More

    ಬಾಳೆ ಕೃಷಿ, ಮಣ್ಣು ಪಾಲಾಯ್ತು ರೈತರ ಖುಷಿ

    ಬೆಳಗಾವಿ: ಕರೊನಾ ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಬೆಳೆದ ಬಾಳೆಹಣ್ಣು ಮಾರಾಟವಾಗದೆ ಕೊಳೆತು ನಾರುತ್ತಿದೆ. ಲಾಭದ ಆಸೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಕೃಷಿ ಮಾಡಿದ್ದ ರೈತರಿಗೆ ಸದ್ಯ ಕಹಿ ಅನುಭವವಾಗುತ್ತಿದೆ.

    ಜಿಲ್ಲೆಯಲ್ಲಿ 1,020 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ವಾರ್ಷಿಕ 82,707 ಟನ್ ಬಾಳೆ ಉತ್ಪಾದನೆ ಆಗುತ್ತಿದೆ. ಆದರೆ, ಲಾಕ್‌ಡೌನ್ ಸೇರಿ ಇನ್ನಿತರ ಸಮಸ್ಯೆಗಳಿಂದ ಬಾಳೆ ಮಾರಾಟವಾಗದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಕೆಲವು ಕಡೆ ರೈತರು ಗ್ರಾಮಗಳಿಗೆ ತೆರಳಿ ತಾವು ಬೆಳೆದ ಬಾಳೆಯನ್ನು ಕೆ.ಜಿ.ಗೆ 15 ರಿಂದ 18 ರೂ. ವರೆಗೆ ಮಾರಾಟ ಮಾಡುತ್ತಿದ್ದಾರೆ. ರಾಯಬಾಗ, ಗೋಕಾಕ, ಅಥಣಿ, ರಾಮದುರ್ಗ ತಾಲೂಕುಗಳಲ್ಲಿ ಎಕರೆಗೆ 30 ರಿಂದ 35 ಟನ್‌ವರೆಗೆ ಬಾಳೆ ಬೆಳೆಯಲಾಗುತ್ತಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಬೆಳೆಗಾರರು ಮಾರುಕಟ್ಟೆಗೆ ಉತ್ಪನ್ನ ಸಾಗಣೆ ಮಾಡಲಾಗದೆ ಸಂಕಷ್ಟ ಪಡುತ್ತಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಡಜನ್‌ಗೆ 4 ರಿಂದ 6 ರೂ.ಗೆ ವ್ಯಾಪಾರಿಗಳು ಕೇಳುತ್ತಿದ್ದಾರೆ. ಅಷ್ಟು ಮೊತ್ತಕ್ಕೆ ಕೊಟ್ಟರೆ ನಮಗೆ ವ್ಯಯಿಸಿದ ಖರ್ಚು ಸಹ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಾಳೆ ಬೆಳೆಗಾರರು.

    ಸ್ಪಂದಿಸದ ಅಧಿಕಾರಿಗಳು: ಈಗಾಗಲೇ ಸೂಕ್ತ ಮಾರುಕಟ್ಟೆ, ಸಾರಿಗೆ ಸೌಲಭ್ಯ ಕಲ್ಪಿಸುವಂತೆ ತೋಟಗಾರಿಕೆ ಇಲಾಖೆ, ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ವಿನಂತಿಸಿದರೂ ಯಾರೂ ಸ್ಪಂದಿಸುತ್ತಿಲ್ಲ. ಸಾಗಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ನಮಗೆ ಲಾಭ ಸಿಗಬಹುದು. ಹೀಗಾಗಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.

    ಲಾಕ್‌ಡೌನ್‌ನಿಂದಾಗಿ 8 ಎಕರೆ ಬಾಳೆ ಪ್ರದೇಶದಲ್ಲಿ ಬೆಳೆದಿರುವ ಸುಮಾರು 25 ಲಕ್ಷ ರೂ. ಮೌಲ್ಯದ 230 ಟನ್ ಬಾಳೆ ಸಾಗಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಟ್ವೀಟರ್ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಬಾಳೆ ಮಾರಾಟಮಾಡಲಾಗದೆ ಕೊಳೆಯುತ್ತಿದೆ.
    | ಸಂತೋಷ ಪಾಟೀಲ ಇಟ್ನಾಳ ಗ್ರಾಮ, ರಾಯಬಾಗ ತಾಲೂಕು

    ಲಾಕ್‌ಡೌನ್ ವೇಳೆ ಬಾಳೆ ಬೆಳೆಗಾರರಿಗೆ ಸಮಸ್ಯೆಯಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಸಹಾಯವಾಣಿ ಸೇರಿ ಇನ್ನಿತರ ಸೌಲಭ್ಯಗಳನ್ನು ತಾಲೂಕುಮಟ್ಟದಲ್ಲಿ ಕಲ್ಪಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿಗೆ ಭಾರಿ ಬೇಡಿಕೆ ಇದೆ. ರೈತರಿಗೆ ಆಗುತ್ತಿರುವ ಸಮಸ್ಯೆಯ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಡಾ.ಕೆ.ವಿ.ರಾಜೇಂದ್ರ ಜಿಪಂ ಸಿಇಒ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts