More

    ಬೆಳಗಾವಿಯ ಆದಿತ್ಯಗೆ ಬೆಳ್ಳಿಗದೆ

    ಬೀರೂರು: ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಬೀರೂರು ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘ ಹಾಗೂ ಪುರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಭಾರಿ ಬಹಿರಂಗ ಬಯಲು ಕುಸ್ತಿಯಲ್ಲಿ ಬೆಳಗಾವಿಯ ಆದಿತ್ಯ ಬೆಳ್ಳಿಗದೆ ತಮ್ಮದಾಗಿಸಿಕೊಂಡರು.
    ಪಟ್ಟಣದ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯಾವಳಿಯಲ್ಲಿ ಬೆಳಗಾವಿಯ ಆದಿತ್ಯ ಮತ್ತು ಶಿಕಾರಿಪುರದ ಪಂಕಜ್ ಅಖಾಡದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಜಿದ್ದಾಜಿದ್ದಿ ಹೋರಾಟ ನಡೆಸಿದರು. ಕೊನೆಗೆ ಇಬ್ಬರೂ ನೆಲಕ್ಕೆ ಬಿದ್ದಿದ್ದರಿಂದ ಅಂಪೈರ್ ಪಾಯಿಂಟ್ ಲೆಕ್ಕದ ಕುಸ್ತಿ ಆಡುವಂತೆ ಸೂಚಿಸಿದರು. ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರು ಕೇಕೆ, ಶಿಳ್ಳೆಗಳಿಂದ ಪ್ರಚೋದಿಸುತ್ತಿದ್ದರು. ಜಿದ್ದಾ ಜಿದ್ದಿನ ಹೋರಾಟದಲ್ಲಿ ಪಂಕಜ್‌ರನ್ನು ಮಣಿಸಿದ ಆದಿತ್ಯ ಬೆಳ್ಳಿಗದೆ ಪಡೆದುಕೊಂಡರು.
    ಬೊಮ್ಮನಹಳ್ಳಿಯ ಮಾರುತಿ ಸೋಲಿಸಿದ ಶಿಕಾರಿಪುರದ ಸುಹಾಸ್ ಬಂಗಾರದ ಪದಕ ಗಳಿಸಿದರೆ, ಗುಲ್ಬರ್ಗದ ಸಿದ್ದಪ್ಪ ಬೆಳ್ಳಿಕಪ್ಪು ಗೆದ್ದರು. ದಿವಂಗತ ಪ್ರದೀಪ್ ಕರಡಿ ಪ್ರಶಸ್ತಿ, ಲಾರಿ ಮಾಲೀಕರು ಮತ್ತು ಚಾಲಕರ ಪ್ರಶಸ್ತಿ, ಶಿವಾಜಿ ಮರಾಠ ಸಮಾಜ ಪ್ರಶಸ್ತಿ, ಶ್ರೀ ವೀರಭದ್ರಸ್ವಾಮಿ ಪ್ರಶಸ್ತಿ, ಚೊಕ್ಕಾಪುರದ ಚೌಡೇಶ್ವರಿ ಪ್ರಶಸ್ತಿ, ಕಟ್ಟಡ ಕಾರ್ಮಿಕರ ಪ್ರಶಸ್ತಿ, ಅಂಜುಮಾನ್ ಪ್ರಶಸ್ತಿ, ಭೋವಿ ಸಮಾಜ ಪ್ರಶಸ್ತಿ, ಶ್ರೀಮೈಲಾರಲಿಂಗೇಶ್ವರ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕನ್ನಡ ಸಂಘ ಪ್ರಶಸ್ತಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘ ಪ್ರಶಸ್ತಿ, ಭಗೀರಥ ಪ್ರಶಸ್ತಿಯಂತಹ ಹಲವಾರು ನಗದು ಪ್ರಶಸ್ತಿಯ ಕುಸ್ತಿಗಳನ್ನು ನಡೆಸಲಾಯಿತು.
    ಪಂದ್ಯಾವಳಿಗೆ ಬೆಳಗಾವಿ, ದಾವಣಗೆರೆ, ಗುಲ್ಬರ್ಗಾ, ಶಿಕಾರಿಪುರ, ಮೈಸೂರು, ಹಿಂಡಿ, ಧಾರವಾಡ ಮಾತ್ರವಲ್ಲದೇ ದೆಹಲಿ, ಹರಿಯಾಣದಿಂದ 150 ಕ್ಕಿಂತ ಹೆಚ್ಚು ಕ್ರಿಡಾಪಟುಗಳು ಪಂದ್ಯಾವಳಿಗೆ ಮೆರಗು ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts