

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದ ದೆಹಲಿ ಸರ್ಕಾರದ ಮಾಜಿ ಸಚಿವ ಸತ್ಯೇಂದರ್ ಜೈನ್ರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸುಮಾರು ಒಂದು ವರ್ಷದಿಂದ ತಿಹಾರ್ ಜೈಲಿನಲ್ಲಿರುವ ಸತ್ಯೇಂದರ್ ಜೈನ್ ಇತ್ತೀಚಿಗೆ ಸ್ನಾನ ಮಾಡುವ ವೇಳೆ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಧೈರ್ಯಶಾಲಿಯನ್ನು ಭೇಟಿ ಮಾಡಿದೆ ಎಂದು ಸತ್ಯೇಂದರ್ ಜೈನ್ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಲೋಕನಾಯಕ ಆಸ್ಪತ್ರೆಗೆ ದಾಖಲಾಗಿರುವ ಸತ್ಯೇಂದರ್ ಜೈನ್ ಅವರಿಗೆ ಸುಪ್ರೀಂ ಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ.
ಎಎಪಿ ನಾಯಕನಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಮಾಧ್ಯಮಗಳ ಜೊತೆ ಮಾತನಾಡದಂತೆ ಮತ್ತು ದೆಹಲಿಯನ್ನು ತೊರೆಯಬಾರದು ಎಂದು ತಾಕೀತು ಮಾಡಿದೆ.