More

    ಬಸವ ವಸತಿ… ಮಂಜೂರಾತಿ ಫಜೀತಿ..

    ಮಂಜುನಾಥ ಅಂಗಡಿ

    ಸರ್ಕಾರ ಮೂರು ವರ್ಷಗಳ ನಂತರ ಬಸವ ವಸತಿ ಯೋಜನೆಯಡಿ ಬಡ ವರ್ಗದ ಜನರಿಗೆ ಸೂರು ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ ಲಕ್ಷಾಂತರ ಜನ ಸೂರುಗಳಿಗಾಗಿ ಕಾದು ಕುಳಿತಿದ್ದು, ಮಂಜೂರಾಗಿರುವುದು ಅಂದಾಜು 4,960 ಮನೆಗಳು ಮಾತ್ರ. ಹೀಗಾಗಿ, ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯಿತಿಯವರಿಗೆ ಪೀಕಲಾಟ ತಂದೊಡ್ಡಿದೆ.

    ಗ್ರಾ.ಪಂ.ಗಳಿಂದ ಅನುಷ್ಠಾನ: ಬಸವ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ವಹಿಸಿದೆ. ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರೂ. ಹಾಗೂ 24,000 ರೂ. ಕೂಲಿ ಹಣ ಸೇರಿ 1.44 ಲಕ್ಷ ರೂ. ಹಾಗೂ ಎಸ್​ಸಿ, ಎಸ್​ಟಿ ಫಲಾನುಭವಿಗಳಿಗೆ 1.50 ಲಕ್ಷ ರೂ. ಮೀಸಲಿರಿಸಲಾಗಿದೆ. ಹೆಚ್ಚುವರಿಯಾಗಿ ಎಲ್ಲ ವರ್ಗದ ಫಲಾನುಭವಿಗಳಿಗೆ ದಿನಕ್ಕೆ 289 ರೂ.ಗಳಂತೆ 90 ದಿನಗಳ ಉದ್ಯೋಗ ಖಾತ್ರಿ ಕೂಲಿ ಮೊತ್ತ 26,010 ರೂ. ಜಮೆಯಾಗಲಿದೆ. ಗ್ರಾ.ಪಂ. ಜನಪ್ರತಿನಿಧಿಗಳು ಗ್ರಾಮಸಭೆಗಳನ್ನು ಜರುಗಿಸಿ ವಾರ್ಡ್​ವಾರು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರ ದಾಖಲೆಗಳನ್ನು ಸಂಗ್ರಹಿಸಿ ಆಯಾ ತಾ.ಪಂ.ಗಳಿಗೆ ಸಲ್ಲಿಸಬೇಕು. ನಂತರ ಜಿ.ಪಂ. ಮೂಲಕ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ತಂತ್ರಾಂಶದಲ್ಲಿ ಫಲಾನುಭವಿಗಳ ವಿವರವನ್ನು ದಾಖಲಿಸಲಾಗುತ್ತದೆ.

    144ರಲ್ಲಿ 96 ಗ್ರಾ.ಪಂ.ಗಳಲ್ಲಿ ಆಯ್ಕೆ: ಜನವರಿ ಮೊದಲ ವಾರದಲ್ಲಿ ಜಿ.ಪಂ.ನಿಂದ ಆದೇಶ ಹೊರಡಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾ.ಪಂ.ಗಳಿಗೆ ಸೂಚಿಸಲಾಗಿತ್ತು. ಜ. 25ರೊಳಗೆ ಅರ್ಹ ಫಲಾನುಭವಿಗಳ ಪಟ್ಟಿ ಹಾಗೂ ಮೀಸಲಾತಿವಾರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಜಿಲ್ಲೆಯ 144 ಗ್ರಾ.ಪಂ.ಗಳ ಪೈಕಿ ಇದುವರೆಗೆ ಕೇವಲ 96 ಗ್ರಾ.ಪಂ.ಗಳು ಗ್ರಾಮಸಭೆ ನಡೆಸಿ ಠರಾವು ಪಾಸು ಮಾಡಿ ಫಲಾನುಭವಿಗಳ ಪಟ್ಟಿ ಸಲ್ಲಿಸಿವೆ. ಹೀಗಾಗಿ, ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ.

    ಗ್ರಾಮಗಳ ಜನಸಂಖ್ಯೆ ಹಾಗೂ ಚುನಾಯಿತ ಗ್ರಾ.ಪಂ. ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವೆಡೆ 30 ಸದಸ್ಯರಿರುವ ಎ ದರ್ಜೆಯ ಗ್ರಾ.ಪಂ.ಗಳಿಗೆ 25 ಮನೆಗಳ ಗುರಿ ನೀಡಲಾಗಿದೆ. ಇದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಸಣ್ಣ ಪಂಚಾಯಿತಿಗಳಿಗೆ ಹೆಚ್ಚು ಮನೆಗಳ ಗುರಿ ಮೀಸಲಿಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

    ಮೊತ್ತ ಪರಿಷ್ಕರಣೆ ನನೆಗುದಿಗೆ

    2020ರ ನಂತರ ಎರಡು ಬಾರಿ ಲಾಕ್​ಡೌನ್ ಜಾರಿಗೊಳಿಸಿದ್ದರಿಂದ ಮನೆ ನಿರ್ಮಾಣ ಸಾಮಗ್ರಿಗಳ ದರ ದುಪ್ಪಟ್ಟಾಗಿದೆ. ಕಬ್ಬಿಣ, ಮರಳು, ಸಿಮೆಂಟ್, ಇತರ ಸಾಮಗ್ರಿಗಳ ದರ ಏರಿಕೆಯಾಗಿದೆ. ಆದರೆ, ವಸತಿ ಯೋಜನೆಗಳ ಅಡಿ ಫಲಾನುಭವಿಗಳಿಗೆ ನೀಡಲಾಗುವ ಮೊತ್ತದಲ್ಲಿ ಏರಿಕೆಯಾಗಿಲ್ಲ. ಈ ಬಗ್ಗೆ ಗ್ರಾ.ಪಂ. ಸದಸ್ಯರ ಒಕ್ಕೂಟದಿಂದ ಹಲವು ಬಾರಿ ರಾಜ್ಯಾದ್ಯಂತ ಬೇಡಿಕೆ ವ್ಯಕ್ತವಾದರೂ ಪ್ರಯೋಜನವಾಗಿಲ್ಲ. ಸದ್ಯ ಅನುಷ್ಠಾನಗೊಳ್ಳುತ್ತಿರುವ ಬಸವ ವಸತಿ ಯೋಜನೆಯ ಮನೆಗಳ ನಿರ್ಮಾಣ ವೆಚ್ಚವನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು ಎಂಬುದು ಫಲಾನುಭವಿಗಳ ಒತ್ತಾಸೆ.

    ಕೋವಿಡ್ ಇತರ ಕಾರಣಗಳಿಂದ ಕೆಲವೆಡೆ ಗ್ರಾಮಸಭೆಗಳನ್ನು ಜರುಗಿಸುವಲ್ಲಿ ಹಿನ್ನಡೆಯಾಗಿದೆ. ಜ. 31ರೊಳಗೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಗಡುವು ನೀಡಲಾಗಿದೆ. ಯೋಜನಾ ಮೊತ್ತದ ಪರಿಷ್ಕರಣೆ ಸರ್ಕಾರದ ಮಟ್ಟದಲ್ಲಿ ತೀರ್ವನವಾಗಬೇಕು.

    | ದೀಪಕ ಮಡಿವಾಳರ, ಜಿ.ಪಂ. ಮುಖ್ಯ ಯೋಜನಾಧಿಕಾರಿ

    ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿ ಮನೆಗಳ ನಿರ್ವಣಕ್ಕೆ ಮುಂದಾಗಿದೆ. ಆದರೆ, ಸಂಖ್ಯೆ ತೀರ ಕಡಿಮೆ. ಪ್ರತಿ ಗ್ರಾ.ಪಂ.ಗೆ ಕನಿಷ್ಠ 200 ಮನೆಗಳ ಗುರಿ ನಿಗದಿಪಡಿಸಬೇಕು. ಈ ದುಬಾರಿ ಕಾಲದಲ್ಲಿ ನಿರ್ಮಾಣ ವೆಚ್ಚವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಈ ಬಗ್ಗೆ ಜಿ.ಪಂ. ಸಿಇಒ ಮೂಲಕ ವಸತಿ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸಚಿವರು ಈ ಬಗ್ಗೆ ಸ್ಪಂದಿಸಿಲ್ಲ.

    | ಭೀಮಪ್ಪ ಕಾಸಾಯಿ, ತಡಕೋಡ ಗ್ರಾ.ಪಂ. ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts