More

    ಜನಸಾಮಾನ್ಯರ ಕಣ್ಣಿಗೆ ಆಟೋ ಡ್ರೈವರ್; ಆದರೆ ನಿಜಕ್ಕೂ ಆತ ಡ್ರಗ್ ಪೆಡ್ಲರ್!

    ಬೆಂಗಳೂರು: ಈಗ ಎಲ್ಲೆಲ್ಲೂ ಡ್ರಗ್ಸ್ ಜಾಲದ್ದೇ ಸುದ್ದಿ. ಮುಂಬೈ-ದಿಲ್ಲಿಯಲ್ಲೂ ಅದೇ. ಮಂಗಳೂರು-ಬೆಂಗಳೂರಿನಲ್ಲೂ ಅದೇ. ಇಷ್ಟು ವರ್ಷ ಇವರನ್ನೆಲ್ಲ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಇದ್ದ ಪೊಲೀಸರು ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು-ಸಾಮಾನ್ಯರು ಎಂಬುದನ್ನೂ ನೋಡದೆ ಮುಲಾಜಿಲ್ಲದೆ ಬಂಧಿಸಿ ಜೈಲಿಗೆ ಅಟ್ಟುತ್ತಿದ್ದಾರೆ. ಮಂಗಳವಾರವೂ ಬೆಂಗಳೂರಿನ ಪೂರ್ವ ಮತ್ತು ಉತ್ತರ ವಿಭಾಗ ಪೊಲೀಸರು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ವ್ಯಕ್ತಿ ಸೇರಿ 9 ದಂಧೆಕೋರರನ್ನು ಬಂಧಿಸಿ, ಒಟ್ಟು 17 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

    ಸುಡಾನ್ ಮೂಲದ ಒಮರ್ ಅಹಮದ್ (27), ಕೊತ್ತನೂರಿನ ತಾಬ್‌ಶೀರ್ (24), ಲಝೀಮ್ ನಾಸೀರ್ (23), ಕೆ.ಜಿ.ಹಳ್ಳಿಯ ಸೈಯದ್ ಶಕೀರ್ (24), ಆರ್.ಟಿ.ನಗರದ ಮೊಹಮ್ಮದ್ ಶಹೀಮ್ (28), ಆಂಧ್ರಪ್ರದೇಶದ ಸುರೇಂದ್ರ ಅಲಿಯಾಸ್ ಸೂರ್ಯ (21), ಭೀಮಣ್ಣ (28), ನನ್ನಾರಾವ್ (24) ಮತ್ತು ಭೂಪಸಂದ್ರದ ಶಬ್ಬೀರ್ ಖಾನ್ (34) ಬಂಧಿತರು. ಆರೋಪಿಗಳ ವಿರುದ್ಧ ಹೆಣ್ಣೂರು, ಸಂಜಯನಗರ ಮತ್ತು ಸೋಲದೇವನಹಳ್ಳಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹೊರರಾಜ್ಯಗಳಿಂದ ಗಾಂಜಾ ತಂದು ಮನೆಗಳಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದ ಒಮರ್ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾನೆ. ಪಾಲಕರಿಂದ ದೂರ ಇದ್ದ ನೆಪದಲ್ಲಿ ಮಾದಕ ವ್ಯಸನಕ್ಕೆ ದಾಸನಾಗಿದ್ದ. ಐಷಾರಾಮಿ ಜೀವನಕ್ಕೆ ಹಣಕಾಸಿನ ತೊಂದರೆಯಾಗಿದ್ದು, ತನಗೆ ಪರಿಚಯವಿದ್ದ ಆಫ್ರಿಕನ್ ದೇಶದ ಯುವಕರಿಂದ ಡ್ರಗ್ಸ್ ಖರೀದಿಸಿ ಮಾರಾಟದಲ್ಲಿ ತೊಡಗಿದ್ದ. ವಿದ್ಯಾಭ್ಯಾಸಕ್ಕೆಂದು ಬಂದ ಆರಂಭದಲ್ಲಿ ಬಾಡಿಗೆ ಮನೆಯಲ್ಲಿದ್ದ ಒಮರ್ ಡ್ರಗ್ಸ್ ದಂಧೆಯಲ್ಲಿ ತೊಡಗಿದ ಬಳಿಕ ಕಲ್ಯಾಣನಗರದ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸಿಸಲಾರಂಭಿಸಿದ್ದ. ಕಾಲೇಜು ಸಹಪಾಠಿಗಳನ್ನೇ ದಂಧೆಗೆ ಕರೆತಂದಿದ್ದ. ಡ್ರಗ್ಸ್ ವ್ಯಸನಿಗಳು ಈತನ ಫ್ಲ್ಯಾಟ್‌ಗೆ ಬಂದು ಖರೀದಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಬಾಣಸವಾಡಿ ಉಪವಿಭಾಗದ ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಹೆಣ್ಣೂರು ಪೊಲೀಸರು ದಾಳಿ ನಡೆಸಿದ್ದರು. 5 ಲಕ್ಷ ರೂ. ಮೌಲ್ಯದ 50 ಗ್ರಾಂ ಜುರಾಸ್ಸಿಸ್ ಮಾತ್ರೆ, 10 ಗ್ರಾಂ ಎಂಡಿಎಂಎ ಡ್ರಗ್ಸ್ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

    ಸಂಜಯನಗರ ಪ್ರಕರಣದ ಆರೋಪಿ ಶಬ್ಬೀರ್ ಖಾನ್ ಆಟೋ ಚಾಲಕನಾಗಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಮೆಯೇ ಇಲ್ಲದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ನಂತರದ ದಿನಗಳಲ್ಲಿ ಲಾಕ್‌ಡೌನ್ ಅಂತ್ಯಗೊಂಡು ಆಟೋ ಕೆಲಸ ಆರಂಭವಾಗಿತ್ತು. ಆದರೆ ಅಷ್ಟರಲ್ಲಿ ಈತ ಬದುಕಿಗೆ ಬೇರೆಯದೇ ದಾರಿ ಹುಡುಕಿಕೊಂಡಿದ್ದ. ಡ್ರಗ್ಸ್ ಮಾರಾಟದ ದಂಧೆಯಲ್ಲಿ ತೊಡಗಿದ್ದ. ತನಗೆ ಪರಿಚಯವಿದ್ದ ವಿಶಾಖಪಟ್ಟಣದ ಭೀಮಣ್ಣ ಮತ್ತು ನನ್ನಾರಾವ್‌ನನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತರುತ್ತಿದ್ದ. ನಗರದಲ್ಲಿ ಆಟೋಚಾಲಕನ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಸೋಲದೇವನಹಳ್ಳಿ ಪ್ರಕರಣದ ಆರೋಪಿ ಸುರೇಂದ್ರ ಅನಂತಪುರದಲ್ಲಿ ಬಿಎಸ್ಸಿ ಓದುತ್ತಿದ್ದ. ಹಣ ಗಳಿಸುವ ಆಸೆಯಿಂದ ಆಂಧ್ರಪ್ರದೇಶದಿಂದ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts