇದಿಕೆ ಹಂಚಿಕೊಂಡು ಸಮಾಜಕ್ಕೆ ಹೊಸ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಮದುವೆಗೆ ಆಗಮಿಸಿದ ಭಕ್ತರು ಮೂಕವಿಸ್ಮಿ ತರಾಗಿದ್ದಂತೂ ಸತ್ಯ.