More

    ಮರಳಿ ಹಳಿಯತ್ತ ಸಾರಿಗೆ ವ್ಯವಸ್ಥೆ, ಹೆಚ್ಚಿನ ಬಸ್‌ಗಳು ಬೆಂಗಳೂರಿಗೆ

    – ಮಂಗಳೂರು/ಉಡುಪಿ/ಪುತ್ತೂರು
    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಬೆಂಗಳೂರಿಗೆ ಅತ್ಯಧಿಕ ಬಸ್‌ಗಳು ಮಂಗಳವಾರ ಸಂಚರಿಸಿದ್ದು, ಬುಧವಾರವೂ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಆದರೆ ಸ್ಥಳೀಯ ಸೇವೆಗೆ ಕೆಎಸ್‌ಆರ್‌ಟಿಸಿಯೂ ಒಲವು ತೋರಿಸುತ್ತಿಲ್ಲ, ಪ್ರಯಾಣಿಕರೂ ಅಷ್ಟಾಗಿ ಬಸ್‌ಗಳನ್ನು ಏರುತ್ತಿಲ್ಲ.

    ಮಂಗಳೂರು ವಿಭಾಗದಿಂದ (ಉಡುಪಿ, ಕುಂದಾಪುರ ಸಹಿತ) 41, ಪುತ್ತೂರು ವಿಭಾಗದಿಂದ (ಪುತ್ತೂರು, ಬಿ.ಸಿ.ರೋಡ್, ಸುಳ್ಯ, ಧರ್ಮಸ್ಥಳ ಡಿಪೋ) 50ರಷ್ಟು ಬಸ್‌ಗಳು ಮಂಗಳವಾರ ರಸ್ತೆಗಿಳಿದಿವೆ.
    ಮಂಗಳೂರಿನಿಂದ ಬೆಂಗಳೂರಿಗೆ ಒಟ್ಟು 7, ಹುಬ್ಬಳ್ಳಿಗೆ 3, ಮೈಸೂರು, ಶಿವಮೊಗ್ಗಕ್ಕೆ ತಲಾ ಒಂದು ಬಸ್ ಸಂಚರಿಸಿದೆ. ಉಡುಪಿ, ಕುಂದಾಪುರ ಡಿಪೋದಿಂದ ಒಟ್ಟು 27 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಉಡುಪಿಯಿಂದ ಬೆಂಗಳೂರಿಗೆ 6, ಶಿವಮೊಗ್ಗ ಮತ್ತು ಹುಬ್ಬಳ್ಳಿಗೆ ತಲಾ 2, ಮೈಸೂರಿಗೆ 1 ತೆರಳಿವೆ. ಕುಂದಾಪುರದಿಂದ ಬೆಂಗಳೂರಿಗೆ 8, ಹುಬ್ಬಳ್ಳಿಗೆ 1 ಬಸ್ ಹೋಗಿದೆ. ಪುತ್ತೂರಿನಿಂದ ಬೆಂಗಳೂರಿಗೆ 7 ಬಸ್‌ಗಳು ಪ್ರಯಾಣ ಬೆಳೆಸಿದ್ದು, ಬುಧವಾರ 3 ಹೆಚ್ಚುವರಿ ಬಸ್‌ಗಳು ತೆರಳಲಿವೆ.

    ಸ್ಥಳೀಯ ಸೇವೆಗೆ ಹಿಂದೇಟು?: ಪುತ್ತೂರು ವಿಭಾಗದಿಂದ ಗ್ರಾಮಾಂತರ ಸೇವೆ ಮಂಗಳವಾರ ಚಾಲನೆ ಪಡೆದಿದೆ. ಪುತ್ತೂರಿನಿಂದ ಸುಳ್ಯ 2, ಧರ್ಮಸ್ಥಳದಿಂದ ಮಂಗಳೂರಿಗೆ 1, ಪುತ್ತೂರಿನಿಂದ ಮಂಗಳೂರಿಗೆ 6 ಸಹಿತ ಸ್ಥಳೀಯ ಮಾರ್ಗಗಳಲ್ಲೂ ಬಸ್‌ಗಳು ಸಂಚಾರ ನಡೆಸಿವೆ. ಆದರೆ ಹೆಚ್ಚಿನ ರೂಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಶೇ.20ರಷ್ಟೂ ಆದಾಯ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳೂರು ವಿಭಾಗದ ಅಡಿಯಲ್ಲಿ ಬರುವ ಉಡುಪಿ ಜಿಲ್ಲೆಯಲ್ಲಿ ಅಂತರ್‌ಜಿಲ್ಲಾ ಮತ್ತು ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭಗೊಂಡಿದೆ. ಕಾರ್ಕಳ 2, ಹೆಬ್ರಿ 1, ಕುಂದಾಪುರಕ್ಕೆ 1 ಬಸ್ ಸಂಚಾರ ನಡೆಸಿದೆ. ಆದರೆ ಮಂಗಳೂರು ವಿಭಾಗದಿಂದ ಗ್ರಾಮಾಂತರಕ್ಕೆ ಸೇವೆ ಲಭಿಸಿಲ್ಲ. ಮಂಗಳವಾರ ಉಪ್ಪಿನಂಗಡಿ ಮತ್ತು ಧರ್ಮಸ್ಥಳಕ್ಕೆ ತಲಾ ಒಂದು ಬಸ್ ಮಾತ್ರ ಬಿಡಲಾಗಿತ್ತು.

    ಮಂಗಳೂರಿನಲ್ಲಿ ನರ್ಮ್ ಬಸ್ ಸಂಚಾರ: ಸಚಿವ ಕೋಟ ಸೂಚನೆ
    ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳ ಸಂಚಾರವನ್ನು ಮಂಗಳೂರು ನಗರದಲ್ಲಿ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚಿಸಿದರು.
    ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದ ಅವರು, 42 ನರ್ಮ್ ಬಸ್‌ಗಳು ಕಾರ್ಯಾಚರಣೆ ಪ್ರಾರಂಭಿಸಲಿ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಮೊದಲು ಒಂದೊಂದಾಗಿ ಕಾರ್ಯಾಚರಿಸಲಿ ಎಂದು ತಿಳಿಸಿದರು.
    ಶಾಸಕ ಡಾ.ಭರತ್ ವೈ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ, ಎಸ್‌ಪಿ ಲಕ್ಷ್ಮೀಪ್ರಸಾದ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗಡೆ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

    ಖಾಸಗಿ ಬಸ್ ಜೂನ್ 1ಕ್ಕೆ?
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾರಂಭದ ಕುರಿತು ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜತೆಗಿನ ಸಭೆಯಲ್ಲಿ ಯಾವುದೇ ನಿರ್ಧಾರ ಆಗಿಲ್ಲ. ರಸ್ತೆ ತೆರಿಗೆ ರದ್ಧತಿ, ವಿನಾಯಿತಿ ಹಾಗೂ ಬಾಕಿ ಇರುವ ಬಸ್ ಪ್ರಯಾಣದರ ಪರಿಷ್ಕರಣೆ ಕುರಿತ ಬಸ್ ಮಾಲೀಕರ ಬೇಡಿಕೆಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುವುದಾಗಿ ಮಾಲೀಕರಿಗೆ ಆರ್‌ಟಿಒ ತಿಳಿಸಿದ್ದಾರೆ.

    ಖಾಸಗಿ ಬಸ್‌ನವರು ಪರ್ಮಿಟ್‌ಗಳನ್ನು ಸಾರಿಗೆ ಇಲಾಖೆಗೆ ಸರೆಂಡರ್ ಮಾಡಿದ್ದು, ಇದು ಈ ತಿಂಗಳ ಅಂತ್ಯದವರೆಗೂ ಅನ್ವಯವಾಗಿರುತ್ತದೆ. ಈಗಲೇ ಬಸ್ ಸೇವೆ ಶುರು ಮಾಡಬೇಕಾದರೆ ಮೇ ತಿಂಗಳ ಪ್ರಾರಂಭದಿಂದಲೇ ಅನ್ವಯವಾಗುವಂತೆ ರಸ್ತೆ ತೆರಿಗೆ ಪಾವತಿಸಬೇಕು. ಈ ನಷ್ಟ ಭರಿಸಲು ಬಸ್ ಮಾಲೀಕರು ಸಿದ್ಧರಿಲ್ಲ. ಜಿಲ್ಲಾಧಿಕಾರಿಯವರ ಸಮಾಲೋಚನೆ ಹೊರತಾಗಿಯೂ ಜೂನ್ 1ರವರೆಗೂ ಪ್ರಾರಂಭಗೊಳ್ಳುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.

    ನಿಯಮ ಪಾಲನೆ: ಬಸ್ ಏರುವ ಮೊದಲು ಪ್ರಯಾಣಿಕರ ಥರ್ಮಲ್ ಸ್ಕಾೃನಿಂಗ್ ನಡೆಸಿ, ಸ್ಯಾನಿಟೈಸರ್ ಒದಗಿಸಲಾಯಿತು. ಕೆಲವು ಕಡೆ ಪ್ರಯಾಣಿಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ. ಒಂದು ಸೀಟ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿತ್ತು. ರಾಜಹಂಸ ಬಸ್‌ನಲ್ಲಿ 20 ಮತ್ತು ಸಾಮಾನ್ಯ ಸಾರಿಗೆಯಲ್ಲಿ 30 ಮಂದಿ ಪ್ರಯಾಣಿಸಲು ಅವಕಾಶವಿತ್ತು. ಎಲ್ಲರಿಗೂ ಮಾಸ್ಕ್ ಕಡ್ಡಾಯವಾಗಿತ್ತು. ದೂರದ ಊರುಗಳಿಗೆ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಬೇಕಿದ್ದು, ಮಧ್ಯದಲ್ಲಿ ಇಳಿಯಲು ಅವಕಾಶ ನೀಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts