More

    ವಾಜಪೇಯಿ ನಿಜಾರ್ಥದಲ್ಲಿ ವಿಶ್ವಮಾನವ; ಇಂದು ಅಟಲ್ ಜನ್ಮದಿನ

    ವಾಜಪೇಯಿ ನಿಜಾರ್ಥದಲ್ಲಿ ವಿಶ್ವಮಾನವ; ಇಂದು ಅಟಲ್ ಜನ್ಮದಿನಅಟಲ್ ಬಿಹಾರಿ ವಾಜಪೇಯಿ ಕೇವಲ ಅಜಾತಶತ್ರುವಲ್ಲ, ನಿಜಾರ್ಥದಲ್ಲಿ ವಿಶ್ವಮಾನವ ಎಂಬುದಕ್ಕೆ ಅವರ ನಡೆ, ನುಡಿಯೇ ಸಾಕ್ಷಿ. ಅತ್ಯಂತ ಸರಳ ಜೀವನಶೈಲಿ ಅಳವಡಿಸಿಕೊಂಡಿದ್ದ ವಾಜಪೇಯಿ ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಸಂಘಟನೆಗೆ ನಿಷ್ಠರಾಗಿದ್ದ ಅವರು, ಅನೇಕ ಸಂದರ್ಭದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯದ ನಡುವೆಯೂ ಸಂಘಟನೆಯ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿದ್ದರು.

    ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದ ವಾಜಪೇಯಿ ಅವರನ್ನು ನೆನಪಿಸಿಕೊಂಡಾಗಲೆಲ್ಲ ಅನೇಕ ಘಟನೆಗಳು ಮನಸ್ಸಿನಲ್ಲಿ ಸುಳಿದಾಡುತ್ತವೆ. ಅಂತಹ ಕೆಲ ಸಂದರ್ಭಗಳನ್ನು ಇಲ್ಲಿ ಮೆಲುಕು ಹಾಕುವ ಮೂಲಕ ಅವರ ವ್ಯಕ್ತಿತ್ವ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

    ಮನುಷ್ಯತ್ವ ಇರುವ ಮನುಷ್ಯ: ಒಮ್ಮೆ ಅವರು ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಉಳಿದಿದ್ದರು. ಆಗ ಬಿ.ಎಸ್. ಯಡಿಯೂರಪ್ಪ ಇಲ್ಲಿ ಪ್ರತಿಪಕ್ಷದ ನಾಯಕರು. ಇಡೀ ರಾತ್ರಿ ವಿದ್ಯುತ್ ಇರಲಿಲ್ಲ. ವಾಜಪೇಯಿ ದೆಹಲಿಗೆ ಹೋಗಲು ಬೆಳಗ್ಗೆ ಬೇಗ ಎದ್ದಾಗ ಸಹ ಕರೆಂಟ್ ಬಂದಿರಲಿಲ್ಲ. ಮೋಂಬತ್ತಿಯ ಬೆಳಕಿನಲ್ಲಿ ಶೇವಿಂಗ್ ಮುಗಿಸಿ ತಣ್ಣೀರಿನ ಸ್ನಾನ ಮಾಡಿದ ಅವರು ಏರ್​ಪೋರ್ಟ್​ಗೆ ಹೊರಟಾಗ ಅಲ್ಲಿದ್ದ ನಮ್ಮನ್ನು ಕರೆದು, ‘ಈ ಬಗ್ಗೆ ಯಾರಿಗೂ ದೂರು ಹೇಳಬೇಡಿ, ವಿಪಕ್ಷ ದೂರು ಹೇಳಿದರೆ ಅಧಿಕಾರಿಗೆ ಶಿಕ್ಷೆಯಾಗುತ್ತದೆ. ನಮ್ಮಿಂದ ಅಧಿಕಾರಿ ಅಥವಾ ಸಿಬ್ಬಂದಿ ಶಿಕ್ಷೆಗೆ ಒಳಗಾಗಬಾರದು. ವಿದ್ಯುತ್ ಸಮಸ್ಯೆ ಬಗ್ಗೆ ಹೋರಾಟ ರೂಪಿಸಿ’ ಎಂಬ ಕಿವಿಮಾತು ಹೇಳಿದರು. ಕೆಳಹಂತದ ಸಿಬ್ಬಂದಿ ಬಗ್ಗೆಯೂ ಇಷ್ಟೊಂದು ಕಾಳಜಿ ತೋರಿಸಿದ ಅವರು ನಿಜಕ್ಕೂ ಮನುಷ್ಯತ್ವ ಇರುವ ಮನುಷ್ಯ.

    ಅಭಿಮಾನಿಗಳೆಂದರೆ ಪ್ರೀತಿ: ಬೆಂಗಳೂರಿನ ಅಭಿಮಾನಿ ಯೊಬ್ಬರು ವಾಜಪೇಯಿ ಅವರೊಂದಿಗೆ ಪೋಟೋ ತೆಗೆಸಿಕೊಳ್ಳಲು ಬಂದರು. ನಾನು ಹೋಗಿ ಹೇಳಿದಾಗ ‘ಬುಲಾವೊ’ ಎಂದರು. ಒಳಬಂದ ಅಭಿಮಾನಿ ಅವರಿಗೆ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ತಕ್ಷಣ ಅವರು ತಮಾಷೆಯಾಗಿ ‘ನಮ್ಮ ಮನೆಯಲ್ಲಿ ಇಲಿಗೂ ಜಾಗವಿಲ್ಲದಷ್ಟು ಗಣೇಶನ ಮೂರ್ತಿಗಳಿವೆ’ ಎಂದರು. ಯಾರೇ ಏನೇ ಕೊಟ್ಟರೂ ಅವರು ತಿರಸ್ಕರಿಸುತ್ತಿರಲಿಲ್ಲ. ಅದನ್ನು ಜೋಪಾನವಾಗಿ ದೆಹಲಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅಭಿಮಾನಿಗಳ ಬಗ್ಗೆ ಅವರಿಗೆ ಇದ್ದ ಪ್ರೀತಿ ಅದು.

    ಪ್ರತಿಪಕ್ಷಗಳ ಬಗ್ಗೆ ಗೌರವ: ಆಗ ಆಡ್ವಾಣಿ ಬಿಜೆಪಿ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧಿವೇಶನ ಇತ್ತು. ಸಮಾರೋಪದಲ್ಲಿ ಆಡ್ವಾಣಿ ಅಧ್ಯಕ್ಷೀಯ ಭಾಷಣ ಮಾಡಬೇಕಾಗಿತ್ತು. ಮುದ್ರಿಸಿದ್ದ ಭಾಷಣದ ಪ್ರತಿಯನ್ನು ನಾವು ಅವರಿಗೆ ಕೊಟ್ಟೆವು. ಅಲ್ಲಿ ವಾಜಪೇಯಿ, ಮುರಳಿ ಮನೋಹರ ಜೋಷಿ ಇದ್ದರು. ಆಡ್ವಾಣಿಯವರು ಭಾಷಣದ ಪ್ರತಿಯನ್ನು ವಾಜಪೇಯಿಗೆ ಕೊಟ್ಟು ಒಮ್ಮೆ ಓದುವಂತೆ ಹೇಳಿದರು. ಭಾಷಣದಲ್ಲಿ ಒಂದು ಕಡೆ ರಾಜೀವ್ ಗಾಂಧಿ ಹೆಸರಿತ್ತು. ತಕ್ಷಣ ವಾಜಪೇಯಿ, ‘ಯಾವುದೇ ವ್ಯಕ್ತಿಯ ಹೆಸರು ಹೇಳಬೇಡಿ, ಅದರ ಬದಲು ಕಾಂಗ್ರೆಸ್ ಎನ್ನಿ, ಪ್ರತಿಪಕ್ಷಗಳೆಂದರೆ ನಮಗೆ ವೈರಿಗಳಲ್ಲ’ ಎಂದಿದ್ದನ್ನು ಕೇಳಿ ಅಲ್ಲಿದ್ದವರೆಲ್ಲ ಆಶ್ಚರ್ಯಚಕಿತರಾದರು. ನೆರೆರಾಷ್ಟ್ರಗಳ ಜತೆಯೂ ಉತ್ತಮ ಸಂಬಂಧ ಹೊಂದಿರಬೇಕು ಎಂಬ ಆಸೆ ಅವರಿಗಿತ್ತು. ಅವರು ಪ್ರಧಾನಿಯಾಗಿದ್ದಾಗ ಅದನ್ನು ಕಂಡಿದ್ದೇವೆ.

    ಅಧಿಕಾರಕ್ಕಿಂತ ಪಕ್ಷ ಮುಖ್ಯ: 1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಮ್ಮ ಪಕ್ಷಕ್ಕೆ ಸರ್ಕಾರದಲ್ಲಿ ಸೇರುವ ಅವಕಾಶ ಇತ್ತು. ಆದರೆ ವಾಜಪೇಯಿ ಹೊರಗಿನಿಂದ ಬೆಂಬಲವೆಂಬ ನಿರ್ಧಾರ ಪ್ರಕಟಿಸಿದರು. ಇಲ್ಲಿನ ಅನೇಕರು ಅಸಮಾಧಾನಗೊಂಡರು. ಆಗ ವಾಜಪೇಯಿ ಹೇಳಿದ್ದು, ‘ನಾವು ಈಗಲೇ ಅಧಿಕಾರದಲ್ಲಿ ಸೇರಿದರೆ ಪಕ್ಷ ಬೆಳೆಯುವುದಿಲ್ಲ. ಮೊದಲು ಪಕ್ಷ ಬೆಳೆಸುವ ಕಡೆ ಗಮನ ಹರಿಸಿ’. ಕೇಂದ್ರದಲ್ಲಿ ವಿ.ಪಿ. ಸಿಂಗ್ ಸರ್ಕಾರಕ್ಕೂ ಬಾಹ್ಯ ಬೆಂಬಲ ನೀಡಿದ್ದರು. ಪಕ್ಷ ಬೆಳೆಯಬೇಕೇ ಹೊರತು ಅಧಿಕಾರ ಮುಖ್ಯವಲ್ಲ ಎಂಬುದು ಅವರ ದೂರದೃಷ್ಟಿ.

    ಕಮಲದ ಬಗ್ಗೆ ವ್ಯಾಖ್ಯಾನ: ಪಕ್ಷಕ್ಕೆ ಕಮಲ ಚಿಹ್ನೆ ಸಿಕ್ಕಿದ ಬಗ್ಗೆ ತಮ್ಮದೇ ಸಾಹಿತ್ಯದ ಮೂಲಕ ವಿವರಿಸುತ್ತಿದ್ದರು. ‘ನಮ್ಮ ದೇಶದ ಎಲ್ಲ ಭಾಷೆಯ ಸಾಹಿತ್ಯದಲ್ಲಿಯೂ ಕಮಲದ ವರ್ಣನೆ ಇದೆ. ನಾವು ಚಿಕ್ಕವರಿದ್ದಾಗ ಕಮಲ ಅರಳುವುದನ್ನು ನೋಡಿ ಸಂತಸ ಪಡುತ್ತಿದ್ದೆವು. ಕೆಸರಿನ ಬಗ್ಗೆ ಕೀಳರಿಮೆ ಇರಬಾರದು. ಅದನ್ನು ಹೇಳುತ್ತಲೆ ನಾವು ಜನಸಾಮಾನ್ಯರಿಗೆ ಹತ್ತಿರವಾಗಬೇಕು’ ಎಂದು ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.

    ರಸ್ತೆಬದಿ ತಿನಿಸು ಇಷ್ಟ: ಒಮ್ಮೆ ಅವರನ್ನು ಅಶೋಕ ಹೋಟೆಲ್​ನಲ್ಲಿ ಇರಿಸಿದ್ದೆವು. ಊಟಕ್ಕೆ ಕೂತಾಗ ಅವರು ಹೇಳಿದ್ದು, ‘ದೊಡ್ಡ ಹೋಟೆಲ್​ಗಳಲ್ಲಿ ಮಾನವೀಯತೆ ಇರಲ್ಲ, ಇಲ್ಲಿ ವ್ಯಾವಹಾರಿಕ ದೃಷ್ಟಿ ಇರುತ್ತದೆ. ನನಗೆ ಇಲ್ಲಿಗಿಂತ ರಸ್ತೆಬದಿಯ ತಿಂಡಿ ತಿನಿಸು ಇಷ್ಟ. ಅಲ್ಲಿ ಪ್ರೀತಿ ವಿಶ್ವಾಸ ಇರುತ್ತದೆ. ಇನ್ನೊಮ್ಮೆ ಬಂದಾಗ ಕುಮಾರಕೃಪಾದಲ್ಲಿಯೇ ಉಳಿಸಿ. ಭಾವನೆಗಳು ಮುಖ್ಯವೇ ಹೊರತು ಅದ್ದೂರಿತನ ಬೇಡ’ ಎಂದಾಗ ಅವರ ಸರಳತನಕ್ಕೆ ಶರಣಾದೆವು. ಅವರಿಗೆ ಬೆಂಗಳೂರಿನ ಎಂಟಿಆರ್ ಮತ್ತು ಜನಾರ್ದನ ಹೋಟೆಲ್ ಮಸಾಲೆ ದೋಸೆ ಹಾಗೂ ರವಾ ಇಡ್ಲಿ ಅತ್ಯಂತ ಪ್ರಿಯ. ಬೆಂಗಳೂರಿಗೆ ಬಂದಾಗ ಕೇಳಿ ತರಿಸಿಕೊಂಡು ತಿನ್ನುತ್ತಿದ್ದರು.

    ಕಾರ್ಯಕರ್ತರ ಬಗ್ಗೆ ಪ್ರೀತಿ: 1984ರಲ್ಲಿ ಅವರು ಸೋತಾಗ ಭದ್ರಾವತಿಯಲ್ಲಿ ಲಕ್ಷ್ಮೀನಾರಾಯಣ ಎಂಬ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ. ವಿಷಯ ತಿಳಿದು ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದರು. ಬೆಂಗಳೂರಿನಲ್ಲಿ ಒಬ್ಬ ಕಾರ್ಯಕರ್ತನಿಗೆ ನಾಲಿಗೆ ಕ್ಯಾನ್ಸರ್. ಆತ ವಾಜಪೇಯಿ ಭಾಷಣ ಎಲ್ಲಿಯೇ ಇದ್ದರೂ ಮೊದಲ ಸಾಲಿನಲ್ಲಿ ಕೂತು ಕೇಳುತ್ತಿದ್ದ. ಅವನ ಬಗ್ಗೆ ಮಾಹಿತಿ ಪಡೆದ ವಾಜಪೇಯಿ ಆತನ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದ್ದರು.

    ಖಡಕ್ ತೀರ್ಮಾನ: ವಾಜಪೇಯಿ ಮೃದುಹೃದಯಿ. ಆದರೆ ಆಡಳಿತದ ವಿಷಯದಲ್ಲಿ ಖಡಕ್ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ತಮ್ಮ ಉತ್ತಮ ಸ್ನೇಹಿತರಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು 1998ರಲ್ಲಿ ಸಂಪುಟಕ್ಕೆ ಸೇರಿಸಿಕೊಂಡರು. ಆದರೆ ಅವರ ಸಾಧನೆ ಹೇಳಿಕೊಳ್ಳುವಂತಿರದ ಕಾರಣ 1999ರಲ್ಲಿ ಕೈ ಬಿಟ್ಟರು. ಈ ಬಗ್ಗೆ ಅನೇಕರು ವಿಚಾರಿಸಿದಾಗ ಅವರು ಹೇಳಿದ್ದು ‘ಸ್ನೇಹ ಬೇರೆ, ಆಡಳಿತ ಬೇರೆ’ ಎಂಬ ಒಂದೇ ಸಾಲಿನ ಉತ್ತರ. ಅದೇ ರೀತಿಯಲ್ಲಿ ಅವರು ತಮ್ಮ ಆಪ್ತ ಪ್ರಮೋದ್ ಮಹಾಜನ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು.

    ಸಂಘನಿಷ್ಠ: ಎಷ್ಟೇ ನಿಷ್ಠುರವಾದಿಯಾಗಿ ಸ್ಪಷ್ಟ ತೀರ್ವನಗಳನ್ನು ತೆಗೆದುಕೊಂಡರೂ ಅವರೊಬ್ಬ ಸಂಘದ ಕಟ್ಟಾನಿಷ್ಠ. ಸಂಘಟನೆಯ ಮಾತನ್ನು ಯಾವತ್ತೂ ತೆಗೆದು ಹಾಕಿದವರಲ್ಲ. ಆಡ್ವಾಣಿ ರಥಯಾತ್ರೆ ತಡೆದ ಕಾರಣಕ್ಕೆ ವಿ.ಪಿ. ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಲು ನಿರ್ಧರಿಸಲಾಗಿತ್ತು. ಅದು ವಾಜಪೇಯಿಗೆ ಇಷ್ಟ ಇರಲಿಲ್ಲ. ಆದರೆ ಸಂಘಟನೆಯ ನಿರ್ಧಾರಕ್ಕೆ ಒಪ್ಪಿದರು. ಗುಜರಾತ್​ನ ಗೋಧ್ರಾ ಘಟನೆಯ ನಂತರ, ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸಲು ವಾಜಪೇಯಿ ತೀರ್ವನಿಸಿದ್ದರು. ಆದರೆ ಸಂಘಟನೆ ಒಪ್ಪದ ಕಾರಣ ರಾಜಧರ್ಮದ ಮಾತು ಹೇಳಿ ಸುಮ್ಮನಾದರು. ಅವರು ತಮ್ಮ ಆತ್ಮೀಯರ ಬಳಿ ಹೇಳಿದ್ದು, ‘ನಾವೊಂದು ಕುಟುಂಬ ಇದ್ದಂತೆ. ನಿರ್ಧಾರ ಒಂದೇ ಇರಬೇಕು. ಇಲ್ಲದಿದ್ದರೆ ಸಣ್ಣವರು ನಮ್ಮನ್ನು ನೋಡಿ ಟೀಕೆ ಮಾಡುವಂತಾಗುತ್ತದೆ’. ಎಂಥ ದೊಡ್ಡ ಮಾತು!. ಯಾವುದೇ ವಿಷಯವನ್ನು ಚರ್ಚೆಗೆ ಬಿಟ್ಟು ಅಲ್ಲಿ ಬರುವ ಅಭಿಪ್ರಾಯಗಳ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು.

    ಜಗತ್ತಿಗೆ ಗುರು: ರಾಜ್ಯದ ದೊಡ್ಡ ಸಮುದಾಯದ ಸ್ವಾಮೀಜಿಯೊಬ್ಬರು ಕಾರ್ಯಕ್ರಮವೊಂದಕ್ಕೆ ಅವರನ್ನು ಆಹ್ವಾನಿಸಲು ಹೋಗಿದ್ದರು. ಅನಂತಕುಮಾರ್ ಅವರು ಜಗದ್ಗುರು ಬಂದಿರುವ ವಿಚಾರ ತಿಳಿಸಿದರು. ಹಾಸ್ಯಪ್ರಜ್ಞೆಯ ವಾಜಪೇಯಿ, ‘ಒಂದು ಜಗತ್ತಿಗೆ ಎಷ್ಟು ಜಗದ್ಗುರುಗಳು’ ಎಂದು ಉದ್ಗರಿಸಿದ್ದರು. ವಾಜಪೇಯಿ ಸದಾ ಆಶಾವಾದಿಯಾಗಿದ್ದರು. ‘ನ್ಯ ದೈನಂ ನ ಪಲಾಯನಂ’ ಎಂಬ ಮಾತನ್ನು ಹೇಳುತ್ತಿದ್ದರು. ‘ಭಗವಾನ್ ಕೇ ಘರ್ ಮೇ ದೇರ್ ಹೈ, ಅಂಧೇರ್ ನಹೀ…’ (ದೇವರ ಮನೆಯಲ್ಲಿ ನ್ಯಾಯ ಸಿಗಲು ವಿಳಂಬವಾಗಬಹುದು, ಆದರೆ ಕತ್ತಲೆ ಇಲ್ಲ, ಭವಿಷ್ಯವಿದೆ) ಎನ್ನುತ್ತ ಹುರಿದುಂಬಿಸುತ್ತಿದ್ದರು.

    ಅಟಲ್ ಮತ್ತು ಆಡ್ವಾಣಿ

    ಆಡ್ವಾಣಿ ಹಾಗೂ ವಾಜಪೇಯಿ ನಡುವೆ ಆಪ್ತಸ್ನೇಹವಿತ್ತು. ಪಕ್ಷದ ಸಂಘಟನೆಯಲ್ಲಿ ಒಬ್ಬರ ಕೈ ಕೆಳಗೆ ಮತ್ತೊಬ್ಬರು ಕೆಲಸ ಮಾಡಿದ್ದಾರೆ. 1991ರ ಚುನಾವಣೆಯಲ್ಲಿ ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳು ಆಡ್ವಾಣಿ ಅವರಿಗೆ ‘ನಿಮ್ಮ ಪ್ರಧಾನಿ ಯಾರು’ ಎಂಬ ಪ್ರಶ್ನೆ ಮುಂದಿಟ್ಟಾಗ, ಅವರು ವಾಜಪೇಯಿ ಹೆಸರು ಹೇಳಿದ್ದರು. ಅದೇ ಸಂದರ್ಭದಲ್ಲಿ ಲಖನೌದಲ್ಲಿ ವಾಜಪೇಯಿಗೂ ಇದೇ ಪ್ರಶ್ನೆ ಕೇಳಲಾಗಿತ್ತು. ಅವರು, ‘ಪಕ್ಷ ಸಂಘಟನೆಯಲ್ಲಿ ಆಡ್ವಾಣಿ ಕೊಡುಗೆ ಇರುವುದರಿಂದ ಅವರೇ ನಮ್ಮ ಪ್ರಧಾನಿ’ ಎಂದು ಉತ್ತರಿಸಿದ್ದರು. ಕೊನೆಗಾಲದಲ್ಲಿ ವಾಜಪೇಯಿ ಅವರಿಗೆ ಏನೂ ಗೊತ್ತಾಗುತ್ತಿರಲಿಲ್ಲ. ಆಗ ಅವರು ಆಡ್ವಾಣಿಯವರನ್ನು ಮಾತ್ರ ಗುರುತಿಸುತ್ತಿದ್ದರಂತೆ. ತಿಂಗಳಿಗೆ ಒಂದೆರಡು ಬಾರಿ ವಾಜಪೇಯಿ ಮನೆಗೆ ಹೋಗಿ ಬರುತ್ತಿದ್ದರಂತೆ ಆಡ್ವಾಣಿ.

    ಅನಂತ ಪ್ರೇರಣೆ

    ವಾಜಪೇಯಿ ನಿಧನರಾದಾಗ ಅನಂತಕುಮಾರ್ ಕ್ಯಾನ್ಸರ್​ಗೆ ತುತ್ತಾಗಿ ಆಸ್ಪತ್ರೆಯ ಐಸಿಯುನಲ್ಲಿ ಇದ್ದರು. ವೈದ್ಯರು ಎಷ್ಟೇ ಹೇಳಿದರೂ ಕೇಳದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಚಿತಾಭಸ್ಮ ತಂದು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿದರು. ಆ ಸಂದರ್ಭದಲ್ಲಿ ಅವರು ಪತ್ನಿ ತೇಜಸ್ವಿನಿ ಬಳಿಯಲ್ಲಿ ಹೇಳಿದ್ದು, ‘ನಾನು ಏನಾದರೂ ಆಗಿದ್ದರೆ ಅದಕ್ಕೆ ಅಟಲ್​ಜೀ ಕಾರಣ’. ಇಂತಹ ಅನೇಕರನ್ನು ಗುರುತಿಸಿ ಬೆಳೆಸಿದ್ದು ವಾಜಪೇಯಿ. ಅದು ಅವರ ಹಿರಿಮೆ ಮತ್ತು ಶಕ್ತಿ.

    ಬಿಎಸ್​ವೈ ಬಗ್ಗೆ ಪ್ರೀತಿ

    ಬಿ.ಎಸ್. ಯಡಿಯೂರಪ್ಪ ಬಗ್ಗೆ ವಾಜಪೇಯಿಗೆ ಎಲ್ಲಿಲ್ಲದ ಪ್ರೀತಿ. ಯಡಿಯೂರಪ್ಪ ಅವರ 62ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳ ಲಾಗಿತ್ತು. ಅದಕ್ಕೆ ವಾಜಪೇಯಿ ಅತಿಥಿ. ಅನೇಕರು ಕಾರ್ಯಕ್ರಮಕ್ಕೆ ಹೋಗದಂತೆ ಒತ್ತಡ ತಂದಿದ್ದರು. ಆದರೆ ಒಪ್ಪದ ವಾಜಪೇಯಿ, ‘ಕರ್ನಾಟಕದಲ್ಲಿ ಪಕ್ಷ ಸಂಘಟನೆಯಾಗಿ ಕಮಲ ಅರಳಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಕಾರಣ, ನಾನು ಹೋಗಿಯೇ ಹೋಗುತ್ತೇನೆ’ ಎಂದು ಕಾರ್ಯಕ್ರಮಕ್ಕೆ ಬಂದು ಆಶೀರ್ವಾದ ಮಾಡಿದ್ದರು.

    (ಲೇಖಕರು ಬಿಜೆಪಿಯ ಹಿರಿಯ ಕಾರ್ಯಕರ್ತರು)

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts