More

    ಕಾಳುಮೆಣಸಿನರಾಣಿ ಚೆನ್ನಭೈರಾದೇವಿ

    ಐವತ್ನಾಲ್ಕು ವರ್ಷ ರಾಜ್ಯವಾಳಿದ ಈ ದಿಟ್ಟ ಜಿನವನಿತೆಯನ್ನು ದುರದೃಷ್ಟವಶಾತ್ ಕರುನಾಡು ಮರೆತಿದೆ. ಹಾಡುವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ದಾಲ್ಚಿನ್ನಿ, ಕರಿಮೆಣಸನ್ನು ನಿರ್ಯಾತ ಮಾಡುತ್ತ, ತಾನು ಹುಟ್ಟಿದ ನಾಡಿಗೆ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿಕೊಟ್ಟ ಈಕೆ ಗೋವೆಯ ಪರಂಗಿಗಳು ಕಾಳಿ ನದಿಯನ್ನು ದಾಟಗೊಡದ ಧೀರೆ. ಅಂತಿಮವಾಗಿ ಇಕ್ಕೇರಿಯ ಸೆರೆಮನೆಯಲ್ಲಿ ಸಲ್ಲೇಖನದ ಮೂಲಕ ಪ್ರಾಣತ್ಯಾಗಗೈದವಳು. ಇವಳಷ್ಟು ಸುದೀರ್ಘ ಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿ ಅಖಂಡ ಭಾರತದ ಚರಿತ್ರೆಯಲ್ಲೇ ಇಲ್ಲ.

    ಕ್ರಿಸ್ತಶಕ 1552ರಿಂದ 1606ರವರೆಗೆ ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ಇಂದಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪೆಯಿಂದ, ಕೊಂಕಣ ಹೈವ ತುಳು ಪ್ರಾಂತ್ಯಗಳನ್ನಾಳಿದ ಸಾಳುವ ವಂಶದ ಚೆನ್ನಭೈರಾದೇವಿ ವೀರ ಜಿನವನಿತೆ. ತಾನು ಬದುಕಿದ್ದಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ದಕ್ಷಿಣ ಕೊಂಕಣಕ್ಕೆ ತಮ್ಮ ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದ ಪರಂಗಿಗಳ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತು ಇಂದಿನ ಉತ್ತರ ಕನ್ನಡವನ್ನು ಸಂರಕ್ಷಿಸಿದವಳು. ಪೋರ್ಚುಗೀಸರ ಜತೆಗೆ ‘ಅಗತ್ಯವಿದ್ದಲ್ಲಿ ಸ್ನೇಹ, ಅನಿವಾರ್ಯವಿದ್ದಲ್ಲಿ ಸಮರ’ ಎರಡಕ್ಕೂ ಸೈ ಎಂದವಳು. ರಾಜಕೀಯವಾಗಿ ಅವರನ್ನು ವಿರೋಧಿಸುತ್ತಲೇ ಅವರೊಂದಿಗೆ ಚಾಣಾಕ್ಷತೆಯಿಂದ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು, ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಬೆಲ್ಲ, ಬೆತ್ತ, ಗಂಧ, ಶುಂಠಿ, ದಂತವೇ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘ರೈನಾ ದ ಪಿಮೆಂಟಾ’ (ದಿ ಪೆಪ್ಪರ್ ಕ್ವೀನ್- ಕರಿಮೆಣಸಿನ ರಾಣಿ) ಎಂಬ ಬಿರುದು ಪಡೆದ ಮಹಾ ಮುತ್ಸದ್ದಿ. ಎಲ್ಲ ಧರ್ಮ, ಜಾತಿ, ಮತದವರನ್ನು ಒಳಗೊಂಡಂತೆ ಸುಸ್ಥಿರ ಆಡಳಿತ ನಡೆಸುವ ಧರ್ಮ ಸಮನ್ವಯತೆಗೆ ಆಕೆಯೊಂದು ಗಟ್ಟಿ ಉದಾಹರಣೆ. ಹಾಡುವಳ್ಳಿಯಲ್ಲಿ ಹುಟ್ಟಿದ ಈ ಹೆಣ್ಣುಮಗಳ ವಿದ್ಯಾಭ್ಯಾಸ ನಡೆದದ್ದು ಅದೇ ಹಳ್ಳಿಯ ಜೈನರ ಅಕಳಂಕ ಗುರುಕುಲದಲ್ಲಿ. ಬಾಲ್ಯದಲ್ಲಿ ಅವಳ ವ್ಯಕ್ತಿತ್ವವನ್ನು ರೂಪಿಸಿದವರು ಜೈನ ಗುರುಗಳು. ಆಡಳಿತದಲ್ಲಿ ಅವಳಿಗೆ ಮಾರ್ಗದರ್ಶನ ನೀಡಿ ರಾಜಕೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು ಹವ್ಯಕರು ಮತ್ತು ಸಾರಸ್ವತರು. ‘ಅವ್ವರಸಿ’ ಎಂದು ಪ್ರೀತಿ ಮತ್ತು ಗೌರವದಿಂದ ಆಕೆಯನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬೆಂಬಲಿಸಿದವರು ಗೊಂಡರು, ಖಾರ್ವಿಗಳು, ಬೆಸ್ತರು, ಹಾಲಕ್ಕಿಗಳು. ಆರಂಭದ ಅವಳ ವಾಣಿಜ್ಯ ವ್ಯವಹಾರಕ್ಕೆ ಬೆಂಬಲವಿತ್ತು ಮಧ್ಯಪ್ರಾಚ್ಯದ ಮಹ್ಮದೀಯರೊಂದಿಗೆ ವ್ಯಾವಹಾರಿಕ ಸಂಬಂಧ ಬೆಸೆಯಲು ನೆರವಾದವರು ಭಟ್ಕಳದ ನವಾಯಿತರು. ಇನ್ನು ಅವಳ ಪ್ರಜೆಗಳು ಜೈನರು, ಸಾರಸ್ವತರು, ದೈವಜ್ಞರು, ಬೆಸ್ತರು, ಮಡಿವಾಳರು, ಬ್ರಾಹ್ಮಣರು, ಹಾಲಕ್ಕಿಗಳು, ಗೊಂಡರು, ಮುಕ್ರಿಗಳು, ಖಾರ್ವಿ ಮುಂತಾಗಿ ಹತ್ತು ಹಲವು ಜಾತಿಗಳವರು. ಈ ಎಲ್ಲ ಜಾತಿ ಧರ್ಮಗಳ ಜತೆ ಸಾಮರಸ್ಯ ಕಾಪಾಡಿಕೊಂಡು, ಸಮಾನ ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ಒಳಗೊಂಡು ಐವತ್ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಪ್ರಜಾವತ್ಸಲಳಾಗಿ ಆಕೆ ರಾಜ್ಯಭಾರ ನಡೆಸಿದಳೆಂದರೆ ಅವಳ ಸರ್ವಧರ್ಮ ಸಮಭಾವ ಎಷ್ಟು ಗಟ್ಟಿ ಮತ್ತು ಪ್ರಭಾವಶಾಲಿಯಾಗಿದ್ದಿರಬೇಡ?!

    ಇಂದು ಲೋಕಾರ್ಪಣೆ: ಎರಡು ವರ್ಷದ ಹಿಂದೆ ತಮ್ಮ ಮೊದಲ ಕಾದಂಬರಿ ‘ಪುನರ್ವಸು’ವನ್ನು ಬಿಡುಗಡೆ ಮಾಡಿದ್ದ ಗಜಾನನ ಶರ್ಮಾ ಎರಡನೇ ಕಾದಂಬರಿ ‘ಚೆನ್ನಭೈರಾದೇವಿ’ಯನ್ನು ಇಂದು (ಫೆ. 25) ಲೋಕಾರ್ಪಣೆ ಮಾಡಲಿದ್ದಾರೆ. ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ಇದು ವರ್ಚುವಲ್ ಆಗಿ ಫೇಸ್​ಬುಕ್ ಲೈವ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.

    ಪ್ರವಾಸ, ಅಧ್ಯಯನದಿಂದ ರೂಪುಗೊಂಡ ಕೃತಿ

    ಕಾಳುಮೆಣಸಿನರಾಣಿ ಚೆನ್ನಭೈರಾದೇವಿಮೂರು ವರ್ಷಗಳ ಕಾಲ ನಡೆಸಿದ ಹಲವು ಗ್ರಂಥಗಳ ಅಧ್ಯಯನ, ತಜ್ಞರ ಭೇಟಿ, ಗೇರುಸೊಪ್ಪೆ, ಹಾಡುವಳ್ಳಿ, ಹೊಗೆವಡ್ಡಿ, ಕಾನೂರು ಕೋಟೆ, ಮಿರ್ಜಾನ, ಕಾಗಲ್ ಮುಂತಾಗಿ ಹತ್ತಾರು ಊರುಗಳ ಸುತ್ತಾಟ, ರಾಣಿ ಚೆನ್ನಭೈರಾದೇವಿ ಸಂಚರಿಸುತ್ತಿದ್ದ ಘಟ್ಟ ಕಣಿವೆಗಳ ಹಾದಿಗಳ ಕಾಲ್ನಡಿಗೆ, ಪ್ರಸ್ತುತ ಸೋದೆಯಲ್ಲಿರುವ ಹಾಡುವಳ್ಳಿಯ ಭಟ್ಟಾಕಳಂಕ ಶ್ರೀಮಠದ ಪರಂಪರೆಯ ಭಟ್ಟಾಕಳಂಕ ಭಟ್ಟಾಚಾರ್ಯರ ಸಂದರ್ಶನ, ಗೋಪಾಲರಾಯರಂತಹ ಹಿರಿಯ ಇತಿಹಾಸ ತಜ್ಞರೊಂದಿಗೆ ನಡೆಸಿದ ಚರ್ಚೆ, ಪೋರ್ಚುಗೀಸ್ ಸಾಹಿತ್ಯದ ಆಂಗ್ಲ ಅವತರಣಿಕೆಯ ಅಭ್ಯಾಸ ಮತ್ತು ಜೈನ, ಗೊಂಡ ಸಮುದಾಯದ ಸ್ಥಳೀಯ ಹಿರಿಯರ ಭೇಟಿ… ಇದೆಲ್ಲದರ ಒಟ್ಟೂ ಪರಿಣಾಮವಾಗಿ ಮನಸ್ಸಿನಲ್ಲಿ ಮೂಡಿದ ಚೆನ್ನಭೈರಾದೇವಿಯ ಮೂರ್ತಿಯನ್ನು ಅಕ್ಷರದಲ್ಲಿ ಕಟೆದು ನಿಲ್ಲಿಸಿದ್ದಾರೆ ಗಜಾನನ ಶರ್ವ. ಇದು ಆಕೆಯ ನೈಜ ಕತೆಯಲ್ಲ. ಅವಳ ಜೀವನ ಚರಿತ್ರೆಯೂ ಅಲ್ಲ. ಆ ಕಾಲದ ಹಲವು ಸತ್ಯಘಟನೆಗಳನ್ನು ಆಧರಿಸಿ, ದೇಶಕಾಲಗಳಿಗೆ ಅನ್ವಯವಾಗುವಂತೆ ಹೆಣೆದ ಕಾಲ್ಪನಿಕ ಚಿತ್ರಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts