More

    ಸಿಎಂ ನೀಡಿದ 50ಸಾವಿರ ರೂ. ಚೆಕ್​ ಎನ್​ಕ್ಯಾಶ್​ ಮಾಡಿಕೊಳ್ಳಲ್ಲ: ಸುರಂಗದಲ್ಲಿ ಕಾರ್ಮಿಕರನ್ನು ರಕ್ಷಿಸಿದ ರ್ಯಾಟ್​ ಹೋಲ್​ ಮೈನರ್ಸ್ ತಕರಾರೇನು?

    ಡೆಹ್ರಾಡೂನ್: ಉತ್ತರಾಖಂಡದ ಸಿಲ್ಕ್​ಯಾರಾ ಸುರಂಗದ ಹೆಸರು ನೆನಪಿದೆಯೇ? ಈ ಸುರಂಗ ನಿರ್ಮಾಣ ಸಂದರ್ಭದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಸಿಕ್ಕಿಹಾಕಿಕೊಂಡಿದ್ದ 41 ಕಾರ್ಮಿಕರನ್ನು ಶತಪ್ರಯತ್ನ ಮಾಡಿ ರಕ್ಷಿಸಿದ ಘಟನೆಯನ್ನು ಮರೆಯಲು ಹೇಗೆ ಸಾಧ್ಯ.

    ಇದನ್ನೂ ಓದಿ: ತಮಿಳುನಾಡು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್

    ನವೆಂಬರ್ 12 ರಂದು ಸುರಂಗ ಭಾಗಶಃ ಕುಸಿತ ನಂತರ ಕಾರ್ಮಿಕರು ಹದಿನೇಳು ದಿನಗಳ ಕಾಲ ಸುರಂಗದ ಒಂದು ಭಾಗದಲ್ಲಿ ಸಿಲುಕಿದ್ದರು. ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇಲಿ- ಬಿಲ ಗಣಿಗಾರರು (ರ್ಯಾಟ್​ ಹೋಲ್​ ಮೈನರ್ಸ್).

    ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮಗೆ ನೀಡಿದ 50,000 ರೂಪಾಯಿ ಚೆಕ್‌ಗಳನ್ನು ಎನ್‌ಕ್ಯಾಶ್ (ನಗದು) ಮಾಡಿಕೊಳ್ಳಲು ಈ ಗಣಿಗಾರರು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

    ಕಾರ್ಮಿಕರನ್ನು ರಕ್ಷಿಸುವಲ್ಲಿ ತಾವು ನಿರ್ವಹಿಸಿದ ಪಾತ್ರಕ್ಕೆ ಮುಖ್ಯಮಂತ್ರಿಗಳ ಈ ಕ್ರಮವು ಹೊಂದಿಕೆಯಾಗುವುದಿಲ್ಲ ಎಂದು ಇಲಿ-ಬಿಲ ಗಣಿಗಾರರು ಆಕ್ಷೇಪಿಸಿದ್ದಾರೆ.

    “ಆಗ ಹತಾಶ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಯಂತ್ರಗಳು ವಿಫಲವಾದಾಗ ನಾವು ಸುರಂಗ ಕೊರೆದಿದ್ದೇವೆ. ಮುಂಚಿತವಾಗಿಯೇ ನಾವು ಯಾವುದೇ ಅಪೇಕ್ಷೆ ವ್ಯಕ್ತಪಡಿಸಿದೆಯೇ ನಮ್ಮ ಜೀವವನ್ನು ಪಣಕ್ಕಿಟ್ಟು ಶಿಲಾಖಂಡರಾಶಿಗಳ ಮೂಲಕ ಕೈಯಾರೆ ಕೊರೆದಿದ್ದೇವೆ. ನಾವು ಮುಖ್ಯಮಂತ್ರಿಗಳ ಇಂಗಿತವನ್ನು ಮೆಚ್ಚುತ್ತೇವೆ. ಆದರೆ, ಈ ಮೊತ್ತದಿಂದ ತೃಪ್ತರಾಗುವುದಿಲ್ಲ” ಎಂದು ಇಲಿ-ಬಿಲ ಗಣಿಗಾರರ ತಂಡದ ಮುಖ್ಯಸ್ಥ ವಕೀಲ್ ಹಸನ್ ಹೇಳಿದ್ದಾರೆ.

    “ಕಾರ್ಯಾಚರಣೆಯಲ್ಲಿ ಇಲಿ-ಬಿಲ ಗಣಿಗಾರರ ಪಾತ್ರವು ವೀರೋಚಿತವಾಗಿದೆ, ಆದರೆ. ಅವರು ಸರ್ಕಾರದಿಂದ ಪಡೆದದ್ದು ಯೋಗ್ಯವಲ್ಲ ಎಂಬುದು ಖೇದಕರ” ಎಂದು ಅವರು ಹೇಳಿದರು.

    ರಾಜ್ಯ ಸರ್ಕಾರದಿಂದ ಸನ್ಮಾನಿಸಲಾದ 12 ಇಲಿ-ಬಿಲ ಗಣಿಗಾರರು ಚೆಕ್‌ಗಳನ್ನು ಎನ್‌ಕ್ಯಾಶ್ ಮಾಡದಿರಲು ಸಾಮೂಹಿಕವಾಗಿ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

    ಚೆಕ್‌ಗಳನ್ನು ನೀಡಿದ ದಿನವೇ ಮುಖ್ಯಮಂತ್ರಿಗಳಿಗೆ ಅಸಮಾಧಾನವನ್ನು ತಿಳಿಸಿದ್ದೇವು, ಒಂದೆರಡು ದಿನಗಳಲ್ಲಿ ನಮ್ಮ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ನಾವು ಮರಳಿದ್ದೇವೆ. ಆದರೆ, ಭರವಸೆ ಈಡೇರಿಸದಿದ್ದರೆ ನಾವು ಚೆಕ್‌ಗಳನ್ನು ಹಿಂದಿರುಗಿಸುತ್ತೇವೆ ಎಂದು ಅವರು ಹೇಳಿದರು.

    ಕಾರ್ಯಾಚರಣೆಗೆ ಸಹಕರಿಸಿದ ಇಲಿ-ಬಿಲ ಗಣಿಗಾರರಿಗೆ ಕಾಯಂ ಉದ್ಯೋಗವನ್ನು ತಾವು ರಾಜ್ಯ ಸರ್ಕಾರದಿಂದ ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

    ಹಸನ್ ನೇತೃತ್ವದ ರಾಕ್‌ವೆಲ್ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡುವ ಇಲಿ-ಬಿಲ ಗಣಿಗಾರ ಮತ್ತು ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಿದವರಲ್ಲಿ ಮೊದಲಿಗರಾದ ಮುನ್ನಾ ಅವರು, ಕಾರ್ಮಿಕರನ್ನು ರಕ್ಷಿಸಲು ತಾವು ಮಾಡಿದ ಪ್ರಯತ್ನ ಪರಿಗಣಿಸಿದರೆ ತಮಗೆ ನೀಡಿದ ಮೊತ್ತವು ಸಮರ್ಪಕವಾಗಿಲ್ಲ ಎಂದಿದ್ದಾರೆ.

    ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ನಾವು ಅಕ್ಷರಶಃ ಸಾವಿನ ದವಡೆಗೆ ಪ್ರವೇಶಿಸಿದ್ದೇವೆ, ಮಾನವ ಜೀವಗಳನ್ನು ಉಳಿಸಬೇಕೆಂಬ ಕಾರಣಕ್ಕಾಗಿ ನಾವು ನಮ್ಮ ಕುಟುಂಬ ಸದಸ್ಯರ ಮಾತನ್ನು ಕೂಡ ಕೇಳಲಿಲ್ಲ ಎಂದು ಅವರು ಹೇಳಿದರು.

    “ಕಾರ್ಮಿಕರ ರಕ್ಷಣೆಯಲ್ಲಿ ನಮ್ಮ ಪಾತ್ರವನ್ನು ಪರಿಗಣಿಸಿದರೆ 50,000 ರೂಪಾಯಿಗಳ ಚೆಕ್‌ಗಳು ತುಂಬಾ ಅಲ್ಪ ಮೊತ್ತವಾಗಿದೆ. ಇದು ನಮ್ಮ ನೈತಿಕತೆಯನ್ನು ಕುಗ್ಗಿಸುತ್ತದೆ. ಶಾಶ್ವತ ಉದ್ಯೋಗ ಅಥವಾ ವಾಸಿಸಲು ಮನೆ ಹೆಚ್ಚು ಸೂಕ್ತವಾಗಿರುತ್ತದೆ,” ಎಂದ ಮುನ್ನಾ, ತಾವು ತಮ್ಮ ಮಕ್ಕಳೊಂದಿಗೆ 8 ಅಡಿ ಅಗಲ 10 ಅಡಿ ಉದ್ದದ ಕೋಣೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದರು.

    ಮುಖ್ಯಮಂತ್ರಿ ಧಾಮಿ ಅವರು ಗುರುವಾರ 12 ಇಲಿ-ಬಿಲ ಗಣಿಗಾರರಿಗೆ ತಲಾ 50,000 ರೂ. ಚೆಕ್ ನೀಡಿ ಗೌರವಿಸಿದ್ದರು.

    ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ಆಗರ್ ಯಂತ್ರಗಳ ಸಹಾಯದಿಂದ ನಡೆಸಿದ ಹಲವಾರು ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡಲು ವಿಫಲವಾದ ನಂತರ ಕೊನೆಯ ತಂತ್ರವಾಗಿ ಇಲಿ-ಬಿಲ ಗಣಿಗಾರರನ್ನು ಕರೆತರಲಾಗಿತ್ತು. ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಪೈಪ್‌ಗಳಿಂದ ದಾರಿಯನ್ನು ಸಿದ್ಧಪಡಿಸಲು ಇಲಿ-ಬಿಲ ಗಣಿಗಾರರು ಸುರಂಗದ ಕುಸಿದ ಭಾಗದಲ್ಲಿ ಶಿಲಾಖಂಡರಾಶಿಗಳ ಮೂಲಕ ಸುಮಾರು 15 ಮೀಟರ್‌ಗಳಷ್ಟು ರಂಧ್ರವನ್ನು ಕೊರೆದಿದ್ದರು.

    ಮಾನವ ಕಳ್ಳಸಾಗಣೆ ಶಂಕೆ: 303 ಮಂದಿ ಭಾರತೀಯರಿದ್ದ ವಿಮಾನ ಫ್ರಾನ್ಸ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts