More

    ಮಳೆ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ದುರ್ದೈವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಮೈಸೂರು: ವಿರೋಧ ಪಕ್ಷಗಳು ಮಳೆ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ದುರ್ದೈವವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಮಳೆ ತಂದಿರುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಯುದ್ಧೋಪಾದಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕೆರೆಗಳೂ ತುಂಬಿದ್ದು, ದಾಖಲೆಯ ಮಳೆಯಾಗಿದೆ. ಈ ವೇಳೆ ವಿರೋಧ ಪಕ್ಷಗಳು ಸರ್ಕಾರದ ಜೊತೆ ಕೈ ಜೋಡಿಸಿ ಪರಿಹಾರ ಕಾರ್ಯಗಳಿಗೆ ಮುಂದಾಗಬೇಕಿತ್ತು. ಅದು ಬಿಟ್ಟು ಎಲ್ಲದಕ್ಕೂ ಸರ್ಕಾರ ಕಾರಣ ಎಂಬಂತೆ ಆರೋಪಿಸುತ್ತಿರುವುದು ಸರಿಯಲ್ಲ ಎಂದರು.


    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ರಾಜಕಾಲುವೆ, ಕೆರೆಗಳ ಒತ್ತುವರಿ ಪರಿಣಾಮ ಬೆಂಗಳೂರಿನಲ್ಲಿ ಇಂದು ಇಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೂ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಬೆಂಗಳೂರಿನಲ್ಲಿ 90 ವರ್ಷ ಆಗದಿರುವ ಮಳೆಯಾಗಿದೆ. ಇಡೀ ಬೆಂಗಳೂರು ಮುಳುಗಿಲ್ಲ. ಆ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ 8 ವಲಯಗಳಿವೆ. ಅವುಗಳಲ್ಲಿ 2 ವಲಯಗಳಲ್ಲಿ ತೊಂದರೆಯಾಗಿದೆ. ಅದರಲ್ಲಿ ಬೊಮ್ಮನಹಳ್ಳಿ ವಲಯ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತೊಂದು ವಲಯದಲ್ಲಿ 69 ಕೆರೆಗಳಿದ್ದು, ಅವುಗಳೆಲ್ಲವೂ ತುಂಬಿ, ನಿರಂತರವಾಗಿ ಮಳೆಯಾಗಿ ನೀರು ಹರಿಯುತ್ತಿದೆ. ಅನಿರೀಕ್ಷಿತ ಮಳೆಯಾಗಿದ್ದು, ಯಾವ ಚರಂಡಿಯನ್ನೂ ಈ ರೀತಿಯ ಮಳೆಗೆ ವಿನ್ಯಾಸಗೊಳಿಸಿರಲಿಲ್ಲ. ಮಹದೇವಪುರದಲ್ಲಿ ಒತ್ತುವರಿಯಾಗಿದೆ ಎಂದರು.


    ಅನಿರೀಕ್ಷಿತ ಮಳೆಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯಾಗಿದೆ. ರಾಜಕಾಲುವೆಗಳನ್ನು, ಚರಂಡಿಗಳನ್ನು ಮುಚ್ಚಲಾಗಿದೆ. ಆದ್ದರಿಂದ ನೀರು ಬಡಾವಣೆಗಳು, ಐಟಿಪಾರ್ಕ್‌ಗಳ ಮುಂದೆ ಬಂದು ನಿಂತಿದೆ. ನಮ್ಮ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೀರು ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದ್ದು, ಸವಾಲಿನ ಕೆಲಸವಾಗಿದೆ ಎಂದರು. ಎರಡು ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ಬಿಬಿಎಂಪಿ. ಜಲಮಂಡಳಿ, ಬಿಡಿಎ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಳೆ ಸಂಜೆಯೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಮಳೆ ನಿರ್ವಹಣೆ ಹಾಗೂ ಮೂಲಸೌಲಭ್ಯಗಳ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts