More

    ಮತದಾನ ಹೆಚ್ಚಳಕ್ಕೆ ಎಲ್ಲರೂ ಪಣತೊಡಿ

    ದಾವಣಗೆರೆ: ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಮತದಾನ ಮಾಡುವ ಗುರಿ ಹೊಂದಲು ಎಲ್ಲರೂ ಪಣತೊಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

    ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಕ್ಕು ಚಲಾವಣೆ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಹೆಚ್ಚಾಗುತ್ತಿದ್ದು, ನಗರದಲ್ಲಿ ಮಾತ್ರ ಕಡಿಮೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ನಗರದ 2 ಕ್ಷೇತ್ರಗಳಲ್ಲಿ ಶೇ.65ರಷ್ಟು ಮತದಾನ ಆಗಿದ್ದರೆ, ಹಳ್ಳಿಗಳಲ್ಲಿ ಶೇ.75ಕ್ಕಿಂತ ಹೆಚ್ಚು ಮತದಾನ ಆಗಿದೆ ಎಂದು ತಿಳಿಸಿದರು.

    ಪ್ರಜಾಪ್ರಭುತ್ವದಲ್ಲಿ ವಿಚಾರವಂತರು, ವಿದ್ಯಾವಂತರು ಹೆಚ್ಚಾಗಬೇಕು. ಇವರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರೆ ಬಲವರ್ಧನೆ ಕಷ್ಟ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

    ಆಕರ್ಷಣೆಗೆ ಸಖಿ ಮತಗಟ್ಟೆ: ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರೇ ಅದರ ಸಂಪೂರ್ಣ ನಿರ್ವಹಣೆ ಮಾಡಲಿದ್ದು, 7 ಬೂತ್‌ಗಳಲ್ಲಿ ಅಂಗವಿಕಲರು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

    ಪೊಲೀಸರಿಗೆ ಡಬಲ್ ಆಫರ್: ಈ ಬಾರಿಯ ಕರ್ತವ್ಯ ನಿರತ ಪೊಲೀಸರಿಗೆ ಎರಡು ರೀತಿ ಮತದಾನ ಮಾಡಲು ಅವಕಾಶವಿದೆ. ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿಯೇ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ತೋರಿಸಿ ಮತದಾನ ಮಾಡಬಹುದು. ಹೊರಗಿನವರಾದರೆ, ಅದರ ಮಾಹಿತಿಯನ್ನು ಪೋಸ್ಟಲ್ನಲ್ಲಿ ನೀಡಿ, ದಾವಣಗೆರೆಯಲ್ಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದರು.

    ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಪೊಲೀಸರ ವರ್ಗಾವಣೆ ಮತ್ತು ಇತರೆ ಕಾರಣಗಳಿಂದ ಮತದಾನ ಮಾಡಲು ಸಾಧ್ಯವಾಗದಿರಬಹುದು. ಆದ್ದರಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮತಗಟ್ಟೆಯಲ್ಲೇ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
    ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ನೀರು, ಶೌಚಗೃಹ, ಶಾಮಿಯಾನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್, ಎಂ. ಸಂತೋಷ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಪಾಲಿಕೆ ಆಯುಕ್ತೆ ರೇಣುಕಾ, ಬಿಸಿಎಂ ಅಧಿಕಾರಿ ಗಾಯತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts