More

    ಅನಿಸಿಕೆ|ಗಡಿಭಾಗದಲ್ಲಿ ಭಾರತದ ಬೇರು ಬಲಿಷ್ಠ

    ಅನಿಸಿಕೆ|ಗಡಿಭಾಗದಲ್ಲಿ ಭಾರತದ ಬೇರು ಬಲಿಷ್ಠಎಲ್ಲಿ ನಮ್ಮ ರಾಷ್ಟ್ರದ 20 ಯೋಧರು ಹುತಾತ್ಮರಾದರೋ ಅದೇ ಭಾರತ-ಚೀನಾ ಗಡಿಯಲ್ಲಿ 72 ಗಂಟೆಗಳ ಒಳಗೆ, ಯುದ್ಧ ಕೌಶಲಕ್ಕೆ ಸಹಕಾರಿಯಾಗುವಂತಹ ಸೇತುವೆಯೊಂದನ್ನು ನಮ್ಮ ವೀರ ಸೇನಾನಿಗಳು ಕಟ್ಟಿ ಮುಗಿಸಿದ್ದಾರೆ. ಇದು ಈಗಿನ ಭಾರತದ ತಾಕತ್ತು. ಇದು ಶತ್ರುರಾಷ್ಟ್ರದ ಸವಾಲನ್ನು ಎದುರಿಸಲು ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಯಲ್ಲಿ ನಮ್ಮ ದೇಶಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಭಾರತದ ಗಡಿಯಲ್ಲಿ ತಾಂತ್ರಿಕವಾಗಿ ಮತ್ತು ಮೂಲಭೂತವಾಗಿ ಏನು ಅಭಿವೃದ್ಧಿ ಆಗಬೇಕೋ ಅದನ್ನು ಮಾಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದೆ. ಇದೇ ವಿಷಯ ಆಂತರಿಕವಾಗಿ ಚೀನಾದ ನಿದ್ದೆಗೆಡಿಸಿರುವುದು ಎನ್ನುವುದು ಜಾಗತಿಕ ರಾಷ್ಟ್ರಗಳ ರಾಜಕೀಯ ಪಂಡಿತರಿಗೆ ಗೊತ್ತಿರುವ ಸಂಗತಿ.

    ಭಾರತ- ಚೀನಾ ಗಡಿಯಲ್ಲಿ ಪ್ರಮುಖ ಸಂಪರ್ಕ ರಸ್ತೆಯಾದ ದಾರ್ಬೂಕ್-ಶ್ಯೋಕ್- ದೌಲತ್ ಬೇಗ್​ಓಲ್ಡಿ ಅನ್ನು ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್​ಒ) 19 ವರ್ಷಗಳ ಹಿಂದೆ ಪ್ರಾರಂಭಿಸಿತ್ತು. ಆದರೆ ಈ ಮೊದಲು ನಮ್ಮನ್ನು ಆಳುತ್ತಿದ್ದ ಕೇಂದ್ರ ಸರ್ಕಾರಗಳಲ್ಲಿ ಇಚ್ಛಾಶಕ್ತಿಯೇ ಇರದ್ದರಿಂದ ಆ ಯೋಜನೆ ನಿಧಾನಗತಿಯಲ್ಲಿ ತೆವಳಿಕೊಂಡು ಸಾಗುತ್ತಿತ್ತು. ಈ ರಸ್ತೆ ಲೇಹ್​ನಿಂದ ಲಡಾಖ್ ಮತ್ತು ಮೇಲೆ ಹೇಳಿದ ದಾರ್ಬೂಕ್​ನಿಂದ ದೌಲತ್​ತನಕ ಸಾಗುವಂತಹದಾಗಿದೆ. ಇಲ್ಲಿ ಭವಿಷ್ಯದಲ್ಲಿ ಹೆಚ್ಚುವರಿ ವಾಯುನೆಲೆ ಸ್ಥಾಪಿಸುವ ಉದ್ದೇಶವನ್ನು ಈಗಿನ ಸರ್ಕಾರ ಹೊಂದಿದೆ. 2008 ರಲ್ಲಿ ಭಾರತೀಯ ವಾಯುಸೇನೆಯ ಎನ್-32 ಇಲ್ಲಿ ಕರ್ತವ್ಯ ನಿರ್ವಹಿಸುವಾಗ ಪರಿಸ್ಥಿತಿ ಸುಲಭವಾಗಿರಲಿಲ್ಲ. ಈಗ ನಿರ್ವಣವಾಗಿರುವ ಹೊಸ ರಸ್ತೆಯಿಂದ ಭವಿಷ್ಯದಲ್ಲಿ ಹಲವು ಪ್ರಯೋಜನಗಳು ವಾಯುಸೇನೆಗೆ ಆಗಲಿವೆ. 2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ಕೂಡಲೇ ವಾಸ್ತವ ನಿಯಂತ್ರಣ ರೇಖೆಯ ನೂರು ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಮತ್ತು ನೂತನ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಿತು. ಈ ಬೃಹತ್ ಯೋಜನೆ ದೇಶದ ನಾಲ್ಕು ರಾಜ್ಯಗಳಲ್ಲಿ ಹರಡಿದ್ದು, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶದ ಪೂರ್ವ ಭಾಗ ಮತ್ತು ಉತ್ತರಖಂಡದ ಪಶ್ಚಿಮ ಭಾಗದಲ್ಲಿ ನಮ್ಮ ಸೈನ್ಯಕ್ಕೆ ಅತ್ಯಗತ್ಯವಾಗಿ ಬೇಕಾದ ಸಂಪರ್ಕ ರಸ್ತೆಗಳ ನಿರ್ಮಾಣ ಉದ್ದೇಶ ಹೊಂದಿದೆ. 2017 ರಲ್ಲಿ ಡೋಕ್ಲಾಂನಲ್ಲಿ ಚೀನಾ ಕಾಲುಕೆರೆದು ಜಗಳಕ್ಕೆ ಬಂದಾಗ ಮೋದಿ ಸರ್ಕಾರ ಆ ಭಾಗದ ರಸ್ತೆ ಅಭಿವೃದ್ಧಿ ಮಾತ್ರವಲ್ಲ, ಇತರ ಮೂಲಭೂತ ಸೌಕರ್ಯಕ್ಕೆ ಕೂಡ ತುರ್ತು ಕ್ರಮ ಕೈಗೊಂಡಿತು. ಗಡಿಯಲ್ಲಿ ಔಟ್​ಪೋಸ್ಟ್ ನಿರ್ವಣ, ನಿಯಂತ್ರಣ ರೇಖೆಗೆ ಉಕ್ಕಿನ ಬೇಲಿ, ಸೇನಾ ವಾಹನಗಳ ನಿಲುಗಡೆಗೆ ಅವಕಾಶ, ಹೊನಲುಬೆಳಕಿನ ವ್ಯವಸ್ಥೆಯೊಂದಿಗೆ ಸೈನ್ಯಾಧಿಕಾರಿಗಳ ಸಲಹೆಯಂತೆ ಇತರ ವ್ಯವಸ್ಥೆಗಳನ್ನು ಮಾಡಲಾಯಿತು. ಮೋದಿ ಸರ್ಕಾರ ಬರುವ ಮೊದಲು ಇಂತಹ ಅತ್ಯಗತ್ಯ ವ್ಯವಸ್ಥೆ ಮಾಡಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಲಿಖಿತ ಅನುಮತಿ ಬೇಕಾಗುತ್ತಿತ್ತು ಮತ್ತು ಈ ಅನುಮತಿ ಸಿಗಲು ದಶಕಗಳು ತಗಲುತ್ತಿದ್ದವು. ಆದರೆ ದೂರದೃಷ್ಟಿಯುಳ್ಳ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸೈನ್ಯವನ್ನು ಬಲಪಡಿಸುವುದರೊಂದಿಗೆ ದೇಶದ ಗಡಿಯನ್ನು ಸದೃಢಗೊಳಿಸುವ ಕಾರ್ಯಕ್ಕೆ ಕೈಹಾಕಿತಲ್ಲ, ಅದರಿಂದ ವಸ್ತುಸ್ಥಿತಿಯೇ ಬದಲಾಯಿತು. ಸುಮಾರು 4,700 ಕಿ.ಮೀ ನಷ್ಟು ಉದ್ದದ ಚೀನಾ ಗಡಿರಸ್ತೆಗಳನ್ನು ಕಳೆದ 6 ವರ್ಷಗಳಲ್ಲಿ ನಿರ್ಮಾಣ ಮತ್ತು ಅಭಿವೃದ್ಧಿಪಡಿಸುವುದರೊಂದಿಗೆ ನಮ್ಮ ಇಚ್ಛಾಶಕ್ತಿಯ ಸಾಮರ್ಥ್ಯ ಚೀನಾದ ಮುಂದೆ ಸಾಬೀತಾಯಿತು. ಇದು 2014 ರ ಮೊದಲಿಗೆ ಹೋಲಿಸಿದರೆ 32% ಹೆಚ್ಚು ಅಭಿವೃದ್ಧಿಯಾದಂತೆ ಆಗಿದೆ. ಇಷ್ಟೇ ಅಲ್ಲ, 14,450 ಮೀಟರ್ ಉದ್ದದ ಸೇತುವೆಗಳನ್ನು ಕಳೆದ ಆರು ವರ್ಷಗಳಲ್ಲಿ ನಿರ್ವಿುಸಲಾಗಿದೆ. ಇದು ಇಲ್ಲಿಯ ತನಕ ನಿರ್ವಣವಾಗಿರುವ ಒಟ್ಟು ಸೇತುವೆಗಳ 98% ಆಗಿರುವುದು ಸರ್ಕಾರ ರಾಷ್ಟ್ರದ ಗಡಿ ಮತ್ತು ಜನರ ಸುರಕ್ಷತೆ ಬಗ್ಗೆ ವಹಿಸಿರುವ ಕಾಳಜಿಗೆ ಹಿಡಿದ ಕೈಗನ್ನಡಿ. ರಸ್ತೆ ನಿರ್ಮಾಣ ಕಾಮಗಾರಿ 2008 ರಿಂದ 2017 ರ ತನಕ ವರ್ಷಕ್ಕೆ 170 ಕಿ.ಮೀನಷ್ಟು ನಿಧಾನವಾಗಿ ನಡೆಯುತ್ತಿದ್ದರೆ ಕಳೆದ 3 ವರ್ಷಗಳಲ್ಲಿ ಇದು ವರ್ಷಕ್ಕೆ 380 ಕಿ.ಮೀನಷ್ಟು ವೇಗ ಪಡೆದುಕೊಂಡಿದೆ.

    ಮೋದಿ ಸರ್ಕಾರ 2017 ರಲ್ಲಿ ತೆಗೆದುಕೊಂಡ ಒಂದು ಪ್ರಮುಖ ಹೆಜ್ಜೆಯಿಂದ ಸೇನೆಯಲ್ಲಿ ನಿಜಕ್ಕೂ ಭರವಸೆ ಹೆಚ್ಚುವಂತೆ ಮಾಡಿತು. ಅದೇನೆಂದರೆ, ಗಡಿ ರಸ್ತೆ ನಿರ್ಮಾಣ ಸಂಸ್ಥೆಯ (ಬಿಆರ್​ಒ) ಮಹಾನಿರ್ದೇಶಕರಿಗೆ ದೇಶದ ರಕ್ಷಣಾ ವಿಷಯಕ್ಕೆ ಸಂಬಂಧಪಟ್ಟಂತೆ ಅತ್ಯುನ್ನತ ಗುಣಮಟ್ಟದ, ತಂತ್ರಜ್ಞಾನದ ನಿರ್ವಣಕ್ಕೆ ಅಗತ್ಯವಿರುವ ನೂರು ಕೋಟಿ ರೂಪಾಯಿವರೆಗಿನ ಉಪಕರಣಗಳನ್ನು ಸ್ವತಃ ವಿವೇಚನೆಯ ಆಧಾರದಲ್ಲಿ ಖರೀದಿಸಲು ಸ್ವಾತಂತ್ರ್ಯ; ಉನ್ನತ ನಿರ್ಮಾಣ ಸಂಸ್ಥೆಗಳನ್ನು ಕೂಡ ಸೇವೆಗೆ ಬಳಸಿಕೊಳ್ಳುವ ಅವಕಾಶ ನೀಡಲಾಗಿದೆ. ಇನ್ನು ಬಿಆರ್​ಒ ಅಧೀನದಲ್ಲಿರುವ ಮುಖ್ಯ ತಂತ್ರಜ್ಞರು ಮತ್ತು ಡಿಜಿ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಸ್ಥಗಿತಗೊಂಡಿರುವ ಕಾರ್ಯಗಳಿಗೆ ಚಾಲನೆ ನೀಡಿ ಸಂಪೂರ್ಣಗೊಳಿಸುವ ಅಧಿಕಾರವನ್ನು ಸರ್ಕಾರ ನೀಡಿದೆ. ಗಡಿಯಲ್ಲಿ ಸೇನಾ ಮೂಲಭೂತ ವ್ಯವಸ್ಥೆ ಮಾತ್ರವಲ್ಲ, ಗಡಿಪ್ರದೇಶದ ರಾಜ್ಯಗಳಲ್ಲಿ ಸೇನೆಗೆ ಅವಶ್ಯವಿರುವ ಇತರ ನಿರ್ಮಾಣ ಕಾಮಗಾರಿಯನ್ನು ಕೂಡ ತ್ವರಿತವಾಗಿ ಮುಗಿಸಲು ಹಣಕಾಸಿನ ನೆರವನ್ನು ಮುಕ್ತವಾಗಿ ನೀಡುವ ಮೂಲಕ ಸರ್ಕಾರ ಸೇನೆಯಲ್ಲಿ ನೈತಿಕ ವಿಶ್ವಾಸವನ್ನು ತುಂಬಿದೆ.

    ಇದನ್ನೂ ಓದಿ:  VIDEO: “ನಮಸ್ಕಾರ ಗೆಳೆಯರೆ.. “- ಕನ್ನಡದಲ್ಲೇ ಜಾಗೃತಿ ಮೂಡಿಸ್ತಿದ್ದಾರೆ ಕ್ರಿಕೆಟ್ ದೇವರು

    ಇನ್ನು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳನ್ನು ಸಂರ್ಪಸುವ 45 ಕಿ.ಮೀ ಉದ್ದದ ಸಿವಾಕ್- ರಂಗಪೋ ರೈಲ್ವೆ ಹಳಿ ಸಿಂಗಲ್ ಬ್ರಾಡ್​ಗೇಜ್ ಆಗಿದ್ದು, 2009 ರಲ್ಲಿ ಉಪರಾಷ್ಟ್ರಪತಿಗಳಾಗಿದ್ದ ಹಮೀದ್ ಅನ್ಸಾರಿ ಹಾಗೂ ಆಗ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಶಿಲಾನ್ಯಾಸ ಮಾಡಿದ್ದರು. ಆದರೆ ಆ ಭಾಗದ ಸುರಂಗ ಮಾರ್ಗಗಳಲ್ಲಿ ಪ್ರಮುಖವಾಗಿರುವ ಈ 5 ಕಿ.ಮಿ ಉದ್ದದ ಸುರಂಗ ಮಾರ್ಗದ ಕಾಮಗಾರಿ ಆರಂಭವಾದದ್ದೇ ಮೋದಿ ಸರ್ಕಾರದ ಅವಧಿಯಲ್ಲಿ. 2018 ರಲ್ಲಿ ಪ್ರಾರಂಭವಾದ ಈ ಮಾರ್ಗ 2023ರಲ್ಲಿ ಮುಕ್ತಾಯಗೊಳ್ಳಲಿದೆ. ಭಾರತೀಯ ರೈಲ್ವೆ ಚೇನಾಬ್ ನದಿಯ ಮೇಲೆ 1.3 ಕಿಮೀ ಉದ್ದದ, ವಿಶ್ವದ ಅತ್ಯಂತ ದೊಡ್ಡ ಸೇತುವೆ ಕಟ್ಟುತ್ತಿದ್ದು, ಇದು ರೇಸಿ ಜಿಲ್ಲೆಯಲ್ಲಿ ಹಾದು ಹೋಗಿ ಕಾಶ್ಮೀರವನ್ನು ಮುಖ್ಯವಾಹಿನಿಯೊಂದಿಗೆ ಸಂರ್ಪಸಿ ಬೆನಿಹಾಲ್- ಉದಮ್ುರಂ ರೈಲ್ವೆ ಹಳಿಗೆ ಜೋಡಣೆಯಾಗುತ್ತದೆ. ಈ ಯೋಜನೆ 2004 ರ ಆರಂಭದಲ್ಲಿ ಪ್ರಾರಂಭವಾಗಿದ್ದರೂ ನಂತರ ಕೆಲವು ಸಮಯದಲ್ಲಿಯೇ ಸ್ಥಗಿತಗೊಂಡಿತ್ತು. ಈಗ 2017 ರಲ್ಲಿ ಮತ್ತೆ ಆರಂಭಗೊಂಡಿದ್ದು 2021 ರ ಡಿಸೆಂಬರ್​ನಲ್ಲಿ ಮುಕ್ತಾಯಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 2017ರ ಏಪ್ರಿಲ್​ನಲ್ಲಿ 9.28 ಕಿ.ಮೀ ಉದ್ದದ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರಿನ ಚೆನ್ನಾನಿ- ನಾಶರೀ ಸುರಂಗವನ್ನು ಉದ್ಘಾಟಿಸಿದ್ದು, ಚಳಿಗಾಲದಲ್ಲಿಯೂ ಜಮ್ಮು-ಕಾಶ್ಮೀರಕ್ಕೆ ಸಂಪರ್ಕ ಸಾಧ್ಯವಾಗಿಸುತ್ತದೆ. 2011 ರಲ್ಲಿ ಪ್ರಾರಂಭವಾದ ಯೋಜನೆ ಆರು ವರ್ಷಗಳಲ್ಲಿ ಮುಕ್ತಾಯವಾಗಿತ್ತು. ಶ್ರೀನಗರ- ಲಡಾಖ್​ನ ಜೋಜಿ ಲಾ ಟನಲ್ ಮತ್ತು ಝಿ-ಮೋ ಟನಲ್ 2017 ರಲ್ಲಿ ಮುಗಿಯಬೇಕಾಗಿತ್ತು. ಗುತ್ತಿಗೆದಾರರ ಆರ್ಥಿಕ ದಿವಾಳಿತನದಿಂದ ಸ್ಥಗಿತಗೊಂಡಿದ್ದು, ಹೊಸ ಗುತ್ತಿಗೆಯನ್ನು 2020 ಜನವರಿಯಲ್ಲಿ ನೀಡಲಾಗಿದ್ದು, ಅದು 2023 ಕೊನೆಯಲ್ಲಿ ಮುಗಿಯುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳ ಪ್ರಮುಖ ಬಾಗಿಬಿಲ್ ಸೇತುವೆಯನ್ನು 2018ರ ಡಿಸೆಂಬರ್​ನಲ್ಲಿ ಮೋದಿಯವರು ಉದ್ಘಾಟಿಸಿದ್ದಾರೆ. 4.9 ಕಿಮೀ ಉದ್ದದ ಈ ಸೇತುವೆ ಬ್ರಹ್ಮಪುತ್ರ ನದಿಯ ಮೇಲೆ ಕಟ್ಟಲ್ಪಟ್ಟಿದ್ದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ನಡುವೆ ಸಂಪರ್ಕ ಕಲ್ಪಿಸಿದೆ. ಅಸ್ಸಾಂನ ದೀಬ್ರಾಗ್ ಪ್ರದೇಶವು ಅರುಣಾಚಲ ಪ್ರದೇಶದ ದೀಮಾಜಿ ಎನ್ನುವ ಪ್ರದೇಶಕ್ಕೆ ಸಂರ್ಪಸುತ್ತದೆ. ಇದು ರೈಲು ಮತ್ತು ರಸ್ತೆ ಎರಡನ್ನೂ ಒಳಗೊಂಡ ಸೇತುವೆಯಾಗಿದ್ದು, ಮಾನವ ಸಂಚಾರ ಮತ್ತು ಯುದ್ಧೋಪಕರಣಗಳ ಸಾಗಾಟಕ್ಕೂ ಅನುಕೂಲಕರವಾಗಿದೆ.

    ಪವಿತ್ರ ಧಾರ್ವಿುಕ ತಾಣಗಳಾದ ಚಾರ್​ಧಾಮ್ ಎಂದೇ ಕರೆಯಲ್ಪಡುವ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಯನ್ನು ಪರಸ್ಪರ ಜೋಡಿಸುವ ಯೋಜನೆಯನ್ನು ಮೋದಿಯವರು 2016 ರ ಡಿಸೆಂಬರಲ್ಲಿ ಲೋಕಾರ್ಪಣೆಗೊಳಿಸಿದ್ದು, ಇದು ಗಡಿರಾಜ್ಯ ಉತ್ತರಾಖಂಡದಲ್ಲಿ ಧಾರ್ವಿುಕ ಪ್ರವಾಸಕ್ಕೆ ಉತ್ತೇಜನ ನೀಡಿದಂತಾಗಿದೆ.

    ಇಂತಹ ಹತ್ತು ಹಲವು ಯೋಜನೆಗಳು ಗಡಿಭಾಗದಲ್ಲಿ ಭಾರತದ ಬೇರುಗಳನ್ನು ಬಲಿಷ್ಠಗೊಳಿಸಿವೆ. ಇದೆಲ್ಲವೂ ಚೀನಾದ ಅಹಂಕಾರವನ್ನು ಮುರಿದಿದ್ದು, ಭಾರತ ತನ್ನ ಗಡಿ ರಾಜ್ಯಗಳಲ್ಲಿ ಅಭಿವೃದ್ಧಿಯನ್ನು ಕಡೆಗಣಿಸುವುದಿಲ್ಲ ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಶತ್ರುರಾಷ್ಟ್ರಗಳಿಗೆ ನೀಡಿದಂತಾಗಿದೆ. ಇದರೊಂದಿಗೆ ಭಾರತ- ಚೀನಾ ಗಡಿಯಲ್ಲಿನ ಕೆಲ ರಸ್ತೆ ನಿರ್ಮಾಣ ಯೋಜನೆ ಕೂಡ ಆದಷ್ಟು ಬೇಗ ಮುಗಿಯಬೇಕಿದೆ. 1999 ರಲ್ಲಿ ಒಟ್ಟು 73 ರಸ್ತೆಗಳ ನಿರ್ಮಾಣ ಆರಂಭಿಸಲಾಗಿತ್ತಾದರೂ 2014 ರಿಂದ 2018 ರ ನಡುವೆ ಎಲ್ಲಾ ಯೋಜನೆಗಳಿಗೆ ನಿಜವಾದ ವೇಗ ಸಿಕ್ಕಿರುವುದು ಸೇನಾ ವಲಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಸೇನೆಯೊಂದಿಗೆ ಸಮನ್ವಯ ಮತ್ತು ಇಚ್ಛಾಶಕ್ತಿ ಹಾಗೂ ಶತ್ರುರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ಧಾಟಿಯ ಮೇಲೆ ಒಂದು ಸರ್ಕಾರದ ಸಾಮರ್ಥ್ಯ ತಿಳಿಯುತ್ತದೆ. ಆ ನಿಟ್ಟಿನಲ್ಲಿ ಮೋದಿ ಸರ್ಕಾರದ ನಡೆ ಚೀನಾದಂತಹ ಕಪಟ ರಾಷ್ಟ್ರಕ್ಕೆ ಚಳಿಹಿಡಿಸಿರುವುದು ಸುಳ್ಳಲ್ಲ. ಇದೆಲ್ಲವನ್ನೂ ಜನರಿಗೆ ಹೇಳುತ್ತಾ ಪ್ರಚಾರ ಮಾಡುವ ಉದ್ದೇಶ ಮೋದಿಯವರಿಗೆ ಇಲ್ಲ. ಆದರೆ ಇದ್ಯಾವುದೂ ಗೊತ್ತಿಲ್ಲದ ರಾಹುಲ್ ಗಾಂಧಿ(!) ಯವರು ಮಾತ್ರ ‘ಮೋದಿ ಏನು ಮಾಡಿದ್ದಾರೆ?’ ಎಂದು ಕೇಳುತ್ತಾ ಇರುತ್ತಾರೆ!

    (ಲೇಖಕರು ಸಂಸದರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು)

    ರೈಲ್ವೆ ಸ್ಟಾಲ್​ಗಳಲ್ಲಿ ಸಿಗಲಿದೆ ಕರೊನಾ ತಡೆ ಅಗತ್ಯವಸ್ತುಗಳು

    ಅನಿಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts