More

    ಅಂಗವಿಕಲ ಕುಷ್ಠರೋಗಿಗೆ ನೆರವು; ಯುಡಿಐಡಿ ಕಾರ್ಡ್​ ವಿತರಣೆ

    ಬೆಂಗಳೂರು: ಕುಷ್ಠರೋಗದಿಂದ ಅಂಗವಿಕಲತೆಗೆ ಒಳಗಾದವರಿಗೆ ಸರ್ಕಾರದಿಂದ ಯುಡಿಐಡಿ ಕಾರ್ಡ್ (ಯೂನಿಕ್ ಡಿಸೆಬಿಲಿಟಿ ಐಡಿ ಕಾರ್ಡ್) ವಿತರಿಸಲಾಗುತ್ತಿದೆ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲಾ ಕುಷ್ಠರೋಗ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಆಯಾ ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಕಾರ್ಡ್ ನೀಡಲಾಗುತ್ತಿದೆ. ಆ ಮೂಲಕ ಅಂಗವಿಕಲರಿಗೆ ದೊರೆಯುವ ಎಲ್ಲ ಸರ್ಕಾರಿ ಸೌಲಭ್ಯಗಳು ಇವರಿಗೂ ದೊರೆಯಲಿವೆ.

    2019ರ ಸಮೀಕ್ಷೆ ಪ್ರಕಾರ, 2,145 ಮಂದಿಯಲ್ಲಿ ಕುಷ್ಠರೋಗ ಪತ್ತೆಯಾಗಿದೆ. ರೋಗದ ಅರಿವಿಲ್ಲದೆ ಆರಂಭದಲ್ಲೇ ಚಿಕಿತ್ಸೆ ದೊರೆಯದೆ 56 ಮಂದಿ ಅಂಗವಿಕಲರಾಗಿದ್ದಾರೆ. 2017ರಲ್ಲಿ 117 ಹಾಗೂ 2018ರಲ್ಲಿ 82 ಮಂದಿ ಅಂಗವಿಕಲತೆಗೆ ತುತ್ತಾಗಿದ್ದರು. ಇವರೆಲ್ಲರಿಗೂ ಉಚಿತ ಚಿಕಿತ್ಸೆ ಜತೆಗೆ ಯುಡಿಐಡಿ ಕಾರ್ಡ್ ಸಹ ವಿತರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಶಸ್ತ್ರಚಿಕಿತ್ಸೆಗೆ ಅರ್ಥಿಕ ನೆರವು: ಕುಷ್ಠರೋಗದಿಂದ ಅಂಗವಿಕಲತೆಗೆ ಒಳಗಾದವರು ಸಹಜ ಸ್ಥಿತಿಗೆ ಮರಳಲು ಬಹಳಷ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆ. ಪ್ರತಿ ಶಸ್ತ್ರಚಿಕಿತ್ಸೆಗೆ 8 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಕುಷ್ಠರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಆಸ್ಪತ್ರೆಗಳನ್ನು ಪ್ರೋತ್ಸಾಹಿಸಲು ಪ್ರತಿ ಪ್ರಕರಣಕ್ಕೆ 5 ಸಾವಿರ ರೂ. ಕೊಡಲಾಗುತ್ತಿದೆ. ಈ ಸೌಲಭ್ಯ ಎಲ್ಲ ಆಸ್ಪತ್ರೆಗಳಲ್ಲೂ ಇಲ್ಲದ ಕಾರಣ ಮೂಳೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲೂ ಇನ್ಮುಂದೆ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚಿಸಲು ಇಲಾಖೆ ಯೋಚಿಸಿದೆ.

    ಮಾನಸಿಕ ಆರೋಗ್ಯ: ಕುಷ್ಠರೋಗಕ್ಕೆ ಒಳಗಾದವರು ದೈಹಿಕವಾಗಿ ನೋವು ಅನುಭವಿಸುವುದಲ್ಲದೆ, ಮಾನಸಿಕವಾಗಿಯೂ ಜಜ್ಜರಿತರಾಗುತ್ತಾರೆ. ಅಲ್ಲದೆ ಇವರನ್ನು ಸಮಾಜ ನೋಡುವ ದೃಷ್ಟಿ ಬೇರೆ ರೀತಿ ಇರುತ್ತದೆ. ಹೀಗೆ ಕಳಂಕಿತ ಹಾಗೂ ತಾರತಮ್ಯದಿಂದ ಮಾನಸಿಕ ವ್ಯಾಧಿಗೆ ಒಳಗಾಗುವ ರೋಗಿಗಳಿಗೆ ಕೌನ್ಸೆಲಿಂಗ್ ನಡೆಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಿದ್ಧತೆ ನಡೆದಿದೆ.

    ಮನೆ ಮನೆ ಭೇಟಿ: ಕುಷ್ಠರೋಗ ಪತ್ತೆ ಹಚ್ಚಲು ಈ ಹಿಂದೆ ಮನೆ ಮನೆ ಭೇಟಿ, ಶಾಲೆಗಳಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. 2010ರ ನಂತರ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದೀಗ ಮರು ಪ್ರಾರಂಭಿಸಲು ಇಲಾಖೆ ಉದ್ದೇಶಿಸಿದ್ದು, ಇದರಿಂದ ಆರಂಭದಲ್ಲೇ ರೋಗ ಪತ್ತೆ ಹೆಚ್ಚಿ ಅಗತ್ಯ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    30ರಿಂದ ಜಾಗೃತಿ ಆಂದೋಲನ: ಕುಷ್ಠರೋಗ ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಜ.30ರಿಂದ ಫೆ.13ರವರೆಗೆ ‘ಕುಷ್ಠರೋಗ ವಿರುದ್ಧ ಅಂತಿಮ ಹೋರಾಟ’ ಶೀರ್ಷಿಕೆಯಡಿ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಈ ಸಂದರ್ಭ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ‘ಕುಷ್ಠ ಮುಕ್ತ ಭಾರತ’ ನಿರ್ವಣದ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಆಂದೋಲನದ ಮೂಲಕ ಜನರನ್ನು ಸಂರ್ಪಸಿ, ರೋಗದ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುವುದು. ಇದೇ ವೇಳೆ ಕುಷ್ಠರೋಗ ಪತ್ತೆ ಕಾರ್ಯ ಸಹ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕಿ (ಕುಷ್ಠರೋಗ ವಿಭಾಗ) ಪರಿಮಳಾ ಮರೂರು ತಿಳಿಸಿದ್ದಾರೆ.

    ಕುಷ್ಠರೋಗ ಎಂದರೇನು?: ‘ಮೈಕ್ರೊಬ್ಯಾಕ್ಟೀರಿಯಂ ಲೆಪ್ರೆ’ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ ಕುಷ್ಠರೋಗ. ಇದು ನರಗಳು ಮತ್ತು ಚರ್ಮದ ಮೇಲೆ ತೀವ್ರ ಪರಿಣಾಮ ಬೀರಿ, ರೋಗಿಯನ್ನು ಅಂಗವಿಕಲನನ್ನಾಗಿ ಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸಿಕೊಂಡು ಅವು ಸ್ಪರ್ಶಜ್ಞಾನ ಹೊಂದದಿದ್ದರೆ ಅದು ಕುಷ್ಠರೋಗದ ಲಕ್ಷಣ. ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷಿಸಿಕೊಳ್ಳಬೇಕು.

    | ಪಂಕಜ ಕೆ.ಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts