ಬಾಗಲಕೋಟೆ: ಅಸಂಖ್ಯೆ ಭಕ್ತ ಸಾಗರವನ್ನು ಹೊಂದಿರುವ ಆಂಧ್ರಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ಹಿಂದೂ ಕ್ಯಾಲೆಂಡರಾ ಅನುಸಾರ ಹೊಸ ವರ್ಷ ಆಚರಿಸುವ ಯುಗಾದಿ ಹಬ್ಬದಂದು ಶಿವನ ಮಹಾಕ್ಷೇತ್ರ ಶ್ರೀಶೈಲ ಜಾತ್ರೆಗೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಭಕ್ತಿಯ ಹೆಜ್ಜೆ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತ ಸಮೂಹ ಮಲ್ಲಯ್ಯನ ದರುಶನಕ್ಕೆ ಬಾಗಲಕೋಟೆ ಮುಖಾಂತರ ಹಾಯ್ದು ಹೋಗುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ಭೀತಿಗೆ ಹಿಂದೇಟ ಹಾಕದೆ ಶ್ರೀಶೈಲ ಮಲ್ಲಿಕಾರ್ಜುನ ಕಾಣಲು ಹೊರಟಿದ್ದು ಅಚ್ಚರಿ ಮೂಡಿಸಿತು. ಕೆಲವರು ಮರಗಾಲಕಟ್ಟಿಕೊಂಡು ಹೊರಟಿದ್ದು ಗಮನ ಸೆಳೆಯಿತು.
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜಾತಿ, ಧರ್ಮದ ಬೇಧಭಾವ ಇಲ್ಲದೇ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ. ಮಹಾಶಿವರಾತ್ರಿ ಮುಗಿದ ನಂತರ ಹೋಳಿ ಹುಣ್ಣಿಮೆ ಎರಡು ದಿನ ಬಾಕಿ ಇರುವಾಗ ಪಾದಯಾತ್ರೆ ಆರಂಭಿಸಿ ಯುಗಾದಿ ಒಂದು ದಿನ ಭಾಕಿ ಇರುವಾಗಲೆ ಶ್ರೀಶೈಲ ತಲುಪುತ್ತಾರೆ. ಯುಗಾದಿ ಅಮವಾಸ್ಯೆ ಹಾಗೂ ಪಾಡ್ಯದಂದು ಜರುಗುವ ಜಾತ್ರೆ ಸಡಗರಕ್ಕೆ ಸಾಕ್ಷಿಯಾಗುತ್ತಾರೆ.
ನಾವು ಹೊಂಟೇವ ಶ್ರೀಶೈಲ ನೋಡಲಾಕ.
ನಾವು ಹೊಂಟೇವ ಶ್ರೀಶೈಲ ನೋಡಲಾಕ.. ಸ್ವಾಮಿ ಮಲಯ್ಯನ ದರುಶನ ಮಾಡೋದಕ…ಗೀಯ ಗಾ… ಗಾಗೀಯ ಗಾ.. ಎಂದು ಉರಿವ ಬಿಸಿಲು ಲೆಕ್ಕಿಸದೇ ಗೀಗಿಪದ ಹಾಡುತ್ತ, ಶಿವ ಸ್ಮರಣೆ ಧ್ಯಾನಿಸುತ್ತಾ ಪಾದಯಾತ್ರೆ ಹೊರಟಿರುತ್ತಾರೆ. ಅಲ್ಲದೆ ಮರಗಾಲು ಕಟ್ಟಿಕೊಂಡು, ದಿರ್ಘ ದಂಡ ನಮಸ್ಕಾರ ಹಾಕುತ್ತ, ತೇರು ಎಳೆಯುತ್ತಾ, ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವ ದೃಶ್ಯ ಭಕ್ತಿಯ ಭಾವನೆ ಹರಿಸುವಂತೆ ಮಾಡುತ್ತದೆ.
ಪಾದ ಯಾತ್ರಿಗಳಿಗೆ ವಿವಿಧ ಸೇವೆ..
ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಅಸಂಖ್ಯಾತ ಭಕ್ತರು ಪಾದಾಯತ್ರೆ ಮೂಲಕ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದ ವಲ್ಲಭಾಯಿ ಚೌಕ, ಮುಚಖಂಡಿ ಕ್ರಾಸ್, ಚರಂತಿಮಠ, ಟೀಕಿನಮಠ ಮತ್ತು ನಗರದ ಆಸುಪಾಸಿನಲ್ಲಿರುವ ಕೃಷಿಕರು ತೋಟದ ಮನೆಯಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ವಿವಿಧ ಬಗೆಯ ಹಣ್ಣು ಹಂಪಲು, ಎಳನೀರು, ಪಾನಕ, ಮಜ್ಜಿಗೆ, ಗಂಜಿ ನೀಡಿ ಸೇವೆ ಮಾಡಲಾಗುತ್ತಿದೆ. ಅಲ್ಲದೆ ನೋವು ನಿವಾರಣೆಯ ಔಷೋಧಪಚಾರ ಒದಗಿಸಲಾಗುತಿದೆ. ಇನ್ನೂ ಕೆಲವೆಡೆ ಪಾದಯಾತ್ರಿಗಳ ಅಂಗಗಳಿಗೆ ಒತ್ತಿ ಮಸಾಜ್ ಮೂಲಕ ನಗರದ ಸೇವಾಕರ್ತರು ಯಾತ್ರಿಗಳ ಸಹಾಯ ಮಾಡುತ್ತಿದ್ದಾರೆ. ಇನ್ನು ನಗರದ ಮುಚಖಂಡಿ ಕ್ರಾಸ್ ಬಳಿ ಮುಸ್ಲಿಂ ಬಾಂಧವರು ಪಾದಯಾತ್ರಿಗಳಿಗೆ ಮಜ್ಜಿಗೆ, ಜ್ಯೂಸ್, ನೀರು ನೀಡಿ ಭಾವಕ್ಯತೆ ಮೆರೆದರು.