More

    ಕಚೇರಿಯ ನೋಟಿಸ್​ ಬೋರ್ಡ್​ಗೆ ವಿವಾಹ ಮಾಹಿತಿ ಲಗತ್ತಿಸಿ

    ಜಿಲ್ಲಾ ಶ್ರೀರಾಮ ಸೇನೆ ಕರ್ನಾಟಕ ಆಗ್ರಹ | ಉಪನೋಂದಣಾಧಿಕಾರಿಗೆ ಮನವಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಅಂತರ್​ ಧರ್ಮೀಯ ವಿವಾಹ ನೋಂದಣಿ ಸಂದರ್ಭದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಕರ್ನಾಟಕದ ಉಡುಪಿ ಜಿಲ್ಲಾ ಘಟಕವು ಹಿರಿಯ ಉಪನೋಂದಣಾಧಿಕಾರಿ ಫಣೀಂದ್ರ ಎಚ್​.ಕೆ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

    ವಿವಾಹ ನೋಂದಣಿ ಮಾಡುವ 20 ದಿನ ಮೊದಲು ವಿವಾಹ ಆಗುವವರ ಸಂಪೂರ್ಣ ಮಾಹಿತಿಯನ್ನು ಕಚೇರಿಯ ನೋಟಿಸ್​ ಬೋರ್ಡ್​ಗೆ ಹಾಕುವ ಮೂಲಕ ಸಮಾಜದಲ್ಲಿ ಮುಂದೆ ಘಟಿಸುವ ಅನಾಹುತ ತಪ್ಪಿಸಬೇಕು ಎಂದು ವಿನಂತಿಸಿದರು.

    ಕಾನೂನು ಉಲ್ಲಂಘನೆ

    ಮನವಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಮ್​ ಅಂಬೆಕಲ್ಲು ಮಾತನಾಡಿ, ಇತ್ತೀಚೆಗೆ ಅಂತರ್​ ಧರ್ಮೀಯ ವಿವಾಹವು ಕೋಮು ಸ್ವರೂಪ ಪಡೆಯುತ್ತಿದೆ. ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವಂತಹ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಿಸದೆ, ವಿವಾಹವಾಗುವವರ ಮಾಹಿತಿಯ ಪ್ರತಿಯನ್ನೂ ಕಚೇರಿಯ ನೋಟಿಸ್​ ಬೋರ್ಡ್​ಗೆ ಲಗತ್ತಿಸದೆ ವಿವಾಹ ಮಾಡುತ್ತಿದ್ದಾರೆ. ಇದು ಮತಾಂತರ ತಡೆ ಕಾಯ್ದೆ -2022ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

    ದೇಶದಲ್ಲಿ ನೂರಾರು ಹತ್ಯೆ

    ಲವ್​ ಜಿಹಾದ್​ ವಿರೋಧಿಸಿ ರಾಜ್ಯದಲ್ಲಿ 2009ರಲ್ಲಿ ಪ್ರಥಮ ಬಾರಿಗೆ ಶ್ರೀರಾಮ ಸೇನೆ ಧ್ವನಿ ಎತ್ತಿತು. ಒಂದಿಷ್ಟು ಲವ್​ ಜಿಹಾದ್​ ಪ್ರಕರಣ ತಡೆದು ಕೆಲ ಕುಟುಂಬ ನೆಮ್ಮದಿಯಿಂದ ಇರುವಂತೆ ಮಾಡಿದ್ದೇವೆ. 2023ರಲ್ಲಿ ರಾಜ್ಯದಲ್ಲಿ 53 ಲವ್​ ಜಿಹಾದ್​ ಹತ್ಯೆ ನಡೆದಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಹೀಗಾಗಿ ವಿವಾಹ ನೋಂದಣಿ ಕಚೇರಿಗಳಲ್ಲಿ ಕಾನೂನು ಪಾಲನೆ ಆಗಲೇಬೇಕಿದೆ ಎಂದು ಒತ್ತಾಯಿಸಿದರು.

    ಜಿಲ್ಲಾ ವಕ್ತಾರ ಶರತ್​ ಪೂಜಾರಿ, ಪ್ರ.ಕಾರ್ಯದರ್ಶಿ ಸುದರ್ಶನ ಕಪ್ಪೆಟ್ಟು, ಜಿಲ್ಲಾ ಕಾರ್ಯದರ್ಶಿ ವಿಕ್ರಂ ವಿ., ಸಂಪರ್ಕ ಪ್ರಮುಖ್​ ಸುಜಿತ್​ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್​ ನಿಟ್ಟೂರು ಉಪಸ್ಥಿತರಿದ್ದರು.

    24×7 ಸಹಾಯವಾಣಿ ಆರಂಭ

    ಲವ್​ ಜಿಹಾದ್​ ನಿಯಂತ್ರಣಕ್ಕಾಗಿ ಶ್ರೀರಾಮ ಸೇನೆ ವತಿಯಿಂದ ಮೇ 29ರಂದು ಟೋಲ್​ ಫ್ರೀ ಸಹಾಯವಾಣಿ ಆರಂಭಿಸಲಾಗುತ್ತಿದೆ. ಹುಬ್ಬಳ್ಳಿಯನ್ನು ಕೇಂದ್ರ ಘಟಕವನ್ನಾಗಿಸಿಕೊಂಡು ಬೆಂಗಳೂರು, ದಾವಣಗೆರೆ, ಮಂಗಳೂರು, ಗುಲ್ಬರ್ಗಾ ಮತ್ತು ಯಾದಗಿರಿಯಲ್ಲಿ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದು ಜಯರಾಮ್​ ಅಂಬೆಕಲ್ಲು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts