More

    ಅಂತರಗಂಗೆಯಿಂದ ತುಂಬುತ್ತಿದೆ ಹೊಂಡ

    ಗುತ್ತಲ: ದಶಕದ ಹಿಂದೆ ಜಾನುವಾರುಗಳ ದಾಹ ತೀರಿಸುತ್ತಿದ್ದ ಪಟ್ಟಣದ ದೊಡ್ಡ ಹೊಂಡ ಈಗ ಸಂಪೂರ್ಣ ಕಲುಷಿತವಾಗಿದ್ದು, ಅಂತರಗಂಗೆಯಿಂದ ಆವೃತವಾಗಿದೆ.

    ಪಟ್ಟಣದ ಪುರಾತನ ಕೋಟೆ ಚೌಡೇಶ್ವರಿ ದೇವಸ್ಥಾನ ಹಾಗೂ ಚಂದ್ರಶೇಖರ ದೇವಸ್ಥಾನ ಮಧ್ಯೆ ಬರುವ ಈ ಸರ್ಕಾರಿ ಹೊಂಡ 9 ಎಕರೆ 6 ಗುಂಟೆ ಇದೆ. ಬಳಸಲು ಯೋಗ್ಯ ವಾಗಿದ್ದ ಹೊಂಡ ಸಂಪೂರ್ಣ ಅಂತರಗಂಗೆಯ ಸಸ್ಯ (ಪಿಶಾಚಿ ಕಳೆ) ಬೆಳೆದು ಎಲ್ಲಿಯೂ ನೀರು ಕಾಣದಂತೆ ಮುಚ್ಚಿ ಹೋಗಿದೆ. ಪಟ್ಟಣದ ಬಸ್ ನಿಲ್ದಾಣದಿಂದ ರಾಣೆಬೆನ್ನೂರ ರಸ್ತೆವರೆಗೆ ಇರುವ ಚರಂಡಿಗಳು, ವಿಎಸ್​ಎಸ್ ಸೊಸೈಟಿಯಿಂದ ಕಾಗಿನೆಲ್ಲಿಯವರ ಓಣಿ, ಎಲೆ ಪೇಟೆ ಯಿಂದ ಸಣ್ಣ ಹೊಂಡದವರೆಗಿನ ಬೀದಿಯ ಇಕ್ಕೆಲಗಳಲ್ಲಿ ಇರುವ ಚರಂಡಿಗಳ ನೀರು ನೇರವಾಗಿ ಈ ಹೊಂಡಕ್ಕೆ ಹರಿದು ಬರುತ್ತಿದೆ. ಚರಂಡಿಗೆ ಎಸೆದ ಪ್ಲಾಸ್ಟಿಕ್ ವಸ್ತುಗಳು ಹರಿದು ಬಂದು ಮತ್ತಷ್ಟು ಕಲುಷಿತವಾಗಿದೆ.

    ಹೊಂಡದ ಹತ್ತಿರದ ನಿವಾಸಿಗಳು ಹಾಗೂ ಇತರರು ಹೊಂಡದಲ್ಲಿ ಕಸ ಹಾಕುತ್ತಿದ್ದಾರೆ. ನೀರು ಸಂಪೂರ್ಣ ಕಲುಷಿತವಾಗಿರುವ ಕಾರಣ ದುರ್ನಾತ ಹರಡುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಸೊಳ್ಳೆಗಳ ಕಾಟವೂ ಅಧಿಕವಾಗಿದ್ದು, ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಸರ್ಕಾರಿ ಹೊಂಡದಲ್ಲಿ ಮೀನು ಸಾಕಾಣಿಕೆಗೆ 3 ವರ್ಷಕ್ಕೊಮ್ಮೆ ಹರಾಜು ನಡೆಯುತ್ತದೆ. ಇದರಿಂದ ಲಕ್ಷಾಂತರ ರೂ. ಆದಾಯ ಪಟ್ಟಣ ಪಂಚಾಯಿತಿಗೆ ಬರುತ್ತದೆ. ಆದರೆ, ಹೊಂಡದಲ್ಲೀಗ ತ್ಯಾಜ್ಯ ತುಂಬಿಕೊಂಡಿರುವುದರಿಂದ ಮೀನು ಸಾಕಣೆಗೆ ಗುತ್ತಿಗೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದು, ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂ. ಆದಾಯ ತಪ್ಪಲಿದೆ.

    ಈ ಹಿಂದೆ ಪ್ರತಿನಿತ್ಯ ನೂರಾರು ದನಕರುಗಳು ಈ ಹೊಂಡಲ್ಲಿ ದಿನನಿತ್ಯವೂ ನೀರು ಕುಡಿಯುತ್ತಿದ್ದವು. ಆದರೆ, ನೀರು ಕಲುಷಿತವಾಗಿರುವುದರಿಂದ ಜಾನುವಾರುಗಳು ಇತ್ತ ಸುಳಿಯುತ್ತಿಲ್ಲ. ಕೆಲವೊಮ್ಮ ಇಲ್ಲಿನ ನೀರು ಕುಡಿದ ಜಾನುವಾರುಗಳು ರೋಗಕ್ಕೆ ತುತ್ತಾದ ಹಾಗೂ ಸಾವನ್ನಪ್ಪಿದ ಪ್ರಸಂಗವೂ ನಡೆದಿದೆ.

    ಹೊಂಡಕ್ಕೆ ಬರುವ ಚರಂಡಿ ನೀರನ್ನು ಬೇರೆಡೆಗೆ ತಿರುಗಿಸಬೇಕು. ಹೊಂಡದಲ್ಲಿರುವ ಕಲುಷಿತ ನೀರು ಹಾಗೂ ಬೆಳೆದಿರುವ ಅಂತರಗಂಗೆ ಸಸ್ಯ ತೆಗೆದು ಸ್ವಚ್ಛ ಮಾಡಬೇಕು. ಹೊಂಡದ ಪ್ರದೇಶ ಅತಿಕ್ರಮಣವಾಗಿದ್ದು, ಅಳತೆ ಮಾಡಿಸಿ ಸುತ್ತಲೂ ತಂತಿ ಬೇಲಿ ನಿರ್ವಿುಸಿ ಹದ್ದು ಬಂದೋಬಸ್ತ್ ಮಾಡಿಸಬೇಕು. ಉದ್ಯಾನ ನಿರ್ವಿುಸಿ ವಾಯುವಿಹಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಈಗಾಗಲೇ 14ನೇ ಹಣಕಾಸಿನಲ್ಲಿ ರಾಣೆಬೆನ್ನೂರ ರಸ್ತೆಯಲ್ಲಿನ ಪೆಟ್ರೋಲ್ ಬಂಕ್​ವರೆಗೆ ಚರಂಡಿ ನಿರ್ವಿುಸಲಾಗಿದೆ. ಮುಂದೆ ಹೊಂಡಕ್ಕೆ ಹೋಗುತ್ತಿರುವ ನೀರನ್ನು ಅಡ್ಡಚರಂಡಿ (ಸಿ.ಡಿ.) ನಿರ್ಮಾಣ ಮಾಡಿ ಅದನ್ನು ಕುಂಬಾರಗಟ್ಟಿ ಹಳ್ಳಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ಹೊಂಡವನ್ನು ಪುನಃ ಸರ್ವೆ ಮಾಡಿಸಿ ಅದರ ಹದ್ದನ್ನು ಬಂದೋಬಸ್ತ್ ಮಾಡಲಾಗುವುದು. ಪ್ರಸ್ತುತ ಹೊಂಡದಲ್ಲಿನ ಅಂತರಗಂಗೆ ಸಸ್ಯ ಕಳೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

    | ಏಸು ಬೆಂಗಳೂರ

    ಮುಖ್ಯಾಧಿಕಾರಿ, ಪಪಂ ಗುತ್ತಲ

    ಹೊಂಡದ ನೀರು ಕಲುಷಿತವಾಗಿರುವ ಕಾರಣ ದನಕರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪಕ್ಕದಲ್ಲಿಯೇ ಇರುವ ಪುರಾತನ ಚಂದ್ರಶೇಖರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಲುಷಿತ ವಾತಾವರಣದಿಂದಾಗಿ ತೊಂದರೆಯಾಗಿದೆ. ಆದಷ್ಟು ಬೇಗ ಈ ಬಗ್ಗೆ ಪ.ಪಂ. ಆಡಳಿತ ಮಂಡಳಿ ಅಗತ್ಯ ಹಾಗೂ ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

    | ಸಿ.ಬಿ. ಕುರುವತ್ತಿಗೌಡರ

    ಜಿಪಂ ಮಾಜಿ ಸದಸ್ಯ

    ಹೊಂಡದ ದುರ್ನಾತದಿಂದ ನಮಗೆ ಇಲ್ಲಿ ವಾಸಿಸಲು ತೊಂದರೆಯಾಗುತ್ತಿದೆ. ಇಲ್ಲಿಯ ನೀರು ಪ್ರತಿನಿತ್ಯ ಕಲುಷಿತವಾಗುತ್ತಲೇ ಸಾಗಿದೆ. ಆದಷ್ಟು ಬೇಗ ಹೊಂಡ ಸ್ವಚ್ಛಗೊಳಿಸುವ ಕೆಲಸ ಆಗಬೇಕಿದೆ.

    | ಫೀರಸಾಬ್ ಹಾನಗಲ್

    ಹೊಂಡದ ಹತ್ತಿರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts