More

    ಮತಗಟ್ಟೆಗಳ ಬಳಿ ಮೆಡಿಕಲ್ ಕಿಟ್‌ಗೆ ವ್ಯವಸ್ಥೆ: ತುಷಾರ್ ಗಿರಿನಾಥ್ ಸೂಚನೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಮತಗಟ್ಟೆಗಳ ಬಳಿ ಮೆಡಿಕಲ್ ಕಿಟ್ ಹಾಗೂ ತುರ್ತು ಕ್ರಮಕ್ಕಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ಮಂಗಳವಾರ ನಡೆದ ಚುನಾವಣಾ ಸಂಬಂಧ ಸಭೆಯಲ್ಲಿ ಮಾತನಾಡಿದ ಅವರು, ಬಿಸಿಲ ಹಿನ್ನೆಲೆಯಲ್ಲಿ ಮತದಾರರ ಆರೈಕೆಗೆ ಈ ಉಪಕ್ರಮ ಕೈಗೊಳ್ಳಲಾಗಿದೆ. ಜತೆಗೆ ಮತದಾರರ ಅನುಕೂಲಕ್ಕಾಗಿ ಸ್ಥಾಪಿಸಲಾಗುವ ಹೆಲ್ಪ್ ಡೆಸ್ಕ್‌ಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಮತಗಟ್ಟೆಗಳಿಗೆ ಅಂಗವಿಕಲರು ಮತದಾನ ಮಾಡಲು ಬರುವುದರಿಂದ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗುವುದು. ಅಂಗವಿಕಲರನ್ನು ಕರೆದೊಯ್ಯಲು ಸ್ವಯಂ ಸೇವಕರನ್ನು ಕೂಡ ನಿಯೋಜನೆ ಮಾಡುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಮತದಾರರ ಸೇವಾ ಕೇಂದ್ರ:

    ನಗರದಲ್ಲಿ 3ಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಸ್ಥಳಗಳಲ್ಲಿ ಮತದಾರರಿಗೆ ಅನುಕೂಲ ಕಲ್ಪಿಸಲು ಮತದಾರರ ಸೇವಾ ಕೇಂದ್ರ ಹಾಗೂ ಮತಗಟ್ಟೆಯ ಎಲ್ಲ ಮಾಹಿತಿಯುಳ್ಳ ನಿರ್ದೇಶನ ಫಲಕಗಳನ್ನು ಅಳವಡಿಸಲಾಗುತ್ತದೆ. ನಗರದಲ್ಲಿ 1,409 ಕಡೆ 3ಕ್ಕಿಂತ ಹೆಚ್ಚು ಮತಗಟ್ಟೆಗಳು ಬರಲಿವೆ. ಜತೆಗೆ ಮಾಡಲ್ ಲೇಔಟ್ ಯೋಜನೆ ರೂಪಿಸಿ ಮತಗಟ್ಟೆಗಳ ಸ್ಥಳದಲ್ಲಿ ಏನೆಲ್ಲಾ ವ್ಯವಸ್ಥೆ ಇರಬೇಕೋ ಅವುಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

    ವಿವಿಧ ಮಾದರಿಯ ಮತಗಟ್ಟೆ ಸ್ಥಾಪನೆ:

    ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಸಾಮಾನ್ಯ ಮತಗಟ್ಟೆಗಳ ಜೊತೆಗೆ ಸಖಿ ಮತಗಟ್ಟೆ, ಯೂತ್ ಮತಗಟ್ಟೆ, ಥೀಮ್ ಆಧಾರಿತ ಮತಗಟ್ಟೆ, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

    ಸಭೆಯಲ್ಲಿ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಕಾಂತರಾಜು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್, ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts