More

    ಇಂಗ್ಲಿಷ್‌ ಮೀಡಿಯಂ ಬೇಕೆ? ಮಾತೃಭಾಷೆಯೇ ಸಾಕೆ? ಆಂಗ್ಲ ಮಾಧ್ಯಮ ಬೇಕೆಂದ ಆಂಧ್ರಪ್ರದೇಶಕ್ಕೆ ಹೈಕೋರ್ಟ್‌ ಹೇಳಿದ್ದೇನು?

    ಅಮರಾವತಿ (ಆಂಧ್ರ ಪ್ರದೇಶ): ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮಟ್ಟದಲ್ಲಿಯೇ ಇಂಗ್ಲಿಷ್‌ ಮೀಡಿಯಂ ಬೇಕೆ? ಮಾತೃಭಾಷೆಯೇ ಸಾಕೆ? ಎಂಬ ಬಗೆಗಿನ ಚರ್ಚೆ ಇಂದು ನಿನ್ನೆಯದ್ದಲ್ಲ. ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹಲವು ವರ್ಷಗಳಿಂದ ಈ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

    ಈ ನಡುವೆಯೇ ಆಂಧ್ರ ಪ್ರದೇಶದ ಹೈಕೋರ್ಟ್‌ನಿಂದ ಮಹತ್ವದ ಆದೇಶ ಹೊರಬಂದಿದೆ. ಇಂಗ್ಲಿಷ್‌ ಮೀಡಿಯಂ ಅನ್ನು ತನ್ನ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸುವ ಸಂಬಂಧ ಆಂಧ್ರಪ್ರದೇಶ ಸರ್ಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿದೆ.

    ‘ಒಂದರಿಂದ ಆರನೇ ತರಗತಿ ಅಥವಾ ಒಂದರಿಂದ 8ನೇ ತರಗತಿಯವರೆಗೆ ತನ್ನ ಎಲ್ಲಾ ತೆಲಗು ಮೀಡಿಯಂ ಶಾಲೆಗಳನ್ನು ಇಂಗ್ಲಿಷ್‌ ಮೀಡಿಯಂ ಶಾಲೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಚಿಂತನೆ ನಡೆಸಿರುವುದು ಶಿಕ್ಷಣ ಕಾಯ್ಕೆಯ ರಾಷ್ಟ್ರೀಯ ನೀತಿ- 1968ಕ್ಕೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಯಾವುದೇ ಕಾರಣಕ್ಕೂ ಪುರಸ್ಕಾರ ಮಾಡಲಾಗದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಕಡ್ಡಾಯಗೊಳಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿ ಆದೇಶಿಸುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ನೇತೃತ್ವದ ಪೀಠ ಹೇಳಿದೆ.

    ಇಂಗ್ಲಿಷ್‌ ಮೀಡಿಯಂ ಕಡ್ಡಾಯ ಮಾಡಿ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಎಎಸ್‌ಆರ್‌ಎಎಂ ಮೆಡಿಕಲ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ಹೊರಡಿಸಿದೆ. ದೆಹಲಿಯಲ್ಲಿ 1993ರಲ್ಲಿ ನಡೆದ ಶಿಕ್ಷಣ ಸಮ್ಮೇಳನದಲ್ಲಿ ಮಾತೃಭಾಷೆಯನ್ನೇ ಕಡ್ಡಾಯ ಮಾಡುವಂತೆ ಸೂಚಿಸಲಾಗಿದೆ. ಯುನೆಸ್ಕೊ ಕೂಡ ಮಾತೃಭಾಷೆಗೇ ಸಮ್ಮತಿ ಸೂಚಿಸಿದೆ. ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯುವುದು ಸುಲಭವಾಗುತ್ತದೆ ಎಂದಿದೆ. ಆದರೆ ಇವುಗಳ ವಿರುದ್ಧವಾಗಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅವರು ದೂರಿದ್ದರು.

    ಅವರ ವಾದವನ್ನು ಕೋರ್ಟ್‌ ಮಾನ್ಯ ಮಾಡಿದೆ. ‘ತಮಗೆ ಯಾವ ಮಾಧ್ಯಮ ಬೇಕು ಎಂದು ನಿರ್ಧಾರ ಮಾಡುವ ಅಧಿಕಾರ ಸಂವಿಧಾನದ ಅಡಿ ಪ್ರತಿಯೊಬ್ಬರಿಗೂ ಇದೆ. ಆದರೆ ಇದೇ ಮಾಧ್ಯಮದಲ್ಲಿ ಕಡ್ಡಾಯವಾಗಿ ಕಲಿಯಬೇಕು ಎಂದು ಸರ್ಕಾರಗಳು ಆದೇಶ ಹೊರಡಿಸುವುದು ಸರಿಯಲ್ಲ’ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts