ಕರ್ತವ್ಯನಿರತ ಪಿಎಸ್‌ಐ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆ

psi attack
Published on

ಬೆಂಗಳೂರು: ಯಶವಂತಪುರದಲ್ಲಿ ಕರ್ತವ್ಯನಿರತ ಪಿಎಸ್‌ಐ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಶ್ರೀರಾಂಪುರ ಠಾಣೆ ಪಿಎಸ್‌ಐ ಸರ್ಫುದ್ದೀನ್ ಹಲ್ಲೆಗೊಳಗಾದವರು. ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್‌ಐ ಸರ್ಫುದ್ದೀನ್ ಭಾನುವಾರ ಮಧ್ಯಾಹ್ನ 12.15ರಲ್ಲಿ ಪ್ರಕರಣವೊಂದರ ತನಿಖೆಗಾಗಿ ಯಶವಂತಪುರದ ಆರ್‌ಟಿಒ ಕಚೇರಿ ಬಳಿ ಮಫ್ತಿಯಲ್ಲಿ ಬಂದಿದ್ದರು. ಈ ವೇಳೆ ಆರೋಪಿ ಉದಯ್ ಕುಮಾರ್, ತನ್ನ ತಂದೆ ನಡೆಸುತ್ತಿದ್ದ ಹೋಟೆಲ್ ಎದುರು ನಿಂತುಕೊಂಡಿದ್ದ ದ್ವಿಚಕ್ರ ವಾಹನದಲ್ಲಿ ಪಿಎಸ್‌ಐ ಸರ್ಫುದ್ದೀನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ. ಅದನ್ನು ಪಿಎಸ್‌ಐ ಪ್ರಶ್ನಿಸಿದ್ದರು.

ಆರೋಪಿ ಉದಯ್​ಕುಮಾರ್
ಆರೋಪಿ ಉದಯ್​ಕುಮಾರ್

ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ತಿರುಗಿತ್ತು. ಆಕ್ರೋಶಗೊಂಡ ಉದಯ್‌ಕುಮಾರ್, ಪಿಎಸ್‌ಐ ಸರ್ಫುದ್ದೀನ್ ಅವರನ್ನು ರಸ್ತೆಯಲ್ಲೇ ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಲ್ಲಿನಿಂದ ತಲೆಗೆ ಹೊಡೆದಿದ್ದು, ಬಲವಾದ ಏಟು ತಗುಲಿ ರಕ್ತಸ್ರಾವವಾಗಿದೆ. ಗಲಾಟೆಯನ್ನು ತಡೆದ ಸ್ಥಳೀಯರು, ಗಾಯಗೊಂಡಿದ್ದ ಸರ್ಫುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿ ಉದಯ್ ಕುಮಾರ್ (34) ನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net