More

    PSI ಹೆಸರಲ್ಲಿ ಸರಸ ಸಲ್ಲಾಪ: ಇನ್​ಸ್ಟಾಗ್ರಾಂನಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಹುಬ್ಬಳ್ಳಿ ಹೈದ ಸಿಕ್ಕಿಬಿದ್ದಿದ್ದೇ ರೋಚಕ

    ಬೆಳಗಾವಿ: ಖಡಕ್ ಅಧಿಕಾರಿಯಾಗಿದ್ದುಕೊಂಡು ಸದಾ ಸಮಾಜ ಸೇವೆಗೆ ಹಾತೊರೆಯುವ ಪೊಲೀಸ್ ಅಧಿಕಾರಿಗಳನ್ನು ಯಾರು ತಾನೆ ದ್ವೇಷಿಸಲು ಸಾಧ್ಯ? ಇಂಥಹದ್ದೇ ಓರ್ವ ಸಮಾಜ ಉಪಕಾರಿ ಪೊಲೀಸ್ ಅಧಿಕಾರಿಯ ನಕಲಿ ಖಾತೆ ತೆರೆದು ಯುವತಿರೊಂದಿಗೆ ಆನ್‌ಲೈನ್‌ನಲ್ಲೇ ಸಲ್ಲಾಪ ನಡೆಸಿ, ವಂಚಿಸಿರುವ ಘಟನೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

    ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್​ ಕುಮಾರ್​ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರದು 50ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ ಹುಬ್ಬಳ್ಳಿ ನಗರದ ನಿವಾಸಿ, ಅಥಣಿ ಮೂಲದ ವಿಜಯ ಶ್ರೀಶೈಲ ಬಾರ್ಲಿ(28) ಇದೀಗ ಹಿಂಡಲಗಾ ಜೈಲು ಸೇರಿದ್ದಾನೆ. ಬಂಧಿತ ಆರೋಪಿಯು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್​ ಕುಮಾರ್​ ಕುಂಬಾರ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು, ಪೋಟೊಗಳನ್ನು ಬಳಸಿರುವ ಬಗ್ಗೆ ಪಿಎಸ್‌ಐ ಕುಂಬಾರ ಅವರು ನವೆಂಬರ್‌ನಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್ಸ್​ಪೆಕ್ಟರ್​ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಪಿಎಸ್‌ಐ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಠಿಸಿ ಸುಮಾರು 1.12 ಲಕ್ಷ ಫಾಲೋವರ್ಸ್‌ ಗಳಿಸಿಕೊಂಡಿದ್ದಾನೆ. ತಾನೇ ಪಿಎಸ್‌ಐ ಎಂದು ನಂಬಿಸಿ ಸ್ನೇಹ ಬೆಳೆಸಿ ಮೋಸತನದಿಂದ ನೌಕರಿ ಹಾಗೂ ಇನ್ನಿತರ ಆಮಿಷಗಳನ್ನೊಡ್ಡಿ ವಂಚಿಸಿದ್ದಾನೆ.

    ನಕಲಿ ಖಾತೆಯಲ್ಲಿ ತಾನೇ ಪಿಎಸ್‌ಐ ಎಂದು ಯುವತಿಯರನ್ನು ಪುಸಲಾಯಿಸಿ, ಆನ್‌ಲೈನ್ ಚಾಟಿಂಗ್ ಮೂಲಕ ಸರಸ ಸಲ್ಲಾಪ ನಡೆಸಿ, 50ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದ್ದಾನೆ. ಹತ್ತಾರು ಯುವತಿಯರು ಪ್ರೇಮ ನಿವೇದನೆ ಮಾಡಿದ್ದು, ಪ್ರೇಮ ಉಡುಗೊರೆಯನ್ನು ಪಡೆದಿದ್ದಾನೆ. ಅಲ್ಲದೇ, ಸಮಾಜ ಸೇವೆಗೆಂದು 4 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ. ಕೆಲವರು ನೇರ ಸಂಪರ್ಕಕ್ಕೆ ಪ್ರಯತ್ನಿಸಿ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾರೆ. ಇನ್ನೂ ಕೆಲವರು ತಹಸೀಲ್ದಾರ್ ಹಾಗೂ ವಕೀಲರ ಮೂಲಕವೂ ಪ್ರಯತ್ನಿಸಿದಾಗ ನಕಲಿ ಖಾತೆ ಎಂದು ಗೊತ್ತಾಗಿದೆ.

    ಅಲ್ಲದೇ ಆರೋಪಿಯು, ಇದೇ ರೀತಿ 9 ನಕಲಿ ಇನಸ್ಟಾಗ್ರಾಂ ಖಾತೆ ತೆರೆದು ವಂಚಿಸುತ್ತಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಚ್.ಎಲ್.ಧರ್ಮಟ್ಟಿ, ಎಎಸ್‌ಐ ಎ.ಎಚ್.ಭಜಂತ್ರಿ, ಕೆ ಆರ್.ಇಮಾಮನವರ, ಜಿ.ಎಸ್.ಲಮಾಣಿ, ಎಸ್.ಐ ಭಂಡಿ, ಎನ್.ಆರ್.ಘಡೆಪ್ಪನವರ, ಈರಣ್ಣ ನಡುವಿನಹಳ್ಳಿ ಇದ್ದರು.

    ಬೆಳಕಿಗೆ ಬಂದಿದ್ದು ಹೇಗೆ?
    ತಾನಾಯ್ತು ತನ್ನ ಕೆಲಸವಾಯ್ತು ಎಂದಿದ್ದ ಅಸಲಿ ಪಿಎಸ್‌ಐ ಅನಿಲ್​ ಕುಮಾರ್ ಅವರು ಕರ್ತವ್ಯದಲ್ಲಿದ್ದ ಸಮಯದಲ್ಲಿ ಓರ್ವ ವ್ಯಕ್ತಿ ಅವರನ್ನು ಭೇಟಿಯಾಗಿ, ನಾನು ನಿಮ್ಮ ಲಕ್ಷಾಂತರ ಫಾಲೋವರ್ಸ್‌ಗಳಲ್ಲಿ ಒಬ್ಬ ಎಂದು ಹೇಳಿದ್ದಾನೆ. ಅಲ್ಲದೆ, ನೀವು ನನ್ನ ಗುರುತಿಸುತ್ತಿಲ್ಲ. ಆದರೆ, ನಿಮ್ಮ ಸೇವಾಕಾರ್ಯವನ್ನು ಲಕ್ಷಾಂತರ ಜನ ಗುರುತಿಸಿ ಹಿಂಬಾಲಕರಾಗಿದ್ದೇವೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಏನೂ ತಿಳಿಯದೇ ಗೊಂದಲಗೊಂಡ ಅನಿಲ್​ ಕುಮಾರ್ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಖಾತೆ ಹುಡುಕಿದಾಗ ನಕಲಿ ಖಾತೆ ಇರುವುದು ತಿಳಿದುಬಂದಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪೊಲೀಸ್ ಠಾಣೆಗೆ ಬಂದಿತ್ತು ಪ್ರೇಮ ಪತ್ರ
    ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ದೂರು, ಆರೋಪ, ಸುಳಿವು ಸೇರಿದಂತೆ ಸದಾ ಅಪರಾಧ ಕೃತ್ಯಗಳ ಕಾಗದ ಪತ್ರಗಳೇ ಹೆಚ್ಚು ಬರುವುದು. ಆದರೆ, ನಿಪ್ಪಾಣಿ ಪೊಲೀಸ್ ಠಾಣೆಗೆ ಮಹಾರಾಷ್ಟ್ರದ ಯುವತಿ ನಕಲಿ ಪಿಎಸ್‌ಐಗೆ ಬರೆದಿದ್ದ ಪ್ರೇಮ ಪತ್ರ ಅಸಲಿ ಅಧಿಕಾರಿ ಕೈಗೆ ತಲುಪಿದ್ದು, ಅದರೊಂದಿಗೆ ಲಗತ್ತಿಸಿದ್ದ ಉಡುಗೊರೆ ಕಂಡು ನಕಲಿ ಖಾತೆಯ ವಂಚನೆಯ ಆಳ ಅರಿತು ತನಿಖೆ ತೀವ್ರಗೊಳಿಸಿ, ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಪೊಲೀಸ್​ ಗಸ್ತು ವಾಹನ ಡಿಕ್ಕಿ: ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ದುರಂತ ಸಾವು

    ಗೊರಕೆ ನಿಲ್ಲಿಸುವ ಟೋಪಿ ಮಾರಾಟದ ನೆಪದಲ್ಲಿ ಗಾಳ: ಚೈನ್‌ಲಿಂಕ್ ವಂಚಕ ಕಂಪನಿಯ ನಾಲ್ವರ ಸೆರೆ

    ಭೂ ಪರಿಹಾರ ನಿಗದಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ: ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಂದ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts